ಐಟಿ-ಬಿಟಿ ಇಲಾಖೆಯಿಂದ ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ನಡೆಯುತ್ತಿರುವ ಬಿಯಾಂಡ್ ಬೆಂಗಳೂರು ಟೆಕ್ ಉತ್ಸವ ಕಾರ್ಯಕ್ರಮದಲ್ಲಿ ಸರ್ಕಾರ ಕಾರ್ಯವೈಖರಿ ಬಗ್ಗೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೈಗಾರಿಕಾ ಸ್ಥಾಪನೆಗೆ ಸರ್ಕಾರದಿಂದ ನಿರೀಕ್ಷಿತ ಪ್ರಮಾಣದ ಸಹಕಾರ ಸಿಗುತ್ತಿಲ್ಲ.
ಅನುಷ್ಠಾನ ಕಾರ್ಯ ಆಗುತ್ತಿಲ್ಲ. ಇದನ್ನು ಸಂಬಂಧಿಸಿದ ಸಚಿವರು, ಅಧಿಕಾರಿ ಕೆಲಸ ಮಾಡಿಸಬೇಕು. ಆದರೆ ಫೀಲ್ಡ್ ನಲ್ಲಿ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಕೈಗಾರಿಕಾ ಸ್ಥಾಪನೆಗೆ ಪೂರಕ ವಾತಾವರಣ ಮಾತಿನಲ್ಲಿ ಮಾಡಿದ್ರೆ ಸಾಲದು, ಕಾರ್ಯ ಆಗಬೇಕು ಎಂದು ಮುರುಗೇಶ್ ನಿರಾಣಿ ವಿರುದ್ಧ ಜಗದೀಶ್ ಶೆಟ್ಟರ್ ಅಸಮಾಧಾನ ಹೊರ ಹಾಕಿದ್ದಾರೆ.
ಕಿತ್ತೂರು ಬಳಿ ಇಂಟರ್ನ್ಯಾಷನಲ್ ಏರ್ಪೋರ್ಟ್ ಅಂತ ಕೈಗಾರಿಕಾ ಮಂತ್ರಿ ಹೇಳಿ ಹೋದರು. ಇದು ಸಾಧ್ಯಾನಾ? ಯಾವುದಾದರೂ ತಂಡ ಭೇಟಿ ಕೊಟ್ಟಿದ್ದನ್ನು ಸುಳ್ಳು ಹೇಳಿದ್ರೆ..? ಭೂಮಿ ಮಂಜೂರು ಮಾಡಲು ಎರಡು ಮೂರು ವರ್ಷಗಳಾಗುತ್ತಿದೆ. ವಿಶೇಷ ಹೂಡಿಕೆ ವಲಯ ಘೋಷಣೆ ಆಗಿದೆ, ಆದರೆ ಕಾರ್ಯಗತವಾಗಿಲ್ಲ. ಕೂಡಲೇ ಸಚಿವ ಸಂಪುಟದಲ್ಲಿ ಚರ್ಚಿಸಿ ಕಾರ್ಯಗತಗೊಳಿಸಿ ಎಂದರು.
ಅಶ್ವಥ್ ನಾರಾಯಣ ತಾವು ಕೆಲಸ ಮಾಡಿಸಬೇಕು. ನಾನು ಸಿಎಂ ಆದಾಗ ಇನ್ಫೋಸಿಸ್ ಗೆ ಜಾಗ ನೀಡಿದ್ದೆ. ಆದರೇ ನಿರೀಕ್ಷಿತ ಪ್ರಮಾಣದಲ್ಲಿ ಕಾರ್ಯಾರಂಭ ಮಾಡಲಿಲ್ಲ. ಕೇವಲ ಕಾರ್ಯಕ್ರಮ ಮಾಡಿ ಹೋಗುತ್ತೇವೆ ಕೆಲಸಗಳು ಆಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.