ಬೆಂಗಳೂರು : ಭ್ರಷ್ಟಾಚಾರಕ್ಕೆ ಆಸ್ಪದ ನೀಡದಂತೆ ಡಿಸಿಗಳು ಹಾಗೂ ಸಿಇಒಗಳಿಗೆ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ.
ವಿಧಾನಸೌಧದಲ್ಲಿ ನಡೆದ ಡಿಸಿಗಳು, ಸಿಇಓಗಳ ಸಭೆಯಲ್ಲಿ ಮಾತನಾಡಿದ ಅವರು, ಡಿಸಿಗಳು, ಸಿಇಒಗಳಿಗೆ ಬದ್ಧತೆಯ ಪಾಠ ಮಾಡಿದರು. ಡಿಸಿಗಳು, ಸಿಇಒಗಳು ಸರ್ಕಾರದ ಮುಖ್ಯ ಭಾಗ. ನಿಮ್ಮ ಕಾರ್ಯವೈಖರಿ ಸರ್ಕಾರದ ಹಣೆಬರಹ ನಿರ್ಧರಿಸುತ್ತದೆ.
ನೀವು ಸರಿಯಾಗಿ ಕೆಲಸ ಮಾಡದಿದ್ದರೆ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೆ ಎಂದರು. ಜಿಲ್ಲಾ ಪಂಚಾಯ್ತಿ, ತಾಲೂಕು ಪಂಚಾಯ್ತಿ, ರೆವೆನ್ಯೂ ಇನ್ಸ್ಪೆಕ್ಟರ್ಗಳು, ಪಿಡಿಒಗಳ ಕಾರ್ಯವೈಖರಿ ಸರ್ಕಾರದ ವರ್ಚಸ್ಸಿನ ಮೇಲೆ ಪರಿಣಾಮ ಬೀರುತ್ತದೆ. ಅದರ ಬಗ್ಗೆ ಗಮನ ಹರಿಸಿ. ವೈಯಕ್ತಿಕ ಅಜೆಂಡಾ ಇಟ್ಟುಕೊಂಡು ಕೆಲಸ ಮಾಡೋದು ಬೇಡ ಎಂದರು.
ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ಉತ್ತಮ ಸಹಕಾರ ನೀಡಿದ್ದೀರಿ. ಅದಕ್ಕೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. 70% ರಷ್ಟು ಅಧಿಕಾರಿಗಳು ಜಿಲ್ಲಾ ಮತ್ತು ತಾಲೂಕು ಕೇಂದ್ರದಲ್ಲಿ ಉಳಿದುಕೊಂಡು ಕೆಲಸ ಮಾಡುತ್ತಿಲ್ಲ. ಇದರಿಂದ ಅವರು ಜನರಿಗೆ ಸರಿಯಾಗಿ ಸಿಗುತ್ತಿಲ್ಲ. ಇದರಿಂದಲೂ ಸರ್ಕಾರಕ್ಕೆ ಕೆಟ್ಟ ಹೆಸರು. ಸರ್ಕಾರದ ಕೈಪಿಡಿ ನಿಯಮಗಳನ್ನು ಪಾಲಿಸಿ. ಅಧಿಕಾರಿಗಳಿಗೆ ಸಿಇಒಗಳು ಬದ್ಧತೆ ನಿಗದಿ ಮಾಡಬೇಕು ಎಂದು ಸೂಚನೆ ನೀಡಿದರು.