ಬೆಂಗಳೂರು: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಇಬ್ಬರು ನೈಜಿರಿಯಾ ಪ್ರಜೆಗಳನ್ನು ಹೆಣ್ಣೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.
ಚಿನೋನಿ (32) ಮತ್ತು ಕ್ಲೆವಿಯನ್ (30) ಬಂಧಿತ ನೈಜಿರಿಯಾ ಪ್ರಜೆಗಳು. ಅವರಿಂದ 10 ಲಕ್ಷ ರೂ. ಮೌಲ್ಯದ 31 ಕೆ.ಜಿ ಗಾಂಜಾ ವಶಕ್ಕೆ ಪಡೆಯಲಾಗಿದೆ.
ಆರೋಪಿಗಳು ಕೆಲ ವರ್ಷಗಳ ಹಿಂದೆಯೆ ಬೇರೆ ಬೇರೆ ವೀಸಾ, ಪಾಸ್ ಪೋರ್ಟ್ ಪಡೆದು ಬೆಂಗಳೂರಿಗೆ ಬಂದಿದ್ದು, ಹೆಣ್ಣೂರಿನಲ್ಲಿ ವಾಸವಾಗಿದ್ದರು. ಜತೆಗೆ, ಅಕ್ರಮ ಹಣ ಸಂಪಾದಿಸಲು ಮಾದಕ ವಸ್ತು ಮಾರಾಟ ದಂಧೆಯಲ್ಲಿ ತೊಡಗಿದ್ದಾರೆ. ಇತ್ತೀಚೆಗೆ ಹೆಣ್ಣೂರು ಠಾಣಾ ವ್ಯಾಪ್ತಿಯ ಸಿಎಂಆರ್ ಲೇಔಟ್ನಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದರು. ಈ ಖಚಿತ ಮಾಹಿತಿ ಮೇರೆಗೆ ಆರೋಪಿಗಳನ್ನು ಬಂಧಿಸಲಾಗಿದೆ.
ಆರೋಪಿಗಳ ಬಳಿ ಯಾವುದೇ ವೀಸಾ, ಪಾಸ್ ಪೋರ್ಟ್ ಪತ್ತೆಯಾಗಿಲ್ಲ. ಅಲ್ಲದೆ ವಿಚಾರಣೆಗೂ ಸಹಕರಿಸುತ್ತಿಲ್ಲ. ಈ ಹಿನ್ನೆಲೆಯಲ್ಲಿ ಆರೋಪಿಗಳ ವಿರುದ್ಧ ವಿದೇಶಿ ಕಾಯ್ದೆ ಮತ್ತು ಎನ್ ಡಿಪಿಎಸ್ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದೆ. ಜತೆಗೆ, ವೀಸಾ, ಪಾಸ್ ಪೋರ್ಟ್ ಪರಿಶೀಲಿಸದೆ ಮನೆ ಬಾಡಿಗೆ ನೀಡಿದ ಆರೋಪದಡಿ ಮನೆ ಮಾಲೀಕರ ವಿರುದ್ದವೂ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.