Select Your Language

Notifications

webdunia
webdunia
webdunia
webdunia

ಸಿದ್ದರಾಮಯ್ಯಗೆ ಎಲ್ಲದಕ್ಕೂ ಕೇಂದ್ರದ ಮೇಲೆ ಗೂಬೆ ಕೂರಿಸೋ ಚಾಳಿ: ಸಿಟಿ ರವಿ ವಾಗ್ದಾಳಿ

CT Ravi

Krishnaveni K

ಬೆಂಗಳೂರು , ಶುಕ್ರವಾರ, 7 ನವೆಂಬರ್ 2025 (13:49 IST)
ಬೆಂಗಳೂರು: ಕಬ್ಬು ಬೆಳೆಗಾರರ ಪ್ರತಿಭಟನೆಗೂ ಕೇಂದ್ರ ಸರ್ಕಾರವೇ ಹೊಣೆ ಎಂದಿರುವ ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ನಾಯಕ ಸಿಟಿ ರವಿ ವಾಗ್ದಾಳಿ ನಡೆಸಿದ್ದಾರೆ. ಎಲ್ಲದಕ್ಕೂ ಕೇಂದ್ರದ ಮೇಲೆ ಗೂಬೆ ಕೂರಿಸೋದು ಸಿದ್ದರಾಮಯ್ಯ ಚಾಳಿ ಎಂದಿದ್ದಾರೆ.

‘ಕುಣಿಯಲಾಗದವನು ನೆಲ ಡೊಂಕು ಎಂದನಂತೆ ಎಂಬ ಗಾದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸರಿಯಾಗಿ ಹೊಂದುತ್ತದೆ. ಕಳೆದ ಹಲವು ದಿನಗಳಿಂದ ರಾಜ್ಯದ ಕಬ್ಬು ಬೆಳೆಗಾರರು ಪ್ರತಿಭಟನೆ ನಡೆಸುತ್ತಿದ್ದರೂ ತಮಗೂ ಅದಕ್ಕೂ ಸಂಬಂಧವೇ ಇಲ್ಲ ಎನ್ನುವಂತೆ ಮುಖ್ಯಮಂತ್ರಿ ಮತ್ತು ಸಚಿವರು ಹಾಯಾಗಿದ್ದರು.

ಬಿಜೆಪಿ ರೈತರ ಪ್ರತಿಭಟನೆಗೆ ಬೆಂಬಲ ನೀಡಿದ ನಂತರ ಸಿದ್ದರಾಮಯ್ಯನವರಿಗೆ ರೈತರನ್ನು ಇನ್ನು ಕಡೆಗಣಿಸಿದರೆ ಪರಿಸ್ಥಿತಿ ಸರಿ ಇರುವುದಿಲ್ಲ ಎನ್ನುವುದು ಅರಿವಿಗೆ ಬಂದಿದೆ. ಇದಕ್ಕೆ ಪರಿಹಾರದ ರೂಪದಲ್ಲಿ ರೈತರ ಬೇಡಿಕೆಗಳಿಗೆ ಸ್ಪಂದಿಸುವ ಬದಲು, ಸಿದ್ದರಾಮಯ್ಯನವರು ಪತ್ರಿಕಾಗೋಷ್ಠಿ ನಡೆಸಿ, ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸಿದ್ದಾರೆ.

ಕೇಂದ್ರ ಸರ್ಕಾರ ಎಫ್ಆರ್‌ಪಿ ನಿಗದಿ ಮಾಡಿದೆ ಎಂದು ಕೈ ತೊಳೆದುಕೊಳ್ಳಲು ಸಿದ್ದರಾಮಯ್ಯನವರು ಪ್ರಯತ್ನಿಸುತ್ತಿದ್ದಾರೆ. ಅಂದರೆ, ರಾಜ್ಯ ಸರ್ಕಾರಕ್ಕೆ ರೈತರ ಹಿತ ಕಾಯುವ ಉದ್ದೇಶವೇ ಇಲ್ಲ ಎಂದಾಯಿತಲ್ಲ? ಕೇಂದ್ರ ಸರ್ಕಾರ ನಿಗದಿಪಡಿಸಿದ ಎಫ್ಆರ್‌ಪಿಗೆ ಹೆಚ್ಚುವರಿಯಾಗಿ ರಾಜ್ಯ ಸರ್ಕಾರ ಸಹಾಯ ಧನ ನೀಡಬಾರದು ಎಂದೇನಾದರೂ ಇದೆಯೇ? ಅಥವಾ ರಾಜ್ಯದ ಬೊಕ್ಕಸವನ್ನು ಬರಿದಾಗಿಸಿ, ರಾಜ್ಯವನ್ನು ದಿವಾಳಿ ಎಬ್ಬಿಸಿದ್ದೀರೇ?

ಸಾಮಾಜಿಕ ನ್ಯಾಯದ ಹರಿಕಾರರಂತೆ ಮಾತನಾಡುವ ಸಿದ್ದರಾಮಯ್ಯನವರಿಗೆ ರೈತರ ಗೋಳು ಕೇಳದಿರುವುದು ವಿಪರ್ಯಾಸವೇ ಸರಿ. ಪ್ರತಿಭಟನಾನಿರತ ರೈತರನ್ನು ಮಾತನಾಡಿಸುವ, ಅವರ ಸಮಸ್ಯೆಗೆ ನ್ಯಾಯಯುತ ಪರಿಹಾರ ಒದಗಿಸುವ ಇಚ್ಛಾಶಕ್ತಿಯೂ ಮುಖ್ಯಮಂತ್ರಿಗಳಿಗಿಲ್ಲ! ಆದರೆ ತಮ್ಮ ಅಸಾಮರ್ಥ್ಯವನ್ನು ಮುಚ್ಚಿಹಾಕಲು ಕೇಂದ್ರ ಸರ್ಕಾರವನ್ನು ದೂಷಿಸುವುದನ್ನು ಅವರು ಮರೆತಿಲ್ಲ.

ಒಂದು ವೇಳೆ ಬಿಜೆಪಿ ರೈತರ ಬೆನ್ನಿಗೆ ನಿಲ್ಲದಿರುತ್ತಿದ್ದರೆ ರಾಜ್ಯ ಸರ್ಕಾರದ ಜಾಣ ಕಿವುಡು ಮುಂದುವರಿದಿರುತ್ತಿತ್ತು. ರೈತರ ಮೇಲೆ ಲಾಠಿ ಚಾರ್ಜ್ ನಡೆಸಿ, ಅವರ ಪ್ರತಿಭಟನೆ ಹತ್ತಿಕ್ಕಲೂ ಈ ಸರ್ಕಾರ ಹೇಸುತ್ತಿರಲಿಲ್ಲ. ರೈತರು ಮತ್ತು ಬಿಜೆಪಿಯ ಸಂಘಟಿತ ಹೋರಾಟದಿಂದ ಕಾಂಗ್ರೆಸ್ ಸರ್ಕಾರಕ್ಕೆ ಬಿಸಿ ಮುಟ್ಟಿದೆ. ಮುಂದಿನ ದಿನಗಳಲ್ಲಿ ರೈತರು ಆಗ್ರಹಿಸುತ್ತಿರುವ ನ್ಯಾಯ ಅವರಿಗೆ ಸಿಗುವ ತನಕ ಬಿಜೆಪಿ ಹೋರಾಟ ನಡೆಸಲಿದೆ’ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

Arecanut Price: ಇಂದು ಅಡಿಕೆ ರೇಟ್ ಎಷ್ಟು ನೋಡಿ