ನೆರೆ ಸಂತ್ರಸ್ತರ ಪರಿಹಾರದಲ್ಲೂ ಸರ್ಕಾರದಿಂದ ತಾರತಮ್ಯ ಅಮಾನವೀಯ ನಡೆಯಾಗಿದೆ, ಸರ್ಕಾರ ಈಗ ನಿರಾಶ್ರಿತರ ನೆರವಿಗೆ ಧಾವಿಸಬೇಕೆಂದು ವಿಧಾನಪರಿಷತ್ ವಿಪಕ್ಷದ ನಾಯಕ ಬಿಕೆ ಹರಿಪ್ರಸಾದ್ ಆಗ್ರಹಿಸಿದ್ದಾರೆ.
ರಾಜ್ಯದ ಬಹುತೇಕ ಜಿಲ್ಲೆಗಳು ಅತಿವೃಷ್ಠಿಯಿಂದ ತತ್ತರಿಸುತ್ತಿವೆ.ವಿಶೇಷವಾಗಿ ಕರಾವಳಿ ಜಿಲ್ಲೆಗಳಲ್ಲಿ ಮುಂಗಾರಿನ ಪ್ರವಾಹ ಅವಾಂತರವನ್ನೇ ಸೃಷ್ಟಿಮಾಡಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ, ಸುರತ್ಕಲ್, ಮಂಗಳೂರು ನಗರ ಉತ್ತರದ ನೇರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಿದೆ.
ಮುಖ್ಯಮಂತ್ರಿಗಳು,ಸಚಿವರುಗಳು "ಬಂದ ಪುಟ್ಟ ಹೋದ ಪುಟ್ಟ" ಎಂಬಂತೆ ನೆರೆ ಪೀಡಿತ ಪ್ರದೇಶಗಳಿಗೆ ಫ್ಯಾಶನ್ ಶೋ ಗೆ ಭೇಟಿ ಕೊಟ್ಟಿದ್ದು ಮಾತ್ರ. ಆದರೆ ಇಲ್ಲಿವರೆಗೂ ನಯಾ ಪೈಸೆ ಬಿಡುಗಡೆ ಮಾಡಲಿಲ್ಲ. ನೊಂದವರಿಗೆ ನೆರವು ನೀಡಲಿಲ್ಲ. ನಿರಾಶ್ರಿತರಿಗೆ ನೀಡಿರುವ ಭರವಸೆಗಳು ನಿರಾಸೆಗೊಳಿಸಿವೆ.
ಪಚ್ಚನಾಡಿ, ಗುರುಪುರ, ಮಿನಕಳಿ, ಉಳ್ಳಾಲ, ಸುರತ್ಕಲ್, ಸೋಮೇಶ್ವರ ಗ್ರಾಮ , ಬೆಟ್ಟಂಪಾಡಿ, ಬೈಕಂಪಾಡಿ, ಅದ್ಯಪಾಡಿ ಸೇರಿದಂತೆ ಇನ್ನಿತರೆ ಮಳೆಯಿಂದ ಹಾನಿಗೊಳಿಗಾಗಿರುವ ಹಾಗೂ ಕಡಲ್ಕೊರೆತದಿಂದ ಅಪಾಯದಲ್ಲಿರುವ ಪ್ರದೇಶಗಳಿಗೆ ಭೇಟಿ ಮಾಡಿದೆ. ಬಹುತೇಕ ಕಡೆ ಇಲ್ಲಿವರೆಗೂ ನಿರಾಶ್ರಿತರಿಗೆ ಪ್ರಾಥಮಿಕ ಸೌಲಭ್ಯವೂ ಕಲ್ಪಿಸದೆ ಅಮಾನವೀಯವಾಗಿ ನಡೆದುಕೊಂಡಿರುವುದು ದುರಂತ.