Select Your Language

Notifications

webdunia
webdunia
webdunia
webdunia

ಸತ್ಯಕ್ಕೆ ಜೈ ಎನ್ನಿ, ರಾಜೀನಾಮೆ ಕೊಡಿ ಸಿದ್ದರಾಮಯ್ಯನವರೇ: ಸಿಟಿ ರವಿ

CT Ravi

Krishnaveni K

ಬೆಂಗಳೂರು , ಮಂಗಳವಾರ, 24 ಸೆಪ್ಟಂಬರ್ 2024 (15:43 IST)
ಬೆಂಗಳೂರು: ಹೈಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಯವರಿಗೆ ರಾಜೀನಾಮೆ ಕೊಡುವುದೊಂದೇ ದಾರಿ ಎಂದು ರಾಜ್ಯ ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಅವರು ವಿಶ್ಲೇಷಿಸಿದರು.
 
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಭ್ರಷ್ಟಾಚಾರದ ವಿರುದ್ಧ ಬಿಜೆಪಿ ನಡೆಸಿದ ಹೋರಾಟಕ್ಕೆ ಜಯ ಲಭಿಸಿದೆ. ‘ಸತ್ಯಮೇವ ಜಯತೇ’ ಎಂದು ನುಡಿದರು.

ಮಾನ್ಯ ರಾಜ್ಯಪಾಲರು ಪ್ರಾಸಿಕ್ಯೂಶನ್‍ಗೆ ಅನುಮತಿ ಕೊಟ್ಟಿದ್ದೇ ಸಂವಿಧಾನಬಾಹಿರ, ಅಪರಾಧ ಎಂದು ಆರೋಪಿಸಿದ ಕಾಂಗ್ರೆಸ್ಸಿಗರು, ಸಾರ್ವಜನಿಕವಾಗಿ ಕ್ಷಮೆ ಯಾಚನೆ ಮಾಡಬೇಕು. ಒಂದು ಸಾಂವಿಧಾನಿಕ ಹುದ್ದೆಯನ್ನು ಅಗೌರವಿಸಿದ ಕಾರಣಕ್ಕೋಸ್ಕರ ಸಾರ್ವಜನಿಕ ಕ್ಷಮೆ ಯಾಚನೆ ಮಾಡಬೇಕು ಎಂದು ಆಗ್ರಹಿಸಿದರು.

ಮುಖ್ಯಮಂತ್ರಿಗಳಿಗೆ ಬೇರೆ ದಾರಿ ಉಳಿದಿಲ್ಲ; ಅವರು ಕಾನೂನು ಪಂಡಿತರು. ಸಿಂಪಲ್ ಚೀಫ್ ಮಿನಿಸ್ಟರ್, ಕಾಸ್ಟ್ಲಿ ಲಾಯರನ್ನು ಕರೆಸಿ ವಾದ ಮಂಡಿಸಿದ್ದರು. ಸಿಎಂ ನೋಡೋಕೆ ಸಿಂಪಲ್. ಆದರೆ ಬಂದ ಲಾಯರ್‍ಗಳೆಲ್ಲರೂ ಕಾಸ್ಟ್ಲಿ. ಅವರೆಲ್ಲರೂ ವಾದ ಮಾಡಿದ್ದರೂ ಸತ್ಯವನ್ನು ಮುಚ್ಚಿಡಲು ಸಾಧ್ಯವಾಗಿಲ್ಲ. ಇನ್ನೆಲ್ಲಿಗೆ ಹೋದರೂ ಸತ್ಯ ಮುಚ್ಚಿಡಲು ಸಾಧ್ಯವಿಲ್ಲ. ಸುಳ್ಳು ಗೆಲ್ಲುವುದಿಲ್ಲ. ಸುಳ್ಳು ಹಿಡಿದುಕೊಂಡು ಹೋದರೆ ನಗೆಪಾಟಲಿಗೆ ಈಡಾಗುತ್ತೀರಿ ಎಂದು ಎಚ್ಚರಿಸಿದರು.

