Select Your Language

Notifications

webdunia
webdunia
webdunia
webdunia

ರಾಜ್ಯ ಸರ್ಕಾರದ್ದು ಮಾರ್ಜಾಲ ನ್ಯಾಯ: ಸಿಟಿ ರವಿ ವಾಗ್ದಾಳಿ

CT Ravi

Krishnaveni K

ಬೆಂಗಳೂರು , ಶುಕ್ರವಾರ, 22 ಆಗಸ್ಟ್ 2025 (14:29 IST)
ಬೆಂಗಳೂರು: ವಿಶಿಷ್ಟ ವರ್ಗವಾದ ಅಲೆಮಾರಿ ಜನಾಂಗದವರನ್ನು ಬಲಾಢ್ಯರ ಜೊತೆ ಸೇರಿಸಿದ್ದು, ಸಾಮಾಜಿಕ ಅನ್ಯಾಯ ಎಂದು ಬಿಜೆಪಿ ರಾಷ್ಟ್ರೀಯ ಮಾಜಿ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಅವರು ವಿಶ್ಲೇಷಿಸಿದ್ದಾರೆ.

ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತಿರುವ ಅಲೆಮಾರಿ ಮತ್ತು ಅರೆ ಅಲೆಮಾರಿ ಸಮಾಜದ ಪ್ರತಿಭಟನೆಯಲ್ಲಿ ಇಂದು ಭಾಗವಹಿಸಿದ ಬಳಿಕ ಅವರು ಮಾಧ್ಯಮಗಳ ಜೊತೆ ಮಾತನಾಡಿದರು. ಸೌಲಭ್ಯ, ವಿದ್ಯೆ, ಸಂಪತ್ತು, ನೌಕರಿಯಿಂದ ವಂಚಿತವಾದ ಜನಾಂಗಕ್ಕೆ ಅವಕಾಶ ಕೊಡುವುದೇ ಒಳ ಮೀಸಲಾತಿಯ ಉದ್ದೇಶ ಎಂದು ವಿವರಿಸಿದರು. ಸರಕಾರ ಅವೆಲ್ಲವನ್ನೂ ಪರಿಗಣಿಸಿಲ್ಲ. ನ್ಯಾ.ಸದಾಶಿವ, ನ್ಯಾ. ನಾಗಮೋಹನ್‍ದಾಸ್, ಮಾಜಿ ಸಚಿವ ಮಾಧುಸ್ವಾಮಿ ವರದಿಗಳನ್ನೂ ಸರಕಾರ ಪರಿಗಣಿಸಿಲ್ಲ ಎಂದು ಟೀಕಿಸಿದರು.
 
ಲಂಬಾಣಿ, ಬೋವಿ, ಕೊರಚ, ಕೊರಮ ಸಮುದಾಯಕ್ಕೆ ನಾವು ಶೇ 4.5 ಕೊಟ್ಟಿದ್ದೆವು. ಅದನ್ನು ಕಡಿತಗೊಳಿಸಿದ್ದಾರೆ. ಈ ಅಲೆಮಾರಿ ಜನಾಂಗದವರಿಗೆ ಶೇ 1 ಕೊಡಲಾಗಿತ್ತು. ಅವರನ್ನು ಲೆಕ್ಕಕ್ಕೇ ತೆಗೆದುಕೊಂಡಿಲ್ಲ; ನಾವು ಯಾರಿಗೂ ಮೋಸ ಮಾಡದೆ ನ್ಯಾಯಯುತವಾಗಿ ಕೊಟ್ಟಿದ್ದಕ್ಕೆ ಅನ್ಯಾಯ ಮಾಡಿದ್ದಾರೆ ಎಂದರು. ಇವರು ಮಾರ್ಜಾಲ ನ್ಯಾಯ ಮಾಡಿದ್ದಾರೆ. ಖಾಜಿ ನ್ಯಾಯ ಮಾಡಿದ್ದಾರೆ. ಸಂವಿಧಾನಕ್ಕೆ ವಿರುದ್ಧವಾದ ಕ್ರಮ ತೆಗೆದುಕೊಂಡಿದ್ದಾರೆ. ಇದನ್ನು ಸರಿಪಡಿಸಿ ಎಂದು ಆಗ್ರಹಿಸಿದರು. ಧ್ವನಿ ಇಲ್ಲದ ಅಲೆಮಾರಿ ಜನಾಂಗದವರಿಗೆ ಧ್ವನಿ ಕೊಡಿ; ಇಲ್ಲದಿದ್ದರೆ ಇತಿಹಾಸ ನಿಮ್ಮನ್ನು ಕ್ಷಮಿಸುವುದಿಲ್ಲ ಎಂದು ಎಚ್ಚರಿಸಿದರು.
 
 
3 ವರ್ಗ ಮಾಡಲು ಇವರೇನು ಸರ್ವಜ್ಞರೇ?
ಇವರೇನು ಸರ್ವಜ್ಞರೇ? 2 ಗಂಟೆಗಳ ಒಳಗೆ ಯಾವ ಆಧಾರದಲ್ಲಿ 3 ವರ್ಗಗಳಾಗಿ ವಿಂಗಡಿಸಿದ್ದಾರೆ? ಏನಾದರೂ ಒಂದು ಆಧಾರ ಬೇಕಲ್ಲವೇ? ಏನು ಆಧಾರ ಎಂದು ಕೇಳಿದರು. ಜನಗಣತಿಯೇ, ಜಾತಿಗಣತಿಯೇ? ಸಾಮಾಜಿಕ, ಆರ್ಥಿಕ ಸಮೀಕ್ಷೆ ಆಧಾರವೇ? ಯಾವುದರ ಮೇಲೆ ಇದನ್ನು ಮಾಡಿದ್ದಾರೆ ಎಂದು ಸಿ.ಟಿ. ರವಿ ಅವರು ಕೇಳಿದರು.

