ಬೆಂಗಳೂರು: ಸಂವಿಧಾನ ಬದಲಿಸುವ ಮಾತನಾಡಿ ಕಾಂಗ್ರೆಸ್ ಉನ್ನತ ನಾಯಕ ರಾಹುಲ್ ಗಾಂಧಿಗೇ ಡಿಸಿಎಂ ಡಿಕೆ ಶಿವಕುಮಾರ್ ಮುಜುಗರ ತಂದಿಟ್ಟರಾ? ಹೀಗೊಂದು ಚರ್ಚೆ ಇದೀಗ ಶುರುವಾಗಿದೆ.
ಸಂವಾದ ಕಾರ್ಯಕ್ರಮವೊಂದರಲ್ಲಿ ಡಿಕೆ ಶಿವಕುಮಾರ್, ಮುಸ್ಲಿಮರಿಗಾಗಿ ಸಂವಿಧಾನವೂ ಬದಲಾಗುತ್ತದೆ ಎಂಬರ್ಥದಲ್ಲಿ ಹೇಳಿಕೆ ನೀಡಿದ್ದು ಈಗ ಭಾರೀ ವಿವಾದಕ್ಕೆ ಕಾರಣವಾಗಿದೆ. ಇದನ್ನೇ ಬಿಜೆಪಿ ಪ್ರಮುಖ ಅಸ್ತ್ರ ಮಾಡಿಕೊಂಡಿದೆ.
ಈ ಬಗ್ಗೆ ಲೇವಡಿ ಮಾಡಿರುವ ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ, ಎಲ್ಲೇ ಹೋದ್ರೂ ಸಂವಿಧಾನ ಪುಸ್ತಕ ಹಿಡಿದು ಪ್ರದರ್ಶನ ಮಾಡುವ ರಾಹುಲ್ ಗಾಂಧಿಗೆ ಡಿಕೆ ಶಿವಕುಮಾರ್ ಈ ಮಾತು ಹೇಳಲಿ ಎಂದು ಟಾಂಗ್ ಕೊಟ್ಟಿದ್ದಾರೆ.
ಇನ್ನು, ಡಿಕೆಶಿ ಇಂತಹದ್ದೊಂದು ಹೇಳಿಕೆ ನೀಡಿದ್ದಾರೆ ಎಂದು ಸುದ್ದಿಯಾಗುತ್ತಿದ್ದಂತೇ ಹೈಕಮಾಂಡ್ ಅವರಿಗೆ ಕರೆ ಮಾಡಿ ವಿಚಾರಣೆ ನಡೆಸಿದೆ ಎಂದೂ ಹೇಳಲಾಗುತ್ತಿದೆ. ರಾಹುಲ್ ಗಾಂಧಿ ಇದುವರೆಗೆ ಕೇಂದ್ರ ಸರ್ಕಾರದ ವಿರುದ್ಧ ಸಂವಿಧಾನ ಪುಸ್ತಕ ಹಿಡಿದುಕೊಂಡು ವಾಗ್ದಾಳಿ ನಡೆಸುತ್ತಲೇ ಇದ್ದರು. ಆದರೆ ಈಗ ಅವರದ್ದೇ ಪಕ್ಷದ ನಾಯಕರು ಸಂವಿಧಾನ ಬದಲಿಸುವ ಹೇಳಿಕೆ ನೀಡಿರುವುದು ಅವರಿಗೇ ಮುಜುಗರ ತಂದಿಟ್ಟಂತೆ. ಇನ್ನು, ತಮ್ಮ ಹೇಳಿಕೆ ವಿವಾದವಾಗುತ್ತಿದ್ದಂತೇ ಸ್ಪಷ್ಟನೆ ನೀಡಿರುವ ಡಿಕೆಶಿ ನಾನು ಸಂವಿಧಾನ ಬದಲಿಸುವುದಾಗಿ ಹೇಳಿಯೇ ಇಲ್ಲ ಎಂದಿದ್ದಾರೆ.