ನೀವೂ ಸತ್ಯಕ್ಕೆ ಜೈ ಎನ್ನಿ. ರಾಜೀನಾಮೆ ಕೊಡುವುದೊಂದೇ ನಿಮಗಿರುವ ದಾರಿ. ಸಿದ್ದರಾಮಯ್ಯನವರೇ ಇದಕ್ಕಿಂತ ಜಾಸ್ತಿ ಭಂಡತನ ಮಾಡದಿರಿ ಎಂದು ಕಿವಿಮಾತು ಹೇಳಿದರು. ಈಗ ಮಾಡಿದ್ದೇ ಜಾಸ್ತಿ ಭಂಡತನ. ಇನ್ನೂ ಭಂಡತನ ಮಾಡದಿರಿ ಎಂದು ಸಲಹೆ ನೀಡಿದರು. ರಾಜೀನಾಮೆ ಕೊಟ್ಟು ಕರ್ನಾಟಕದ ಘನತೆಯನ್ನು ಎತ್ತಿ ಹಿಡಿಯಿರಿ ಎಂದು ತಿಳಿಸಿದರು.

ನೀವು ಎಸಿಬಿ ಮೂಲಕ ಸಾಕಷ್ಟು ಕೇಸುಗಳನ್ನು ಮುಚ್ಚಿ ಹಾಕಿದ್ದೀರಿ. ಭ್ರಷ್ಟಾಚಾರ ಪ್ರಕರಣ ಬಂದ ಕಾರಣ ಲೋಕಾಯುಕ್ತವನ್ನೂ ದುರ್ಬಲಗೊಳಿಸಿದ್ದೀರಿ. ಬಳಿಕ ಎಸಿಬಿ ಮೂಲಕ ಕ್ಲೀನ್ ಚಿಟ್ ಕೊಡುವ ಕೆಲಸ ಮಾಡಿದ್ದೀರಿ ಎಂದು ಟೀಕಿಸಿದರು. ಎಲ್ಲ ಕಾಲದಲ್ಲೂ ಇದು ನಡೆಯದೆಂಬ ಸತ್ಯ ನಿಮಗೆ ಅರಿವಾಗಿದೆ ಎಂದು ಭಾವಿಸುವುದಾಗಿ ತಿಳಿಸಿದರು.

ಸಿದ್ದರಾಮಯ್ಯನವರೇ, ನೀವು ನ್ಯಾಯಾಲಯದ ತೀರ್ಪನ್ನು ಗೌರವಿಸಿ, ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡಿ ಎಂದು ಆಗ್ರಹಿಸಿದರು. ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ, ಬಿಜೆಪಿ ರಾಜ್ಯ ಸಹ ಉಸ್ತುವಾರಿ ಸುಧಾಕರ್ ರೆಡ್ಡಿ, ರಾಜ್ಯ ಪ್ರಧಾನ ಕಾರ್ಯದರ್ಶಿ ನಂದೀಶ್ ರೆಡ್ಡಿ, ರಾಜ್ಯಸಭಾ ಸದಸ್ಯ ಲೆಹರ್ ಸಿಂಗ್ ಸಿರೋಯ, ಶಾಸಕ ಚನ್ನಬಸಪ್ಪ ಅವರು ಉಪಸ್ಥಿತರಿದ್ದರು.
 
 
 

Share this Story:

Follow Webdunia kannada

ಮುಂದಿನ ಸುದ್ದಿ

ಬೆಂಗ್ಳೂರು ಬಗ್ಗೆ ನಾಲಿಗೆ ಹರೀಬಿಟ್ಟ ಸುಗಂಧ್ ಶರ್ಮಾಳನ್ನು ಕೆಲಸದಿಂದ ಕಿತ್ತೆಸೆದ ಕಂಪೆನಿ