ವೈದ್ಯಕೀಯ ಪಾಸ್ ಪಡೆದು ಮದುವೆಗೆ ತೆರಳಿದವರಿಗೆ ತಕ್ಕ ಶಾಸ್ತಿಯನ್ನು ಪೊಲೀಸರು ಮಾಡಿದ್ದಾರೆ.
ಲಾಕ್‍ಡೌನ್ ಹಿನ್ನೆಲೆಯಲ್ಲಿ ವಾಹನ ಸಂಚಾರ, ಜನರ ಓಡಾಟ ನಿರ್ಭಂದಿಸಿರುವದರಿಂದ ಆರೋಗ್ಯ, ತುರ್ತು ವೈದ್ಯಕೀಯ ತಪಾಸಣೆಗಾಗಿ ಮಾನವೀಯತೆ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಅಗತ್ಯವಿರುವವರಿಗೆ ಪಾಸ್ ನೀಡುವ ಸೌಲಭ್ಯ ಕಲ್ಪಿಸಿದೆ.
ಧಾರವಾಡ ಜಿಲ್ಲೆಯ ನರೇಂದ್ರ ಗ್ರಾಮದಲ್ಲಿ ಡಿವೈಎಸ್‍ಪಿ ರವಿನಾಯಕ್ ರೌಂಡ್ಸ್ ನಲ್ಲಿದ್ದಾಗ ವೈದ್ಯಕೀಯ ಪಾಸ್ ಪಡೆದು ಮದುವೆ ಕಾರ್ಯ ಮುಗಿಸಿ ಬಂದ ವಾಹನವನ್ನು ಜಪ್ತಿ ಮಾಡಿದ್ದಾರೆ. ಪಾಸ್ ದುರಪಯೋಗ ಪಡಿಸಿಕೊಂಡಿರುವವರು ವಧುವಿನ ಕಡೆಯವರಾಗಿದ್ದು, ಉಪ್ಪಿನ ಬೇಟಗೇರಿ ಗ್ರಾಮದವರೆಂದು ತಿಳಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಮದುವೆ ಕಾರ್ಯ ಮುಗಿಸಿಕೊಂಡು ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಸ್ಥಾಪಿಸಿರುವ ಚೆಕ್ ಪೋಸ್ಟ್‍ಗಳನ್ನು ತಪ್ಪಿಸಿ, ಹುಬ್ಬಳ್ಳಿಯಿಂದ ಕೆಎ-22 ಝೆಡ್-5691 ಸಂಖ್ಯೆಯ ಇನೋವಾ ವಾಹನದಲ್ಲಿ ಒಂದು ಮಗು ಸೇರಿದಂತೆ ಒಟ್ಟು 9 ಜನ ಹೊರಟಿದ್ದರು. ಡಿವೈಎಸ್‍ಪಿ ವಾಹನ ನಿಲ್ಲಿಸಿ ಪರಿಶೀಲಿಸಿದಾಗ ತುರ್ತು ವೈದ್ಯಕೀಯ ಅಗತ್ಯಕ್ಕಾಗಿ ನೀಡಿದ್ದ ಪಾಸ್ ದುರುಪಯೋಗ ಮಾಡಿಕೊಂಡಿದ್ದು ಅವರ ಗಮನಕ್ಕೆ ಬಂದಿದೆ.
ಎಸ್‍ಪಿ ವರ್ತಿಕಾ ಕಟಿಯಾರ್ ಅವರ ಮಾರ್ಗದರ್ಶನದಲ್ಲಿ ತಕ್ಷಣ ಕಾರ್ಯಪ್ರವೃತರಾದ ಡಿವೈಎಸ್‍ಪಿ ರವಿ ನಾಯಕ ಅವರು ಇನೋವಾ ವಾಹನದಲ್ಲಿದ್ದ 9 ಜನರನ್ನು ವೈದ್ಯಕೀಯ ತಪಾಸಣೆಗಾಗಿ ಪೊಲೀಸ್ ವಾಹನದಲ್ಲಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನಿಸಿ, ಇನೋವಾ ವಾಹನವನ್ನು ಜಪ್ತಿ ಮಾಡಿದ್ದಾರೆ. ಅಲ್ಲದೇ ತಪಾಸಣೆ ನಂತರ ಈ ಎಲ್ಲ 9 ಜನರಿಗೆ ಹೋಮ್ ಕ್ವಾರಂಟೈನ್ ಕಡ್ಡಾಯಗೊಳ್ಳಿಸಿ, ಸಂಬಂಧಿಸಿದವರಿಗೆ ನಿರ್ದೇಶನ ನೀಡಿದ್ದಾರೆ.