Publish Date: Sat, 31 May 2025 (11:18 IST)
Updated Date: Sat, 31 May 2025 (11:20 IST)
ಮಂಗಳೂರು: ಮಂಗಳೂರಿಗರು ಹೊಟ್ಟೆ ಬಟ್ಟೆಗೆ ನಮ್ಮಬಳಿ ಬರ್ತಾರೆ, ವೋಟ್ ಮಾತ್ರ ಬೇರೆಯವರಿಗೆ ಹಾಕ್ತಾರೆ ಎಂದು ಹಗುರವಾಗಿ ಮಾತನಾಡಿದ್ದ ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ಜನ ಸಿಡಿದೆದ್ದಿದ್ದಾರೆ. ನಿಮ್ಮ ಮುಂದೆ ಯಾವಾಗ ಬಂದಿದ್ವಿ ಹೇಳಿ ಎಂದಿದ್ದಾರೆ.
ಮಂಗಳೂರಿನವರು ಗ್ಯಾರಂಟಿ ಬೇಡ ಎಂದ್ರು. ಆದರೆ ನಂತರ ಅವರೇ ಮೊದಲು ಕ್ಯೂನಲ್ಲಿ ನಿಂತಿರುತ್ತಾರೆ. ಕನಕಪುರದವರಿಗಿಂತ ಅವರೇ ಶೇ.80 ರಷ್ಟು ಅರ್ಜಿ ಹಾಕುತ್ತಾರೆ. ಮಂಗಳೂರಿಗರಿಗೆ ಹೊಟ್ಟೆಬಟ್ಟೆಗೆ ಕಾಂಗ್ರೆಸ್ ನವರು ಬೇಕು. ವೋಟ್ ಹಾಕೋಕೆ ಬೇರೆಯವರು ಬೇಕು ಎಂದು ಹಗುರವಾಗಿ ಮಾತನಾಡಿದ್ದರು.
ಇದು ಮಂಗಳೂರಿಗರನ್ನು ರೊಚ್ಚಿಗೆಬ್ಬಿಸಿದೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಕಾಮೆಂಟ್ ಗಳು ಬರುತ್ತಿವೆ. ಡಿಕೆಶಿಯವರೇ ನಾವು ಮಂಗಳೂರಿನವರು ಸ್ವಾಭಿಮಾನಿಗಳು. ಹೊಟ್ಟೆ ಬಟ್ಟೆಗೆ ನಿಮ್ಮ ಮುಂದೆ ಕೈ ಕಟ್ಟಿ ನಿಲ್ಲುವ ಪರಿಸ್ಥಿತಿ ನಮಗಿಲ್ಲ. ನಾವು ಯಾವಾಗ ಬಂದಿದ್ದೇವೆ ಹೇಳಿ ಎಂದಿದ್ದಾರೆ.
ಇನ್ನು ಮಂಗಳೂರು ಶಾಸಕ ಭರತ್ ಶೆಟ್ಟಿ ಕೂಡಾ ಕಿಡಿ ಕಾರಿದ್ದು, ರಾಜ್ಯದ ಆದಾಯಕ್ಕೆ ಮಂಗಳೂರಿನ ಕೊಡುಗೆ ಹೆಚ್ಚಿದೆ. ಇದನ್ನೇ ಬೇರೆ ಜಿಲ್ಲೆಗಳ ಅಭಿವೃದ್ಧಿಗೂ ಬಳಸುತ್ತೀರಿ. ಅಷ್ಟಕ್ಕೂ ನೀವು ನಿಮ್ಮ ಸ್ವಂತ ಜೇಬಿನಿಂದ ಕೊಡುತ್ತಿಲ್ಲ. ರಾಜ್ಯದ ಆದಾಯದಲ್ಲಿ ನಮಗೂ ಪಾಲಿದೆ. ಮಾತನಾಡುವಾಗ ನೋಡಿಕೊಂಡು ಮಾತನಾಡಿ ಎಂದು ಎಚ್ಚರಿಕೆ ನೀಡಿದ್ದಾರೆ.