Select Your Language

Notifications

webdunia
webdunia
webdunia
webdunia

ರಾಹುಲ್ ಗಾಂಧಿ ಮತಕಳ್ಳತನದ ಪ್ರತಿಭಟನೆ ಯಾವಾಗ ಡಿಕೆ ಶಿವಕುಮಾರ್ ಹೇಳಿದ್ದೇನು

DK Shivakumar

Krishnaveni K

ಬೆಂಗಳೂರು , ಗುರುವಾರ, 31 ಜುಲೈ 2025 (09:18 IST)
ಬೆಂಗಳೂರು: ಆಗಸ್ಟ್ 5ರಂದು ರಾಹುಲ್ ಗಾಂಧಿ ಅವರು ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ಎಐಸಿಸಿ ಪ್ರಧಾನ ಕಾರ್ಯದರ್ಶಿಗಳು ಪಕ್ಷದ ಮುಖಂಡರ ಸಭೆ ಮಾಡಲಿದ್ದು, ಸಭೆ ಬಳಿಕ ಕಾರ್ಯಕ್ರಮದ ಸ್ವರೂಪ ಹಾಗೂ ಸ್ಥಳದ ಬಗ್ಗೆ ತೀರ್ಮಾನ ಮಾಡಲಾಗುವುದು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
 
ಕೆಪಿಸಿಸಿ ಕಚೇರಿ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಬುಧವಾರ ಪ್ರತಿಕ್ರಿಯೆ ನೀಡಿದರು.
 
ರಾಹುಲ್ ಗಾಂಧಿ ಅವರು ಕರ್ನಾಟಕಕ್ಕೆ ಆಗಮಿಸುತ್ತಿರುವ ಬಗ್ಗೆ ಕೇಳಿದಾಗ, “ಎಐಸಿಸಿ ಪ್ರಧಾನ ಕಾರ್ಯದರ್ಶಿಗಳು ಗುರುವಾರ ಶಾಸಕರು, ಎಂಎಲ್ ಸಿಗಳು, ಪರಾಜಿತ ಅಭ್ಯರ್ಥಿಗಳು, ಕೆಪಿಸಿಸಿ ಪದಾಧಿಕಾರಿಗಳು, ಪಕ್ಷದ ವಿವಿಧ ಘಟಕಗಳ ಅಧ್ಯಕ್ಷರ ಜೊತೆ ಸಭೆ ಮಾಡಲಿದ್ದಾರೆ. ಈ ಸಭೆಯಲ್ಲಿ ಮುಖ್ಯಮಂತ್ರಿಗಳು ಭಾಗವಹಿಸಲಿದ್ದಾರೆ. ಈ ಸಭೆ ಬಳಿಕ ಸ್ಥಳ ತೀರ್ಮಾನಿಸಲಾಗುವುದು. ನಾವು ಕೆಲವು ಸ್ಥಳಗಳ ಸಲಹೆ ನೀಡಿದ್ದು, ಪ್ರಧಾನ ಕಾರ್ಯದರ್ಶಿಗಳು ಸ್ಥಳ ಪರಿಶೀಲನೆ ಮಾಡಲಿದ್ದಾರೆ. ಈ ಕಾರ್ಯಕ್ರಮಕ್ಕೆ ಎಲ್ಲಾ ಕ್ಷೇತ್ರದಿಂದ ಜನ ಬರಬೇಕು. ರಾಜ್ಯದ ಎಲ್ಲಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಪರಾಜಿತ ಅಭ್ಯರ್ಥಿಗಳು ಹಾಗೂ ನಾಯಕರು ಕಡ್ಡಾಯವಾಗಿ 5ರಂದು ಆಗಮಿಸಬೇಕು. ಈ ಸಂಬಂಧ ಆಗಸ್ಟ್ 3ರ ಒಳಗಾಗಿ ಬ್ಲಾಕ್ ಮಟ್ಟದಲ್ಲಿ ಕಾರ್ಯಕರ್ತರ ಸಭೆ ಮಾಡಬೇಕು. ಶಾಸಕರು ತಮ್ಮ ಕ್ಷೇತ್ರಗಳಲ್ಲಿ ಸಭೆ ಮಾಡಬೇಕು” ಎಂದು ತಿಳಿಸಿದರು.
 
