Publish Date: Wed, 03 Apr 2024 (12:36 IST)
Updated Date: Wed, 03 Apr 2024 (12:39 IST)
ಮಂಡ್ಯ: ಸುಮಲತಾ ಅಂಬರೀಶ್ ಜೊತೆಗೆ ಮಂಡ್ಯದಲ್ಲಿ ಬೆಂಬಲಿಗರ ಸಭೆಯಲ್ಲಿ ಪಾಲ್ಗೊಂಡಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಮ್ಮ ಏನೇ ನಿರ್ಧಾರ ತೆಗೆದುಕೊಂಡರೂ ಜೊತೆಯಾಗಿರುತ್ತೇನೆ ಎಂದಿದ್ದಾರೆ.
ಪುತ್ರ ಅಭಿಷೇಕ್ ಅಂಬರೀಶ್ ಮತ್ತು ದರ್ಶನ್ ಜೊತೆಗೆ ಇಂದು ಮಂಡ್ಯದಲ್ಲಿ ಸುಮಲತಾ ಬೆಂಬಲಿಗರ ಸಭೆ ನಡೆಸುತ್ತಿದ್ದಾರೆ. ಇದಕ್ಕೆ ಮೊದಲು ಕಾಳಿಕಾಂಬ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ಪೂಜೆ ವೇಳೆ ದರ್ಶನ್, ಅಭಿಷೇಕ್ ಕೂಡಾ ಸಂಕಲ್ಪ ಮಾಡಿದರು.
ಅದಾದ ಬಳಿಕ ಸಭೆಗೆ ಬಂದ ಸುಮಲತಾ ಜೊತೆಗೆ ವೇದಿಕೆಯಲ್ಲಿ ದರ್ಶನ್ ಮತ್ತು ಅಭಿಷೇಕ್ ಕೂಡಾ ಉಪಸ್ಥಿತರಿದ್ದರು. ಸಭೆಯಲ್ಲಿ ಭಾಷಣಕ್ಕೆ ಮೊದಲು ಸುಮಲತಾ ಇಷ್ಟು ದಿನ ಸಂಸದೆಯಾಗಿ ಮಾಡಿದ ಕೆಲಸಗಳ ಬಗ್ಗೆ ವಿಡಿಯೋ ಮೂಲಕ ವಿವರಣೆ ನೀಡಲಾಯಿತು. ಬಳಿಕ ದರ್ಶನ್ ಜನರನ್ನುದ್ದೇಶಿಸಿ ಮಾತನಾಡಿದ್ದಾರೆ.
ಈ ವೇಳೆ ಮಾತನಾಡಿದ ದರ್ಶನ್, ಇಷ್ಟು ದಿನ ಅಮ್ಮ ಮಾಡಿದ ಕೆಲಸಗಳನ್ನು ನೀವು ನೋಡಿದ್ದೀರಿ. ನಾನು ರಾಜಕೀಯ ಮಾತನಾಡಲು ಹೋಗಲ್ಲ. ಅಮ್ಮ ಏನೇ ನಿರ್ಧಾರ ಮಾಡಿದರೂ ಅವರ ಜೊತೆಗೆ ನಾನಿರುತ್ತೇನೆ. ಇಷ್ಟು ದಿನ ಮಂಡ್ಯದ ಜನ ನಮ್ಮ ಮೇಲೆ ಪ್ರೀತಿ ತೋರಿದ್ದೀರಿ. ಮುಂದೆಯೂ ಹೀಗೇ ಮುಂದುವರಿಯಲಿ ಎಂದಿದ್ದಾರೆ.