ಉಜಿರೆ (ದಕ್ಷಿಣ ಕನ್ನಡ): 4 ತಿಂಗಳ ಹೆಣ್ಣು ಮಗುವನ್ನು ಕಾಡಿನಲ್ಲಿ ಬಿಟ್ಟುಹೋದ ಘಟನೆ ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯ ಬೆಳಾಲು ಗ್ರಾಮಾದ ಕೊಡೋಳುಕೆರೆಯಲ್ಲಿ ನಡೆದಿದೆ.
ಕಾಡಿನಲ್ಲಿ ಮಗು ಅಳುತ್ತಿರುವುದನ್ನು ಕೇಳಿ ದಾರಿಹೋಕರೊಬ್ಬರು ನೋಡಿದಾಗ ನಾಲ್ಕು ತಿಂಗಳ ಹೆಣ್ಣು ಮಗು ಕಾಡಿನ ಮಧ್ಯೆ ಪತ್ತೆಯಾಗಿದೆ. ಮಗು ಆರೋಗ್ಯಕರವಾಗಿದೆ ಎಂದು ತಿಳಿದು ಬಂದಿದೆ.
ದಾರಿಹೋಕರೊಬ್ಬರು ನೀಡಿದ ಮಾಹಿತಿಯಂತೆ ಧರ್ಮಸ್ಥಳ ಪೊಲೀಸರು ಮತ್ತು ಮಹಿಳಾ ಹಾಗೂ ಮಕ್ಕಳ ಅಭಿವೃದ್ಧಿ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮಗುವಿಗೆ ಸೂಕ್ತ ಚಿಕಿತ್ಸೆ ನೀಡಿ, ಅದರ ಆರೈಕೆಗೆ ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಬೆಳಾಲು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ವಿದ್ಯಾ ಶ್ರೀನಿವಾಸ ಗೌಡ ತಿಳಿಸಿದ್ದಾರೆ