ರ್ಯಾಲಿ ಮಾಡುತ್ತೀರೋ, ಸಮಾವೇಶ ಮಾಡುತ್ತೀರೋ ಎಂಬ ಪ್ರಶ್ನೆಗೆ, “ನಾನು ನಿನ್ನೆ ಪೊಲೀಸ್ ಅಧಿಕಾರಿಗಳ ಜತೆ ಚರ್ಚೆ ಮಾಡಿದ್ದು, ಇಲ್ಲಿ ಅನೇಕ ತಾಂತ್ರಿಕ ಅಂಶಗಳಿವೆ. ನ್ಯಾಯಾಲಯದ ಕೆಲವು ಷರತ್ತುಗಳಿವೆ. ಅವುಗಳ ಬಗ್ಗೆ ಮಾಹಿತಿ ನೀಡಿದ್ದೇನೆ. ಹೀಗಾಗಿ ನಮ್ಮ ನಾಯಕರ ಜೊತೆ ಚರ್ಚಿಸಿ ತೀರ್ಮಾನ ಮಾಡಲಾಗುವುದು. ಈ ವಿಚಾರವಾಗಿ ಈಗಲೇ ಹೆಚ್ಚಿನ ಮಾಹಿತಿ ನೀಡುವುದಿಲ್ಲ. ಲೋಕಸಭೆ ಚುನಾವಣೆಯಲ್ಲಿ ಹೇಗೆ ಅಕ್ರಮ ನಡೆಸಲಾಗಿದೆ ಎಂಬ ಬಗ್ಗೆ ನಮ್ಮ ನಾಯಕರೇ ನಿಮಗೆ ಮಾಹಿತಿ ನೀಡಲಿದ್ದಾರೆ” ಎಂದರು.
 
ರಾಹುಲ್ ಗಾಂಧಿ ರಾಜ್ಯಕ್ಕೆ ಆಗಮಿಸುತ್ತಿರುವ ಬಗ್ಗೆ ಬಿಜೆಪಿ ವಿರೋಧ ವ್ಯಕ್ತಪಡಿಸುತ್ತಿರುವ ಬಗ್ಗೆ ಕೇಳಿದಾಗ, “ನಮ್ಮ ಪಕ್ಷದ ಸಂಶೋಧನಾ ವಿಭಾಗವು ಲೋಕಸಭೆಯಲ್ಲಿ ಆಗಿರುವ ಅಕ್ರಮಗಳ ಬಗ್ಗೆ ನಮ್ಮ ನಾಯಕ ರಾಹುಲ್ ಗಾಂಧಿ ಅವರ ಗಮನಕ್ಕೆ ತಂದಿದೆ. ಈ ವಿಚಾರವಾಗಿ ಅವರು ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ಸಚಿವರು, ಶಾಸಕರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, 5ರಂದು ನಡೆಯಲಿರುವ ಕಾರ್ಯಕ್ರಮಕ್ಕೆ ಆಗಮಿಸಬೇಕು” ಎಂದು ತಿಳಿಸಿದರು.
 
ಬಿಜೆಪಿ ಕೂಡ ಹೋರಾಟ ಮಾಡುವುದಾಗಿ ತಿಳಿಸಿರುವ ಬಗ್ಗೆ ಕೇಳಿದಾಗ, “ಅವರು ಹೋರಾಟ ಮಾಡಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅವರಿಗೆ ಹೋರಾಟ ಮಾಡಬೇಡ ಎಂದು ಹೇಳಲು ಸಾಧ್ಯವೇ? ಅವರ ಹೋರಾಟವನ್ನು ನಾನೇಕೆ ಟೀಕೆ ಮಾಡಲಿ? ಅವರ ವಿಚಾರ ಅವರು ಹೇಳಲಿ, ನಮ್ಮ ವಿಚಾರ ನಾವು ಹೇಳುತ್ತೇವೆ. ಮಾಧ್ಯಮಗಳಿರುವುದು ಎಲ್ಲರ ವಿಚಾರಗಳನ್ನು ಪ್ರಚಾರ ಮಾಡುವುದಕ್ಕೆ. ಆ ಕೆಲಸ ನೀವು ಮಾಡಿ” ಎಂದರು.
 
