ತಲಕಾವೇರಿ: ಇಂದು ಸಂಜೆ ನಡೆಯಲಿರುವ ಕಾವೇರಿ ಆರತಿ ಕಾರ್ಯಕ್ರಮಕ್ಕೆ ಮುನ್ನ ಇಂದು ಡಿಸಿಎಂ ಡಿಕೆ ಶಿವಕುಮಾರ್ ತಲಕಾವೇರಿಗೆ ಭೇಟಿ ನೀಡಿ ಪುಣ್ಯಸ್ನಾನ ಮಾಡಿದ್ದಾರೆ. ಕುಂಭಮೇಳದ ಬಳಿಕ ಈಗ ಕಾವೇರಿ ಪುಣ್ಯಸ್ನಾನ ಮಾಡಿ ತಮ್ಮ ಧಾರ್ಮಿಕ ನಂಬಿಕೆಯನ್ನು ಅನಾವರಣಗೊಳಿಸಿದ್ದಾರೆ ಡಿಕೆಶಿ.
ಡಿಕೆ ಶಿವಕುಮಾರ್ ಇತ್ತೀಚೆಗಿನ ದಿನಗಳಲ್ಲಿ ಟೆಂಪಲ್ ರನ್ ಮಾಡುವುದು ಜಾಸ್ತಿಯಾಗಿದೆ. ಈ ಬಗ್ಗೆ ವಿಪಕ್ಷಗಳ ವ್ಯಂಗ್ಯಕ್ಕೆ ಉತ್ತರಿಸಿದ್ದ ಡಿಕೆಶಿ ನನ್ನ ಧರ್ಮ ನನ್ನ ಇಷ್ಟ. ನನ್ನ ಧರ್ಮವನ್ನು ನಾನು ಪಾಲಿಸುತ್ತಿದ್ದೇನೆ ಎಂದಿದ್ದರು.
ಇದೀಗ ಇಂದು ಸ್ಯಾಂಕಿ ಕೆರೆಯಲ್ಲಿ ವಿಶ್ವ ಜಲದಿನದ ಅಂಗವಾಗಿ ನಡೆಯಲಿರುವ ಕಾವೇರಿ ಆರತಿ ಕಾರ್ಯಕ್ರಮದಲ್ಲಿ ಭಾಗಿಯಾಗುವ ಮುನ್ನ ಡಿಕೆಶಿ ತಲಕಾವೇರಿಗೆ ಭೇಟಿ ನೀಡಿ ಪುಣ್ಯಸ್ನಾನ, ಪೂಜೆ ಮಾಡಿದ್ದಾರೆ. ಕಾವೇರಿ, ಸುಜ್ಯೋತಿ, ಕನ್ನಿಕಾ ನದಿಗಳ ತ್ರಿವೇಣಿ ಸಂಗಮಕ್ಕೆ ಪೂಜೆ ಸಲ್ಲಿಸಿದ್ದಾರೆ. ಇಂದು ನಡೆಯಲಿರುವ ಕಾವೇರಿ ಆರತಿ ಕಾರ್ಯಕ್ರಮಕ್ಕೆ ಇಲ್ಲಿಂದ ನೀರು ಸಂಗ್ರಹಿಸಿ ಕೊಂಡೊಯ್ಯಲಾಗುತ್ತದೆ. ಈ ವರ್ಣರಂಜಿತ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಮುಕ್ತವಾಗಿ ಪಾಲ್ಗೊಳ್ಳಬಹುದಾಗಿದೆ.