ಅವರಿಗೆ ಖರ್ಗೆ ಸಾಹೇಬರು, ಮಹದೇವಪ್ಪ, ಆಂಜನೇಯರಿಗೆ ತೃಪ್ತಿ ಆದರೆ ಸಾಕೇ? ಯಾರೋ 4 ಜನರನ್ನು ತೃಪ್ತಿ ಪಡಿಸುವ ಕಡೆಗೆ ಅವರ ನೀತಿ ಇತ್ತೇ ಹೊರತು ಸಾಮಾಜಿಕ ನ್ಯಾಯ ಕೊಡುವ ಕಡೆ ಇಲ್ಲ ಎಂಬುದು ಸ್ಪಷ್ಟವಾಗುತ್ತದೆ ಎಂದು ಆಕ್ಷೇಪಿಸಿದರು. ಇವರು ಸಾಮಾಜಿಕ ಅನ್ಯಾಯ ಮಾಡಿದ್ದಾರೆ ಎಂದು ಆರೋಪಿಸಿದರು.
 
ಈ ಕುರಿತು ಸದನದಲ್ಲಿ ಧ್ವನಿ ಎತ್ತುತ್ತೇವೆ ಎಂದು ಅವರು ಪ್ರಶ್ನೆಗೆ ಉತ್ತರ ನೀಡಿದರು. 2012ರಲ್ಲಿ ನ್ಯಾ. ಸದಾಶಿವ ಆಯೋಗ ವರದಿ ಕೊಟ್ಟಿದೆ. 6 ವರ್ಷ ಕಾಂಗ್ರೆಸ್ಸೇ ಅಧಿಕಾರದಲ್ಲಿತ್ತು. ಕುಂಡೆ ಅಡಿಗೆ ಹಾಕಿ ಕೂತಿದ್ದರು ಎಂದು ಆಕ್ಷೇಪಿಸಿದರು. 112 ಕೋಟಿ ಖರ್ಚು ಮಾಡಿದ್ದು ಬಿಟ್ಟರೆ ಬೇರೇನೂ ಇಲ್ಲ ಎಂದು ಟೀಕಿಸಿದರು.
 
ಮತ್ತೆ ಕಳೆದ 26 ತಿಂಗಳಿನಿಂದ ಕಾಂಗ್ರೆಸ್ಸೇ ಇಲ್ಲಿ ಅಧಿಕಾರದಲ್ಲಿದೆ. 26 ತಿಂಗಳಲ್ಲಿ ಸಭೆ ನಡೆಸುತ್ತ, ನೆಪ ಹೇಳುತ್ತ ಬಂದರು. ಈಗ ನ್ಯಾ. ನಾಗಮೋಹನ್‍ದಾಸ್ ವರದಿಯನ್ನೂ ಕೈ ಬಿಟ್ಟು ಸಚಿವಸಂಪುಟದ 2 ಗಂಟೆ ಸಭೆಯಲ್ಲಿ ನಿರ್ಧಾರ ಮಾಡಿದ್ದಾರೆ. ಇವರೇ ಬೃಹಸ್ಪತಿಗಳಿದ್ದರೆ ಇವರಿಗೇ ಎಲ್ಲ ಗೊತ್ತಿದ್ದಿದ್ದರೆ ನ್ಯಾ. ನಾಗಮೋಹನ್‍ದಾಸ್ ವರದಿ ಯಾಕೆ ಬೇಕಿತ್ತು. ನೂರಾರು ಕೋಟಿ ಯಾಕೆ ಖರ್ಚು ಮಾಡಿದ್ದಾರೆ? ನ್ಯಾ. ಸದಾಶಿವ ಆಯೋಗ, ಮಾಜಿ ಸಚಿವ ಮಾಧುಸ್ವಾಮಿ ವರದಿಗಳು ಇವರಿಗೆ ಲೆಕ್ಕಕ್ಕೇ ಇಲ್ಲವೇ ಎಂದು ಕೇಳಿದರು. ಸುಪ್ರೀಂ ಕೋರ್ಟ್ ತೀರ್ಪು ಕೊಟ್ಟು 13 ತಿಂಗಳಾಗಿದೆಯಲ್ಲವೇ? ಆ ತೀರ್ಪಿನ ಆಶಯವನ್ನೂ ಮೂಲೆಗುಂಪು ಮಾಡಿದ್ದಾರೆ. ಅದನ್ನು ಲೆಕ್ಕಕ್ಕೆ ತೆಗೆದುಕೊಂಡಿಲ್ಲ ಎಂದು ತಿಳಿಸಿದರು.
 
 
 
 
 

Share this Story:

Follow Webdunia kannada

ಮುಂದಿನ ಸುದ್ದಿ

ಧರ್ಮಸ್ಥಳದಲ್ಲಿ ಎಷ್ಟು ಸ್ಥಳದಲ್ಲಿ ಅಸ್ಥಿಪಂಜರ ಸಿಕ್ಕಿತ್ತು: ಸಿಎಂ ಹೇಳಿದ ಶಾಕಿಂಗ್ ಸತ್ಯ