Select Your Language

Notifications

webdunia
webdunia
webdunia
webdunia

ಅಂತಾರಾಷ್ಟ್ರೀಯ ಯುವ ಕೌಶಲ್ಯ ದಿನ: ಜುಲೈ- ಆಗಸ್ಟ್ ತಿಂಗಳು ಕೌಶಲ್ಯ ಮಾಸ: ಡಿಸಿಎಂ ಘೋಷಣೆ

ಅಂತಾರಾಷ್ಟ್ರೀಯ ಯುವ ಕೌಶಲ್ಯ ದಿನ: ಜುಲೈ- ಆಗಸ್ಟ್ ತಿಂಗಳು ಕೌಶಲ್ಯ ಮಾಸ: ಡಿಸಿಎಂ ಘೋಷಣೆ
bangalore , ಬುಧವಾರ, 14 ಜುಲೈ 2021 (20:01 IST)
[19:46, 7/14/2021] Geethanjali: ಬೆಂಗಳೂರು: ʼಅಂತಾರಾಷ್ಟ್ರೀಯ ಯುವ ಕೌಶಲ್ಯ ದಿನʼ ನಿಮಿತ್ತ ನಾಳೆ (ಗುರುವಾರ) ರಾಜ್ಯವ್ಯಾಪಿ ಒಂದು ತಿಂಗಳ ಕಾಲ ʼಕೌಶಲ್ಯ ಮಾಸʼಕ್ಕೆ ಚಾಲನೆ ನೀಡಲಾಗುತ್ತಿದೆ ಎಂದು ಕೌಶಲ್ಯಾಭಿವೃದ್ಧಿ, ಜೀವನೋಪಾಯ ಮತ್ತು ಉದ್ಯಮಶೀಲತಾ ಖಾತೆ ಸಚಿವರು ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ ಹೇಳಿದರು. 
 
ʼಅಂತಾರಾಷ್ಟ್ರೀಯ ಕೌಶಲ್ಯ ದಿನʼ ನಿಮಿತ್ತ ಪೂರ್ವಭಾವಿಯಾಗಿ ವಿವಿಧ ಇಲಾಖೆಗಳ ಉನ್ನತ ಅಧಿಕಾರಿಗಳ ಜತೆ ಸಭೆ ನಡೆಸಿದ ನಂತರ ಮಾಧ್ಯಮಗಳ ಜತೆ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಕೌಶಲ್ಯಪೂರ್ಣ ಮಾನವ ಸಂಪನ್ಮೂಲ ಸೃಷ್ಟಿ ಹಾಗೂ ಹೆಚ್ಚೆಚ್ಚು ಉದ್ಯೋಗಾವಕಾಶ ಸೃಷ್ಟಿಸುವ ನಿಟ್ಟಿನಲ್ಲಿ ಸರಕಾರ ಕ್ರಮ ವಹಿಸಿದೆ ಎಂದರು. 
 
ಕೌಶಲ್ಯ ದಿನಾಚರಣೆ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಉದ್ಘಾಟನೆ ಮಾಡಲಿದ್ದಾರೆ. ನಾಳೆ ಬೆಳಗ್ಗೆ ಹತ್ತು ಗಂಟೆಗೆ ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಡಿಸಿಎಂ ಮಾಹಿತಿ ನೀಡಿದರು. 
 
ಮುಖ್ಯಮಂತ್ರಿ ಕೌಶಲ್ಯ ಕರ್ನಾಟಕ ಯೋಜನೆ (ಸಿ.ಎಂ.ಕೆ.ಕೆ.ವೈ) ಅಡಿಯಲ್ಲಿ ರಾಜ್ಯದ ನಿರುದ್ಯೋಗಿ ಯುವಜನರಿಗೆ ಅಲ್ಪಾವಧಿ ಕೌಶಲ್ಯಾಧಾರಿತ ತರಬೇತಿ ಕಾರ್ಯಕ್ರಮ ಹಮ್ಮಿಕೊಂಡಿದ್ದು, 2019ರ ಜುಲೈನಿಂದ ಈವರೆಗೆ 1,19,045 ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. 57,833 ಅಭ್ಯರ್ಥಿಗಳ ತರಬೇತಿ ಪೂರ್ಣಗೊಂಡಿದ್ದು, 7,876 ಅಭ್ಯರ್ಥಿಗಳಿಗೆ ಉದ್ಯೋಗಾವಕಾಶ ಸಿಕ್ಕಿದೆ ಎಂದು ಅವರು ಮಾಹಿತಿ ನೀಡಿದರು. 
 
ಪ್ರಧಾನಮಂತ್ರಿ ಕೌಶಲ್ಯ ವಿಕಾಸ ಯೋಜನೆ (ಪಿ.ಎಂ.ಕೆ.ವಿ.ವೈ) ಅಡಿಯಲ್ಲಿಯೂ ರಾಜ್ಯದಲ್ಲಿ ಒಟ್ಟು 25,000 ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದು, 16,375 ಅಭ್ಯರ್ಥಿಗಳು ತರಬೇತಿ ಪೂರ್ಣಗೊಳಿಸಿದ್ದಾರೆ. 1,561 ಅಭ್ಯರ್ಥಿಗಳಿಗೆ ಉದ್ಯೋಗಾವಕಾಶ ಹಾಗೂ ಜೀವನೋಪಾಯ ಒದಗಿಸಲಾಗಿದೆ ಎಂದು ಡಿಸಿಎಂ ಹೇಳಿದರು. 
 
ಇದನ್ನು ಮತ್ತೂ ಪರಿಣಾಮಕಾರಿಯಾಗಿ ಮುಂದುವರಿಸುವ ಸಲುವಾಗಿ ಕೌಶಲ್ಯತೆ ಮತ್ತು ಉತ್ತಮ ಶಿಕ್ಷಣವನ್ನು ಉತ್ತೇಜಿಸುವ ಉದ್ದೇಶದಿಂದ ಕೌಶಲ್ಯ ಮಾಸದ ಅಭಿಯಾನ ಕೈಗೊಳ್ಳಲಾಗಿದೆ. ರಾಜ್ಯದ ಒಟ್ಟಾರೆ ಅಭಿವೃದ್ಧಿಗೆ ಹಾಗೂ ಆರ್ಥಿಕ ಸಬಲೀಕರಣಕ್ಕೆ ಇವೆರಡೂ ಪೂರಕವಾಗಿರುವ ಕಾರಣಕ್ಕೆ ಹೆಚ್ಚು ಮಹತ್ವ ನೀಡಲಾಗುತ್ತಿದೆ ಎಂದು ಡಿಸಿಎಂ ಹೇಳಿದರು. 
 
150 ಐಟಿಐಗಳಿಗೆ ಪುನಶ್ಚೇತನ: 
 
ರಾಜ್ಯದಲ್ಲಿ ಕೌಶಲ್ಯಪೂರ್ಣ ಮಾನವ ಸಂಪನ್ಮೂಲವನ್ನು ಎಲ್ಲ ಕ್ಷೇತ್ರಗಳಿಗೂ ಒದಗಿಸುವ ಉದ್ದೇಶದಿಂದ ರಾಜ್ಯದ 150 ಸರಕಾರಿ ಐಟಿಐ ಸಂಸ್ಥೆಗಳನ್ನೂ 5,000 ಕೋಟಿ ರೂ. ವೆಚ್ಚದಲ್ಲಿ ಪುನಶ್ಚೇತನಗೊಳಿಸಿ ಮೇಲ್ದರ್ಜೆಗೇರಿಸಲು ʼಉದ್ಯೋಗʼ ಎನ್ನುವ ವಿನೂತನ ಕಾರ್ಯಕ್ರಮವನ್ನು ಜಾರಿಗೆ ತರಲಾಗಿದೆ ಎಂದರು. 
 
ಈ ಉದ್ದೇಶಕ್ಕಾಗಿ ಪ್ರತಿಷ್ಠಿತ ಟಾಟಾ ಟೆಕ್ನಾಲಜೀಸ್‌ ಸೇರಿ ಇಪ್ಪತ್ತು ಖಾಸಗಿ ಕಂಪನಿಗಳ ಜತೆ ರಾಜ್ಯ ಸರಕಾರ ಒಪ್ಪಂದ ಮಾಡಿಕೊಂಡಿದೆ. ಸುಮಾರು 250 ಕೋಟಿ ರೂ. ವೆಚ್ಚದಲ್ಲಿ ಕಟ್ಟಡ ಸೇರಿ ಮೂಲಸೌಕರ್ಯಗಳನ್ನು ಒದಗಿಸಲಾಗುತ್ತಿದೆ ಎಂದು ಅವರು ತಿಳಿಸಿದರು. 
 
ಬಹಳ ಹಿಂದೆಯೇ ಸ್ಥಾಪನೆಗೊಂಡ ಐಟಿಐ ಸಂಸ್ಥೆಗಳು ರಾಜ್ಯದ ವಿವಿಧ ಅಭಿವೃದ್ಧಿಪರ ಕ್ಷೇತ್ರಗಳಿಗೆ ಮಾನವ ಸಂಪನ್ಮೂಲವನ್ನು ಒದಗಿಸುತ್ತಿವೆ ನಿಜ. ಆದರೆ, ಅಲ್ಲಿಂದ ಹಳೆಯ ಪಠ್ಯ ಓದಿದ ಪ್ರತಿಭೆಗಳು ಹೊರಬರುತ್ತಿವೆ. ಹೀಗಾಗಿ ಪ್ರಸಕ್ತ ಕಾಲದ ಜಾಗತಿಕ ಕೈಗಾರಿಕಾ ಅಗತ್ಯಗಳು ಹಾಗೂ ಕೃಷಿ, ಕೈಗಾರಿಕೆ, ಸೇವೆ, ತಂತ್ರಜ್ಞಾನ ಸೇರಿದಂತೆ ಎಲ್ಲ ಕ್ಷೇತ್ರಗಳಿಗೂ ನುರಿತ ಮಾನವ ಸಂಪನ್ಮೂಲವನ್ನು ಒದಗಿಸಲು ಇಷ್ಟೂ ಐಟಿಐಗಳಿಗೆ ಕಾಯಕಲ್ಪ ನೀಡಲಾಗುವುದು ಎಂದು ಅವರು ಹೇಳಿದರು. 
 
ಐಟಿಐಗಳಲ್ಲಿ 150 ಹೊಸ ಲ್ಯಾಬ್‌ಗಳನ್ನು ಸ್ಥಾಪಿಸಲಾಗುವುದು ಹಾಗೂ 75 ಹಳೆಯ ಲ್ಯಾಬ್‌ಗಳಿದ್ದು, ಅವುಗಳನ್ನು ಮೇಲ್ದರ್ಜೆಗೇರಿಸಲಾಗುವುದು. ಇನ್ನು 75 ಕಡೆ ಲ್ಯಾಬ್‌ಗಳು ಇಲ್ಲ, ಅಂಥ ಕಡೆ ಲ್ಯಾಬ್‌ಗಳನ್ನು ಸ್ಥಾಪನೆ ಮಾಡಲಾಗುವುದು. ಎಂದು ಡಿಸಿಎಂ ಮಾಹಿತಿ ನೀಡಿದರು. 
 
ರಾಷ್ಟ್ರೀಯ ಕುಶಲತೆಯ ಮಾನದಂಡಕ್ಕೆ ಅನುಗುಣವಾಗಿ 4.0 ಸೂಚ್ಯಂಕಕ್ಕೆ ಅನುಸಂಧಾನ ಮಾಡುವ ನಿಟ್ಟಿನಲ್ಲಿ ಐಟಿಐಗಳನ್ನು ಸರ್ವ ರೀತಿಯಲ್ಲೂ ಅಭಿವೃದ್ಧಿಪಡಿಸಲಾಗುವುದು. ಈ ಗುರಿ ಈಡೇರಿಕೆಗೆ ಟಾಟಾ ಟೆಕ್ನಾಲಜೀಸ್‌ ಸೇರಿ ಇಪ್ಪತ್ತು ಖಾಸಗಿ ಕಂಪನಿಗಳ ಸರಕಾರ ಒಪ್ಪಂದ ಮಾಡಿಕೊಂಡಿದೆ ಎಂದು ಡಿಸಿಎಂ ಹೇಳಿದರು. 
 
ತರಬೇತಿ ಒಪ್ಪಂದಗಳು: 
 
ಐಟಿಐ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುವವರಿಗೆ ಉದ್ಯೋಗ ಕಾಯಂ ಎಂಬ ಮಾತನ್ನು ಸರಕಾರ ಸತ್ಯ ಮಾಡಲಿದೆ. ಅದೇ ರೀತಿ ಕೌಶಲ್ಯ ತರಬೇತಿಗೂ ಹೆಚ್ಚು ಒತ್ತು ನೀಡಲಾಗುತ್ತಿದೆ. ಇದಕ್ಕಾಗಿ ಸರಕಾರ ದೊಡ್ಡ ದೊಡ್ಡ ಕೈಗಾರಿಕೆಗಳ ಜತೆ ಕೈಜೋಡಿಸಿ ತರಬೇತಿ ಕೊಡಿಸಲಾಗುವುದು. ಇದಕ್ಕೆ ಸಂಬಂಧಿಸಿ ನಾಳೆ (ಗುರುವಾರ) ಹತ್ತಾರು ಕಂಪನಿಗಳ ಜತೆ ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಒಪ್ಪಂದಗಳು ಏರ್ಪಡಲಿವೆ ಎಂದು ಅವರು ತಿಳಿಸಿದರು. 
 
