Publish Date: Sat, 10 Aug 2024 (17:40 IST)
Updated Date: Sat, 10 Aug 2024 (17:42 IST)
ಬೆಂಗಳೂರು: ಬಿಜೆಪಿ ಜೆಡಿಎಸ್ ಪಾದಯಾತ್ರೆ ಈಗ ಜೆಡಿಎಸ್ ನಾಯಕ ಕುಮಾರಸ್ವಾಮಿ ಮತ್ತು ಕಾಂಗ್ರೆಸ್ ನಾಯಕ ಡಿಕೆ ಶಿವಕುಮಾರ್ ನಡುವಿನ ವಾಕ್ಸಮರಕ್ಕೆ ವೇದಿಕೆಯಾಗಿದೆ. ಕುಮಾರಸ್ವಾಮಿ ಒಬ್ಬರೇ ಗಂಡಸು ನಾವೆಲ್ಲಾ ಅಲ್ಲ ಎಂದು ಇಂದು ಡಿಕೆಶಿ ಟಾಂಗ್ ಕೊಟ್ಟಿದ್ದಾರೆ.
ಇಬ್ಬರೂ ನಾಯಕರು ಗಂಡಸ್ತನದ ಬಗ್ಗೆ ಹೇಳಿಕೆ, ತಿರುಗೇಟು ಕೊಟ್ಟುಕೊಂಡಿದ್ದಾರೆ. ರಾಜಕೀಯ ಮಾಡಿದರೆ ಗಂಡಸ್ತನದ ರಾಜಕೀಯ ಮಾಡಬೇಕು ಎಂದು ಎಚ್ ಡಿ ಕುಮಾರಸ್ವಾಮಿ ನಿನ್ನೆ ಹೇಳಿದ್ದರು. ಅದಕ್ಕೆ ಇಂದು ಡಿಕೆ ಶಿವಕುಮಾರ್ ಅವರದೇ ಶೈಲಿಯಲ್ಲಿ ತಿರುಗೇಟನ್ನು ನೀಡಿದ್ದಾರೆ.
ನೋಡ್ರಪ್ಪಾ ಕುಮಾರಸ್ವಾಮಿ ಒಬ್ಬರೇ ಗಂಡಸರು, ನಾವೆಲ್ಲಾ ಗಂಡಸರಲ್ಲ. ಅವರ ಗಂಡಸ್ತನ ಎಂತಹದ್ದು ಎಂದು ಹಾಸನದಲ್ಲಿ ಪೆನ್ ಡ್ರೈವ್ ನಲ್ಲಿ ಓಡಾಡ್ತಿದೆ ಎಂದು ವ್ಯಂಗ್ಯ ಮಾಡಿದ್ದಾರೆ. ನಾನು ಪೆನ್ ಡ್ರೈವ್ ಹಂಚಿದ್ದು ಎಂದು ಸುಳ್ಳು ಪ್ರಚಾರ ಮಾಡಿದರು. ಅವರೇ ಅವರ ಮನೆ ಮಗನ ಪೆನ್ ಡ್ರೈವ್ ಹಂಚಿದ್ದು. ಈ ಹಿಂದೆ ಅಮಿತ್ ಶಾ, ಮೋದಿ ಬಗ್ಗೆ ಏನೆಲ್ಲಾ ಹೇಳಿದರು ಎಂದು ನಮಗೆ ಗೊತ್ತಿಲ್ವಾ? ಎಂದು ಡಿಕೆಶಿ ಹೇಳಿದ್ದಾರೆ.
ಅಷ್ಟೇ ಅಲ್ಲದೆ, ಈ ಹಿಂದೆ ಮೈತ್ರಿ ಸರ್ಕಾರವಿದ್ದಾಗ ಮಗ ಸೋತ ಎಂಬ ಕಾರಣಕ್ಕೆ ನಮ್ಮ ಮೇಲೆ ಗದಾಪ್ರಹಾರ ಮಾಡಿದ್ರು. ನಾನು ಎಂದಿಗೂ ನೇರಾ ನೇರ ಯುದ್ಧ ಮಾಡುವವನು. ಹಿಂದಿನಿಂದ ಒಂದು ರಾಜಕಾರಣ ಮಾಡಿಲ್ಲ. ಕುಮಾರಸ್ವಾಮಿಯವರ ಈ ಹಿಂದೆ ಮಿಲಿಟರಿಯವರು ನಮ್ಮನ್ನು ಜೈಲಿಗೆ ಕರ್ಕೊಂಡು ಹೋಗ್ತಾರೆ ಎಂದರು, ನಮ್ಮ ಮೇಲೆ ಸುಳ್ಳು ಕೇಸ್ ಹಾಕಿಸಿದರು ಎಂದು ವಾಗ್ದಾಳಿ ನಡೆಸಿದ್ದಾರೆ.