Select Your Language

Notifications

webdunia
webdunia
webdunia
webdunia

ಶಾಲಾ ಶೈಕ್ಷಣಿಕ ಪ್ರವಾಸದ ವೇಳೆ ವಿದ್ಯಾರ್ಥಿ ಸಾವು: ಮುಖ್ಯಶಿಕ್ಷಕ ಸೇರಿ 6 ಶಿಕ್ಷಕರು ಸಸ್ಪೆಂಡ್‌

ಶಾಲಾ ಶೈಕ್ಷಣಿಕ ಪ್ರವಾಸದ ವೇಳೆ ವಿದ್ಯಾರ್ಥಿ ಸಾವು: ಮುಖ್ಯಶಿಕ್ಷಕ ಸೇರಿ 6 ಶಿಕ್ಷಕರು ಸಸ್ಪೆಂಡ್‌

Sampriya

ಕೊಪ್ಪಳ , ಭಾನುವಾರ, 22 ಡಿಸೆಂಬರ್ 2024 (12:19 IST)
Photo Courtesy X
ಕೊಪ್ಪಳ: ಶೈಕ್ಷಣಿಕ ಪ್ರವಾಸಕ್ಕೆ ಹೋಗಿದ್ದ ವೇಳೆ ಬಾವಿಗೆ ಬಿದ್ದು ವಿದ್ಯಾರ್ಥಿ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಲೆಯ ಆರು ಶಿಕ್ಷಕರನ್ನು ಅಮಾನತುಗೊಳಿಸಲಾಗಿದೆ.

ಕೊಪ್ಪಳ  ಜಿಲ್ಲೆಯ ಯಲಬುರ್ಗಾ ತಾಲೂಕಿನ ಗಾಣದಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರಭಾರಿ ಮುಖ್ಯಶಿಕ್ಷಕ ಸೇರಿ ಆರು ಶಿಕ್ಷಕರನ್ನು ಅಮಾನತು ಮಾಡಲಾಗಿದೆ. ಕೊಪ್ಪಳ ಡಿಡಿಪಿಐ ಶ್ರೀಶೈಲ್ ಬಿರಾದಾರ್ ಆದೇಶ ಹೊರಡಿಸಿದ್ದಾರೆ.

ಗಾಣದಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವತಿಯಿಂದ ಡಿ. 18ರಿಂದ 21ರ ತನಕ ಎರಡು ಬಸ್‌ಗಳಲ್ಲಿ 100 ಜನ ವಿದ್ಯಾರ್ಥಿಗಳು, 11 ಶಿಕ್ಷಕರು ಪ್ರವಾಸಕ್ಕೆ ತೆರಳಲು ಇಲಾಖೆಯಿಂದ ಅನುಮತಿ ಪಡೆದಿದ್ದರು. ಆದರೆ, ಪ್ರವಾಸಕ್ಕೆ ತೆರಳುವಾಗ 13 ಜನ ಶಿಕ್ಷಕರು ಮತ್ತು ಇಬ್ಬರು ಅಡುಗೆ ಸಿಬ್ಬಂದಿಯನ್ನೂ ಕರೆದುಕೊಂಡು ಹೋಗಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಭಟ್ಕಳಕ್ಕೆ ತೆರಳಿದ್ದಾಗ 8ನೇ ತರಗತಿ ವಿದ್ಯಾರ್ಥಿ ನಿರುಪಾದಿ ಹರಿಜನ ರಾತ್ರಿ ಸಮಯದಲ್ಲಿ ಜಾರಿ ಬಿದ್ದು ಮೃತಪಟ್ಟಿದ್ದಾನೆ. ಘಟನೆಗೆ ಶಿಕ್ಷಕರ ನಿರ್ಲಕ್ಷ್ಯವೇ ಕಾರಣ ಎಂದು
ಶಾಲೆಯ ಪ್ರಭಾರ ಮುಖ್ಯ ಗುರು ಸೇರಿದಂತೆ ಆರು ಜನ ಶಿಕ್ಷಕರನ್ನು ಅಮಾನತು ಮಾಡಲಾಗಿದೆ. ಸಹ ಶಿಕ್ಷಕರಾದ ಶಿವಕುಮಾರ ಅವಸಂಗರದ, ನಾಗರಾಜ ಶೆಟ್ಟರ್‌, ಅಮರೇಶ ಬಳ್ಳಾರಿ, ಈರಮ್ಮ ಬಡಿಗೇರ ಮತ್ತು ಪದ್ಮಾವತಿ ಪವಾರ ಅಮಾನತುಗೊಂಡವರು. ಮೃತ ಬಾಲಕನ ಕುಟುಂಬಕ್ಕೆ ರಾಜ್ಯ ಸರ್ಕಾರ ಐದು ಲಕ್ಷ ಪರಿಹಾರ ಘೋಷಿಸಿದೆ.

ಪ್ರವಾಸದ ವೇಳೆ ಅವಘಡ ನಡೆದರೆ ಅದಕ್ಕೆ ಶಾಲೆಯ ಶಿಕ್ಷಕರೇ ಹೊಣೆ ಹೊರಬೇಕು, ಎಚ್ಚರಿಕೆಯಿಂದ ತಮ್ಮ ಜವಾಬ್ದಾರಿ ನಿರ್ವಹಿಸಬೇಕು ಎಂದು ಶಿಕ್ಷಣಾಧಿಕಾರಿಗಳು ಈಗಾಗಲೇ ಎಲ್ಲ ಮುಖ್ಯ ಶಿಕ್ಷಕರಿಗೆ ಸೂಚನೆ ನೀಡಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಮೊಹಾಲಿಯಲ್ಲಿ ಬಹುಮಹಡಿ ಕಟ್ಟಡ ಕುಸಿತ: ಇಬ್ಬರು ಸಾವು, ಅವಶೇಷಗಳಡಿಯಲ್ಲಿ ಹಲವು ಮಂದಿ