ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಇಂದು ಬೆಳಿಗ್ಗೆಯೇ ಭೂಕಂಪನದ ಶಾಕ್ ಸಿಕ್ಕಿದೆ. ಭೂಮಿ ಕಂಪಿಸಿದ ವಿಡಿಯೋಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇಂದು ಬೆಳಿಗ್ಗೆ 5.36 ರ ಸುಮಾರಿಗೆ ದೆಹಲಿಯಲ್ಲಿ ಭೂಕಂಪವಾಗಿದ್ದು ರಿಕ್ಟರ್ ಮಾಪಕದಲ್ಲಿ 4.0 ರಷ್ಟು ತೀವ್ರತೆ ದಾಖಲಾಗಿದೆ. ಸ್ಥಳೀಯ ಸಿಸಿಟಿವಿ ಕ್ಯಾಮರಾಗಳಲ್ಲೂ ಭೂ ಕಂಪಿಸಿದ ವಿಡಿಯೋಗಳು ದಾಖಲಾಗಿವೆ.
ದೆಹಲಿ, ನೋಯ್ಡಾ, ಗಾಜಿಯಾಬಾದ್ ಮತ್ತು ಗುರುಗ್ರಾಮ ಸೇರಿದಂತೆ ಹಲವು ಕಡೆಗಳಲ್ಲಿ ಕಟ್ಟಡ, ಮನೆಯಲ್ಲಿರುವ ವಸ್ತುಗಳು ಅಲುಗಾಡಿದ ಅನುಭವವಾಗಿದೆ. ಇದರಿಂದಾಗಿ ಜನ ಭಯಭೀತರಾಗಿದ್ದು ತಕ್ಷಣವೇ ಮನೆಗಳಿಂದ ಹೊರಬಂದಿದ್ದಾರೆ.
ಅದೃಷ್ಟವಶಾತ್ ಯಾವುದೇ ನಷ್ಟ-ಕಷ್ಟಗಳಾದ ವರದಿಯಾಗಿಲ್ಲ. ಸುಮಾರು 5 ಕಿ.ಮೀ. ವ್ಯಾಪ್ತಿಯಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ. ಭೂಕಂಪನದ ವರದಿಯಾಗುತ್ತಿದ್ದಂತೇ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ ಯಾರೂ ಆತಂಕಪಡಬೇಕಾಗಿಲ್ಲ. ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದಾರೆ.