ದೆಹಲಿ: ಮಾಧ್ಯಮಗಳ ಮುಂದೆ ಮಾಡುವ ಚರ್ಚೆಯಿಂದ ರಾಜಕಾರಣ ನಡೆಯುವುದಿಲ್ಲ ಎಂದು ಡಿಸಿಎಂ ಡಿ. ಕೆ. ಶಿವಕುಮಾರ್ ಅವರು ಹೇಳಿದರು. ದೆಹಲಿಯ ಕರ್ನಾಟಕ ಭವನದಲ್ಲಿ ಮಾಧ್ಯಮಗಳ ಮಾಧ್ಯಮಗಳ ಪ್ರಶ್ನೆಗಳಿಗೆ ಶುಕ್ರವಾರ ಪ್ರತಿಕ್ರಿಯೆ ನೀಡಿದರು.
ಕೆಪಿಸಿಸಿ ಅಧ್ಯಕ್ಷ ಗಾದಿಗೆ ನಾನೂ ಆಕಾಂಕ್ಷಿ ಎನ್ನುವ ಸಚಿವ ಕೆ.ಎನ್.ರಾಜಣ್ಣ ಹಾಗೂ ಸತೀಶ್ ಜಾರಕಿಹೊಳಿ ಅವರ ಹೆಸರು ಮುನ್ನೆಲೆಗೆ ಬಂದಿರುವ ಬಗ್ಗೆ ಪ್ರಶ್ನಿಸಿದಾಗ, "ಮಾಧ್ಯಮಗಳ ಮುಂದೆ ರಾಜಕೀಯ ಚರ್ಚೆ ಮಾಡುವುದು ಯಾವ ಪಕ್ಷದವರಿಗೂ ಹಾಗೂ ಯಾರಿಗೂ ಸೂಕ್ತವಾದುದಲ್ಲ" ಎಂದು ಅಭಿಪ್ರಾಯಪಟ್ಟರು.
ಸಂಪುಟ ವಿಸ್ತರಣೆ ಸಂದರ್ಭ ಒದಗಿ ಬಂದಿಲ್ಲ
ಸಂಪುಟ ವಿಸ್ತರಣೆಯ ಬಗ್ಗೆ ಕೇಳಿದಾಗ, "ಸಂಪುಟ ವಿಸ್ತರಣೆಯ ಸಂದರ್ಭ ಬಂದಾಗ ಆಗುತ್ತದೆ. ಈಗ ಆ ಸಂದರ್ಭ ಒದಗಿ ಬಂದಿಲ್ಲವಲ್ಲ. ಒಂದು ಸಚಿವ ಸ್ಥಾನ ಖಾಲಿ ಇದ್ದು ಅದನ್ನು ತುಂಬುವ ಬಗ್ಗೆ ಚರ್ಚೆ ನಡೆದಿಲ್ಲ" ಎಂದು ತಿಳಿಸಿದರು.
ನೀರಾವರಿ ವಿಚಾರವಾಗಿ ಮನವಿ ಸಲ್ಲಿಸಲು ಪ್ರಧಾನಿಗಳ ಭೇಟಿ
ಪ್ರಧಾನಿ ಮೋದಿ ಅವರ ಭೇಟಿಯ ಬಗ್ಗೆ ಕೇಳಿದಾಗ, "ರಾಜ್ಯದ ವಿಚಾರಗಳು ಹಾಗೂ ಮುಖ್ಯವಾಗಿ ನೀರಾವರಿ ವಿಚಾರವಾಗಿ ಮನವಿಯನ್ನು ಸಲ್ಲಿಸಲು ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಲಾಗುತ್ತಿದೆ. ಗುರುವಾರದಂದು ಕೇಂದ್ರ ಅರಣ್ಯ ಸಚಿವರಾದ ಭೂಪೇಂದರ್ ಯಾದವ್ ಹಾಗೂ ಪ್ರಹ್ಲಾದ್ ಜೋಶಿ ಅವರನ್ನು ಭೇಟಿಯಾಗಿ ಕಳಸಾ - ಬಂಡೂರಿ ವಿಚಾರವಾಗಿ ಪರಿಸರ ಇಲಾಖೆಯಿಂದ ಬಾಕಿ ಇರುವ ಅನುಮತಿ ಹಾಗೂ ಅಡೆತಡೆಗಳನ್ನು ನಿವಾರಿಸಬೇಕು ಎಂದು ಮನವಿ ಸಲ್ಲಿಸಿದ್ದೆವು. ಇದಕ್ಕೆ ಇಬ್ಬರೂ ಸಕಾರಾತ್ಮಕವಾಗಿ ಸ್ಪಂದಿಸಿದ್ದರು. ವನ್ಯಜೀವಿ ಮಂಡಳಿಗೆ ಪ್ರಧಾನಿ ಅವರೇ ಅಧ್ಯಕ್ಷರಾಗಿರುವ ಕಾರಣಕ್ಕೆ ಅವರಿಗೂ ಮನವಿ ಸಲ್ಲಿಸಲಾಗುವುದು" ಎಂದರು.
"ರಾಂಚಿಯಲ್ಲಿ ನಡೆದ ಹೇಮಂತ್ ಸೋರೆನ್ ಅವರ ಮುಖ್ಯಮಂತ್ರಿ ಪ್ರಮಾಣವಚನ ಕಾರ್ಯಕ್ರಮದಲ್ಲಿ ಪಕ್ಷದ ಪರವಾಗಿ ರಾಹುಲ್ ಗಾಂಧಿ ಅವರು, ಮಲ್ಲಿಕಾರ್ಜುನ ಖರ್ಗೆ ಅವರು ನಾನು ಸೇರಿದಂತೆ ಹಲವಾರು ಮುಖಂಡರು ಭಾಗವಹಿಸಿದ್ದರು. ಇಂಡಿಯಾ ಒಕ್ಕೂಟದ ನಾಯಕರು ಭಾಗವಸಿ ಹೇಮಂತ್ ಅವರಿಗೆ ಶುಭ ಕೋರಿದೆವು" ಎಂದು ತಿಳಿಸಿದರು.