Select Your Language

Notifications

webdunia
webdunia
webdunia
webdunia

ಕಾಲೇಜು ಪುನಾರಂಭ; ಸಿಎಂ ಜತೆ ಚರ್ಚಿಸಿ ಇನ್ನೆರಡು ದಿನದಲ್ಲಿ ನಿರ್ಧಾರ-ಡಿಸಿಎಂ

ಕಾಲೇಜು ಪುನಾರಂಭ; ಸಿಎಂ ಜತೆ ಚರ್ಚಿಸಿ ಇನ್ನೆರಡು ದಿನದಲ್ಲಿ ನಿರ್ಧಾರ-ಡಿಸಿಎಂ
bangalore , ಶುಕ್ರವಾರ, 16 ಜುಲೈ 2021 (22:16 IST)
ಬೆಂಗಳೂರು: ಪದವಿ ಮತ್ತು ಡಿಪ್ಲೊಮೊ ಸೆಮಿಸ್ಟರ್‌ಗಳ ಬಾಕಿ ಉಳಿದಿರುವ ಪರೀಕ್ಷೆಗಳನ್ನು ಕ್ರಮವಾಗಿ ಅಗಸ್ಟ್‌ ಮತ್ತು ಅಕ್ಟೋಬರ್‌ ತಿಂಗಳ ಒಳಗಾಗಿ ಮುಗಿಸಬೇಕು ಎಂದು ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ ಅವರು ಎಲ್ಲ ವಿಶ್ವವಿದ್ಯಾಲಯ ಹಾಗೂ ಪಾಲಿಟೆಕ್ನಿಕ್‌ಗಳಿಗೆ ಸೂಚನೆ ನೀಡಿದ್ದಾರೆ. 
 
ಬೆಂಗಳೂರಿನಲ್ಲಿ ಶುಕ್ರವಾರದಂದು ಪರೀಕ್ಷೆಗಳು ಹಾಗೂ ಕಾಲೇಜುಗಳನ್ನು ತೆರೆಯುವ ಬಗ್ಗೆ ಉನ್ನತ ಅಧಿಕಾರಿಗಳು ಹಾಗೂ ಉನ್ನತ ಶಿಕ್ಷಣ ಮಂಡಳಿ ಸದಸ್ಯರ ಜತೆ ಮಾತುಕತೆ ನಡೆಸಿದ ನಂತರ ಮಾಧ್ಯಮಗಳ ಜತೆ ಅವರು ಮಾತನಾಡಿದರು. 
 
ಬೆಸ ಸೆಮಿಸ್ಟರ್‌ಗಳ (1, 3 & 5) ಡಿಪ್ಲೊಮಾ ಪ್ರಾಯೋಗಿಕ ಪರೀಕ್ಷೆಗಳು ಜುಲೈ 26ರಿಂದ 28 ಮತ್ತು ಇವೇ ಸೆಮಿಸ್ಟರ್‌ಗಳ ಉಳಿದ ವಿಷಯಗಳ ಥಿಯರಿ ಪರೀಕ್ಷೆಗಳು ಮತ್ತಿತರೆ ಸೆಮಿಸ್ಟರ್‌ಗಳ ಪರೀಕ್ಷೆಗಳು ಅಗಸ್ಟ್ 2ರಿಂದ 21ರವರೆಗೆ ನಡೆಸಲು ಸೂಚಿಸಲಾಗಿದೆ. 
 
ಇನ್ನು ಸಮ ಸೆಮಿಸ್ಟರ್‌ಗಳಾದ 2, 4 & 6ರ ಡಿಪ್ಲೊಮಾ ಪ್ರಾಯೋಗಿಕ ಪರೀಕ್ಷೆಗಳನ್ನು ನವೆಂಬರ್‌ 2ರಿಂದ 12ರವರೆಗೆ ಹಾಗೂ ಇವೇ ಸೆಮಿಸ್ಟರ್‌ಗಳ ಥಿಯರಿ ಪರೀಕ್ಷೆಗಳನ್ನು ನವೆಂಬರ್ 17ರಿಂದ ಡಿಸೆಂಬರ್‌ 6ರವರೆಗೆ ನಡೆಸಲಾಗುವುದು ಎಂದು ಡಿಸಿಎಂ ಮಾಹಿತಿ ನೀಡಿದರು.
 
 
ಎಲ್ಲ ಪರೀಕ್ಷೆಗಳಲ್ಲೂ ಕೋವಿಡ್‌ ಮಾರ್ಗಸೂಚಿ ಪಾಲನೆ ಕಡ್ಡಾಯ. ದೈಹಿಕ ಅಂತರ, ಮಾಸ್ಕ್‌ ಧರಿಸುವುದನ್ನು ತಪ್ಪಿಸುವಂತಿಲ್ಲ. ಒಂದು ವೇಳೆ ಯಾವುದೇ ವಿದ್ಯಾರ್ಥಿಗೆ ಪಾಸಿಟೀವ್‌ ಬಂದಿದ್ದರೆ ಅಂಥರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಬೇಕು ಎಂದು ಆದೇಶಿಸಲಾಗಿದೆ ಎಂದು ಡಿಸಿಎಂ ಮಾಹಿತಿ ನೀಡಿದರು. 
 