ಚುನಾವಣೆ ನಡೆಯುತ್ತಿರುವುದು ಬಿಹಾರದಲ್ಲಿ, ರಾಹುಲ್ ಗಾಂಧಿ ಕರ್ನಾಟಕಕ್ಕೆ ಬರುತ್ತಿರುವುದೇಕೆ ಎಂಬ ಬಿಜೆಪಿ ಪ್ರಶ್ನೆ ಬಗ್ಗೆ ಕೇಳಿದಾಗ, “ಇದು ಬಿಹಾರ ಅಥವಾ ಕರ್ನಾಟಕದ ಪ್ರಶ್ನೆಯಲ್ಲ. ಮತಗಳ ದುರ್ಬಳಕೆ, ಅಕ್ರಮದ ವಿಚಾರ. ವಿಧಾನಸಭೆ ಚುನಾವಣೆಯಲ್ಲೂ ನಮ್ಮ ಅಭ್ಯರ್ಥಿ ನಾಗೇಶ್ ಅವರು ಅಕ್ರಮದ ಬಗ್ಗೆ ಧ್ವನಿ ಎತ್ತಿದ್ದರು. ಆದರೂ ನಾವು ಬಹುಮತ ಪಡೆದೆವು. ಲೋಕಸಭೆಯಲ್ಲಿ ಅಕ್ರಮ ನಡೆದಿದ್ದು ಕೆಲವು ಕ್ಷೇತ್ರಗಳಲ್ಲಿ ನಾವು ಪರಿಶೀಲನೆ ಮಾಡಿದ್ದೇವೆ. ಅವರು ಏನಾದರೂ ಟೀಕೆ ಮಾಡಿ ನಮ್ಮನ್ನು ನೆನೆಸಿಕೊಳ್ಳಲಿ” ಎಂದು ತಿಳಿಸಿದರು. 
 
ಸಿಎಂ ಹಾಗೂ ಡಿಸಿಎಂ ಮಧ್ಯೆ ಭಿನ್ನಾಭಿಪ್ರಾಯವಿದೆ ಎಂಬ ಬಿಜೆಪಿ ಆರೋಪದ ಬಗ್ಗೆ ಕೇಳಿದಾಗ, “ಬಿಜೆಪಿಯಲ್ಲಿ ಹೆಚ್ಚು ಭಿನ್ನಾಭಿಪ್ರಾಯವಿದೆಯೇ ಹೊರತು ಕಾಂಗ್ರೆಸ್ ನಲ್ಲಲ್ಲ. ಕಾಂಗ್ರೆಸ್ ಪಕ್ಷ ಒಗ್ಗಟ್ಟಾಗಿದ್ದು, ಭಿನ್ನಾಭಿಪ್ರಾಯದ ಪ್ರಶ್ನೆಯೇ ಇಲ್ಲ. ಬಿಜೆಪಿಯವರು ಮೊದಲು ತಮ್ಮ ಮನೆಯನ್ನು ಸರಿಪಡಿಸಿಕೊಳ್ಳಲಿ” ಎಂದು ತಿರುಗೇಟು ನೀಡಿದರು.
 
ಸರ್ಕಾರದಲ್ಲಿ ಹಣವಿಲ್ಲದ ಕಾರಣ ಕೇವಲ 15% ನಷ್ಟು ಟೆಂಡರ್ ಪೂರ್ಣಗೊಂಡಿದೆ ಎಂಬ ಬಿಜೆಪಿ ಆರೋಪದ ಬಗ್ಗೆ ಕೇಳಿದಾಗ, “ಇದೆಲ್ಲವೂ ಸುಳ್ಳು, ಬಿಜೆಪಿ ಅವಧಿಯಲ್ಲಿ ಸರ್ಕಾರದಲ್ಲಿ ಹಣವಿಲ್ಲದಿದ್ದರೂ ಟೆಂಡರ್ ಕರೆದಿದ್ದರು. ನಾವು ನಮ್ಮಲ್ಲಿರುವ ಹಣದ ಪ್ರಮಾಣಕ್ಕೆ ತಕ್ಕಂತೆ ಟೆಂಡರ್ ಕರೆಯುತ್ತಿದ್ದೇವೆ” ಎಂದು ತಿಳಿಸಿದರು.
 

Share this Story:

Follow Webdunia kannada

ಮುಂದಿನ ಸುದ್ದಿ

ಚುನಾವಣಾ ಆಯೋಗದ ಅನ್ಯಾಯದ ಬಗ್ಗೆ ಹೋರಾಡಬೇಕಿದೆ: ಡಿಕೆ ಶಿವಕುಮಾರ್