ಉದ್ಯೋಗ ಮೇಳ: 
 
ಕೋವಿಡ್‌ ಹಿನ್ನೆಲೆಯಲ್ಲಿ ಆನ್‌ಲೈನ್‌ ಜಾಬ್‌ ಮೇಳಗಳನ್ನು ವರ್ಷವಿಡೀ ಮಾಡಲು ನಿಶ್ಚಯ ಮಾಡಲಾಗಿದೆ. ಈ ಮೂಲಕ ನಿರಂತರವಾಗಿ ಉದ್ಯೋಗಾವಶಗಳನ್ನು ಸೃಷ್ಟಿ ಮಾಡಲಾಗುತ್ತದೆ. ಇದಕ್ಕೂ ಸಿಎಂ ಅವರು ಚಾಲನೆ ನೀಡಲಿದ್ದಾರೆ ಎಂದು ಇದೇ ವೇಳೆ ಡಿಸಿಎಂ ತಿಳಿಸಿದರು. 
 
ರಾಜ್ಯದಲ್ಲಿ ಹೊಸದಾಗಿ ಇನ್ನೂ ನಾಲ್ಕು ಜಿಟಿಟಿಸಿಗಳನ್ನು ಸ್ಥಾಪನೆ ಮಾಡಲಾಗುತ್ತಿದೆ. ರಾಜ್ಯದಲ್ಲಿ ಜಿಟಿಡಟಿಸಿಗಳ ಸಂಖ್ಯೆಯನ್ನು 30ಕ್ಕೆ ಏರಿಸಲು ನಿರ್ಧರಿಸಲಾಗಿದೆ ಎಂದರು ಅವರು. 
 
ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಸಂಸ್ಥೆ, ನಿಗಮಗಳನ್ನು ಒಂದೇ ಸೂರಿನಡಿ ತರುವ ಸಲುವಾಗಿ ಹಾಗೂ ಸಾರ್ವಜನಿಕರಿಗೆ ಮತ್ತು ಯುವಜನತೆಗೆ ಇಲಾಖೆಗೆ ಸಂಬಂಧಿಸಿದ ಮಾಹಿತಿ, ಒಂದೇ ಕಚೇರಿಯಲ್ಲಿ ಲಭ್ಯವಾಗುವಂತೆ ರಾಮನಗರ ಜಿಲ್ಲೆಯ ರಾಮನಗರದಲ್ಲಿ ಸ್ಕಿಲ್ ಹಬ್ ಪ್ರಾರಂಭಿಸಲಾಗುತ್ತಿದೆ ಎಂದು ಡಿಸಿಎಂ ಹೇಳಿದರು. 
ಕೌಶಲ್ಯಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಸೆಲ್ವಕುಮಾರ್‌, ಉದ್ಯೋಗ ಮತ್ತು ಕೈಗಾರಿಕಾ ಇಲಾಖೆ ಆಯುಕ್ತರಾದ ಹರೀಶ್‌, ಕೌಶಲ್ಯ ಕರ್ನಾಟಕದ ವ್ಯವಸ್ಥಾಪಕ ನಿರ್ದೇಶಕ ಅಶ್ವಿನ್ ಗೌಡ, ಜೀವನೋಪಾಯ ಇಲಾಖೆಯ ವ್ಯವಸ್ಥಾಪಕ ನಿರ್ದೇಶಕಿ ಮಂಜುಶ್ರೀ, ಜಿಟಿಡಿಸಿ ವ್ಯವಸ್ಥಾಪಕ ನಿರ್ದೇಶಕ ರಾಘವೇಂದ್ರ ಮುಂತಾದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ತುರ್ತು ಪರಿಸ್ಥಿತಿ ವೇಳೆ ಬಲವಂತದ ಶಸ್ತ್ರಚಿಕಿತ್ಸೆ ಮೂಲಕ ಜನಸಂಖ್ಯಾ ನಿಯಂತ್ರಣ: ಸಿ.ಟಿ.ರವಿ