Publish Date: Fri, 19 Dec 2025 (16:02 IST)
Updated Date: Fri, 19 Dec 2025 (16:04 IST)
ಬೆಳಗಾವಿ: ಅಧಿಕಾರ ಹಂಚಿಕೆ ಕಿತ್ತಾಟದ ನಡುವೆ ಇಂದು ಅಂಕೋಲದ ಜಗದೀಶ್ವರಿ ಸನ್ನಿಧಿಗೆ ಭೇಟಿ ಕೊಟ್ಟ ಡಿಸಿಎಂ ಡಿಕೆ ಶಿವಕುಮಾರ್ ಅಧಿಕಾರ ಹಸ್ತಾಂತರದ ಗುಟ್ಟು ಬಿಚ್ಚಿಟ್ಟಿದ್ದಾರೆ.
ದೇವಿ ದರ್ಶನದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಈ ದೇವಿಯಲ್ಲಿ ನನ್ನ ಕುಟುಂಬದ ಕೆಲಸದ ಬಗ್ಗೆ ಪ್ರಾರ್ಥನೆ ಮಾಡಿದ್ದೆ. ನನ್ನ ಇಷ್ಟ ನೆರವೇರಿತು. ಆ ತಾಯಿಗ ಮತ್ತೆ ಬರುತ್ತೇನೆ ಎಂದು ಹೇಳಿದ್ದೆ. ಅದರಂತೆ ಈಗ ಮತ್ತೆ ಬಂದು ಆ ತಾಯಿಯ ಪೂಜೆ ಮಾಡಿದ್ದೇನೆ. ಈಗ ತಾಯಿಗೆ ಆಶೀರ್ವಾದ ಮಾಡು ತಾಯೆ ಎಂದು ಕೇಳಲು ಬಂದಿದ್ದೇನೆ. ನನಗೆ, ರಾಜ್ಯಕ್ಕೆ, ನನ್ನ ನಂಬಿಕೊಂಡವರಿಗೆ ಒಳ್ಳೆಯದಾಗಲಿ ಎಂದು ಕೇಳಿಕೊಂಡಿದ್ದೇನೆ. ಹೀಗಾಗಿ ಹಸನ್ಮುಖನಾಗಿ ಇಲ್ಲಿಂದ ನಿರ್ಗಮಿಸುತ್ತೇನೆ ಎಂದರು.
ಇನ್ನು, ನನ್ನ ಪರ ಹೈಕಮಾಂಡ್ ಇದೆ ಎಂದು ಇಂದು ಸದನದಲ್ಲಿ ಘೋಷಿಸಿದ್ದ ಸಿಎಂ ಸಿದ್ದರಾಮಯ್ಯ ಬಗ್ಗೆ ಮಾತನಾಡಿದ ಅವರು ನಾನು ಯಾವತ್ತೂ ಅವರ ಪರ ಹೈಕಮಾಂಡ್ ಇಲ್ಲ ಅಂತ ಹೇಳಿಲ್ಲ. ಪಕ್ಷ ನಿರ್ಧಾರ ಮಾಡಿದ ಪ್ರಕಾರ ಇದ್ದೇವೆ. ನಾನು, ಅವರು ಒಂದು ಒಪ್ಪಂದಕ್ಕೆ ಬಂದಿದ್ದೇವೆ. ಹೈಕಮಾಂಡ್ ಒಂದು ಒಪ್ಪಂದಕ್ಕೆ ನಮ್ಮನ್ನು ತಂದಿದೆ. ಆ ಪ್ರಕಾರ, ನಾನು, ಅವರು ನಡೆದುಕೊಂಡು ಹೋಗುತ್ತೇವೆ.
ನಮ್ಮಲ್ಲಿ ಸಿಎಂ ಬದಲಾವಣೆ ಬಗ್ಗೆ ಯಾವ ಚರ್ಚೆ ಇಲ್ಲ. ಪಕ್ಷ ಯಾವ ರೀತಿ ಹೇಳುತ್ತದೋ ಆ ಪ್ರಕಾರ ನಡೆದುಕೊಳ್ಳುತ್ತೇವೆ. ನಾನು ತಾಯಿಯ ಬಳಿ ಏನು ಪ್ರಾರ್ಥನೆ ಮಾಡಿದ್ದೇನೆ ಎನ್ನುವುದು ನನಗೂ, ದೇವಿಗೂ ಮಾತ್ರ ಗೊತ್ತಿರೋದು ಎಂದಿದ್ದಾರೆ.