ಮಂಡ್ಯ: ಈ ಬಾರಿ ಲೋಕಸಭೆ ಚುನಾವಣೆಗೆ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್ ನಾಯಕರ ಬಗ್ಗೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.
ರಾಜ್ಯದಲ್ಲಿ ಲೋಕಸಭೆ ಚುನಾವಣೆಗೆ ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡಿದೆ. ಈಗಾಗಲೇ ಉಭಯ ಪಕ್ಷಗಳ ಸಭೆಗಳಲ್ಲಿ ಜೆಡಿಎಸ್ ನಾಯಕ ಎಚ್ ಡಿ ಕುಮಾರಸ್ವಾಮಿ ಬಿಜೆಪಿಯ ಕೇಸರಿ ಶಾಲು ಹಾಕಿಕೊಂಡಿದ್ದರು. ಇದರ ಬಗ್ಗೆ ಡಿಕೆ ಶಿವಕುಮಾರ್ ವ್ಯಂಗ್ಯ ಮಾಡಿದ್ದಾರೆ.
ಮಂಡ್ಯ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ನಾಮಪತ್ರ ಸಲ್ಲಿಕೆ ವೇಳೆ ರೋಡ್ ಶೋನಲ್ಲಿ ಭಾಗಿಯಾದ ಡಿಕೆಶಿ ಈ ರಾಜಕಾರಣ ನೋಡಿದರೆ ನಾಚಿಕೆಯಾಗುತ್ತಿದೆ. ಪುಟ್ಟರಾಜು ಟಿಕೆಟ್ ಗಾಗಿ ಕಾದು ಕೂತಿದ್ದ. ಆದರೆ ಈಗ ಕುಮಾರಸ್ವಾಮಿ ಕಮಲಧ್ವಜ ಹಾಕಿಕೊಂಡಿದ್ದಾರೆ. ಆ ಮೂಲಕ ಅವರು ಬದುಕಿದ್ದೂ ಸತ್ತಂತೆ ಎಂದಿದ್ದಾರೆ.
ಇನ್ನು ಕಳೆದ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಕುಮಾರಸ್ವಾಮಿಗೆ ಸರ್ಕಾರ ರಚಿಸಲು ಸಹಾಯ ಮಾಡಿದ್ದೆ. ಆಗ ಅವರಿಗೆ ಅದನ್ನು ಉಳಿಸಿಕೊಳ್ಳಲು ಸಾಧ‍್ಯವಾಗಿಲ್ಲ. ಆದರೆ ಈಗ ಅಂದು ಅಧಿಕಾರ ತೆಗೆದವರ ಜೊತೆಗೇ ಹೋಗುತ್ತಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.