ಬಹುತೇಕ ಎಲ್ಲ ವಿವಿಗಳು ಪರೀಕ್ಷೆಗಳನ್ನು ಮುಗಿಸಿದ್ದು, ಕೋವಿಡ್‌ ಲಾಕ್‌ಡೌನ್‌ ಕಾರಣಕ್ಕೆ ಕರ್ನಾಟಕ ವಿವಿ, ಕಲಬುರಗಿ ವಿವಿ, ಬೆಂಗಳೂರು ವಿವಿ ಪರೀಕ್ಷೆ ನಡೆಸಲು ಸಾಧ್ಯವಾಗಿಲ್ಲ. ಅವುಗಳನ್ನು ಅಕ್ಟೋಬರ್ ತಿಂಗಳ ಒಳಗೆ ನಡೆಸಲು ಸೂಚಿಸಲಾಗಿದೆ ಎಂದರು. 
 
ಕಾಲೇಜು ಆರಂಭ; ಇನ್ನೆರಡು ದಿನದಲ್ಲಿ ನಿರ್ಧಾರ: 
 
ಉನ್ನತ ಶಿಕ್ಷಣ ವಿಭಾಗದ ಕಾಲೇಜುಗಳನ್ನು ಆರಂಭಿಸುವ ಬಗ್ಗೆ ಈ ಸಭೆಯಲ್ಲಿ ಚರ್ಚೆ ನಡೆಸಲಾಯಿತು. ಇನ್ನೆರಡು ದಿನಗಳಲ್ಲಿ ಈ ಬಗ್ಗೆ ಮುಖ್ಯಮಂತ್ರಿಗಳ ಜತೆ ಚರ್ಚೆ ನಡೆಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಉಪ ಮುಖ್ಯಮಂತ್ರಿಗಳು ತಿಳಿಸಿದರು. 
 
ಈಗಾಗಲೇ ಶೇ.65ರಷ್ಟು ಪದವಿ ವಿದ್ಯಾರ್ಥಿಗಳಿಗೆ ಲಸಿಕೆ ಕೊಡಲಾಗಿದೆ. ಸರಕಾರಿ, ಅನುದಾನಿತ ಮತ್ತು ಖಾಸಗಿ ಕಾಲೇಜುಗಳ ಸರಕಾರಿ ತೆಗೆದುಕೊಂಡರೆ ಶೇ.75ರಷ್ಟು ವಿದ್ಯಾರ್ಥಿಗಳು ವ್ಯಾಕ್ಸಿನ್‌ ಪಡೆದಿದ್ದಾರೆ. ಉಳಿದ ವಿದ್ಯಾರ್ಥಿಗಳಿಗೆ ಶೀಘ್ರವೇ ನೀಡಲಾಗುವುದು. ಸರಕಾರಿ ಮತ್ತು ಅನುದಾನಿತ ಕಾಲೇಜುಗಳಲ್ಲಿ ಲಸಿಕೀಕರಣ ಭರದಿಂದ ಸಾಗುತ್ತಿದೆ ಎಂದರು ಅವರು. 
 
ಆಫ್‌ಲೈನ್‌ ಕ್ಲಾಸ್‌ ಕಡ್ಡಾಯ ಅಲ್ಲ. ಇಷ್ಟ ಇದ್ದವರು ಲಸಿಕೆ ಪಡೆದು ಬರಬಹುದು, ಇಲ್ಲದವರು ಆನ್‌ಲೈನ್‌ ಕ್ಲಾಸ್‌ನಲ್ಲಿ ಪಾಠ ಕೇಳಬಹುದು. ಆದರೆ, ಹಾಜರಿ ಮಾತ್ರ ಕಡ್ಡಾಯ. ಮೇ ತಿಂಗಳಿಂದಲೇ ಆನ್‌ಲೈಸ್‌ ತರಗತಿಗಳು ಯಶಸ್ವಿಯಾಗಿ ನಡೆಯುತ್ತಿವೆ. ಜತೆಗೆ, ಸಂಪರ್ಕ ತರಗತಿಗಳೂ ನಡೆಯುತ್ತಿವೆ. ಅಗಸ್ಟ್‌ ೧೫ರಿಂದ ಬರುವ ವಿದ್ಯಾರ್ಥಿಗಳಿಗೂ ಸಂಪರ್ಕ ತರಗತಿಗಳಿಗೆ ಹಾಜರಾಗಲು ಅವಕಾಶ ನೀಡಲಾಗುವುದು ಎಂದು ಅವರು ಮಾಹಿತಿ ನೀಡಿದರು. 
 
ಸಭೆಯಲ್ಲಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ.ಇ.ವಿ.ರಮಣ ರೆಡ್ಡಿ, ಉನ್ನತ ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕುಮಾರ ನಾಯಕ್‌, ಉನ್ನತ ಶಿಕ್ಷಣ ಮಂಡಳಿ ಉಪಾಧ್ಯಕ್ಷ ಪ್ರೊ.ತಿಮ್ಮೇಗೌಡ, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಆಯುಕ್ತ ಪಿ.ಪ್ರದೀಪ್‌ ಮುಂತಾದವರು ಭಾಗಿಯಾಗಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಉನ್ನತ ಶಿಕ್ಷಣ: ಬ್ರಿಟೀಷ್‌ ಕೌನ್ಸಿಲ್ ಜತೆ ದುಂಡುಮೇಜಿನ ಸಭೆ ನಡೆಸಿದ ಡಿಸಿಎಂ