ವಾಸದ ಮನೆಯ ಹೊರಗೆ ಮತ್ತು ಮನೆಯ ಒಳಗಿದ್ದ 2 ಗ್ಯಾಸ್ ಸಿಲಿಂಡರ್‌ಗಳು ಸ್ಪೋಟಗೊಂಡ ಘಟನೆ ಹಾಸನ ಜಿಲ್ಲೆ ಬೇಲೂರು ತಾಲ್ಲೂಕಿನ, ನಾಗೇನಹಳ್ಳಿ ಗ್ರಾಮದಲ್ಲಿ ತಡರಾತ್ರಿ ನಡೆದಿದೆ. ಅದೃಷ್ಟವಶಾತ್ ಮನೆಯಲ್ಲಿದ್ದ ಮೂವರು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಧ್ಯ ರಾತ್ರಿ 2.45 ರ ಸುಮಾರಿಗೆ ಗ್ಯಾಸ್ ಸಿಲಿಂಡರ್ ಲೀಕ್ ಆಗಿ ಸ್ಪೋಟಗೊಂಡಿದೆ. ಮನೆಯಿಂದ ಹೊರಗೋಡಿ ಬಂದು ಮೂವರು ಪ್ರಾಣ ಉಳಿಸಿಕೊಂಡಿದ್ದಾರೆ. ಸ್ಪೋಟದ ತೀವ್ರತೆಗೆ ಮನೆಗೆ ಬೆಂಕಿ ಹೊತ್ತಿಕೊಂಡಿದೆ. ಮನೆಯಲ್ಲಿದ್ದ ವಸ್ತುಗಳು ಸಂಪೂರ್ಣ ಹಾನಿಯಾಗಿವೆ. ಶಬ್ದ ಕೇಳಿ ಸ್ಥಳೀಯರು ದೌಡಾಯಿಸಿದ್ದಾರೆ. ಗ್ರಾಮ ಪಂಚಾಯಿತಿ ಸದಸ್ಯ ಹರೀಶ್ ಹಾಗೂ ಸ್ನೇಹಿತರು ಬಂದು ಬೆಂಕಿ ಅಕ್ಕಪಕ್ಕದ ಮನೆಗೆ ವ್ಯಾಪಿಸದಂತೆ ನೀರು, ಮರಳು ಎರಚಿ ಬೆಂಕಿ ನಂದಿಸಿದ್ದಾರೆ. ಅಗ್ನಿಶಾಮಕ ದಳ ಸ್ಥಳಕ್ಕೆ ಬರುವ ಮುನ್ನವೇ ಸ್ಥಳೀಯರು ಸೇರಿ ಬೆಂಕಿ ನಂದಿಸಿದ್ರು. ಸ್ಪೋಟದ ರಭಸಕ್ಕೆ ಗೋಡೆ ಕುಸಿದಿದ್ದು, ಹೆಂಚುಗಳು ನೆಲಕ್ಕುರುಳಿವೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದರು. ಅರೇಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.