Publish Date: Tue, 24 Sep 2024 (14:30 IST)
Updated Date: Tue, 24 Sep 2024 (14:33 IST)
ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು.
ಮುಡಾ ಹಗರಣ ಸಂಬಂಧ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ಸಿದ್ದರಾಮಯ್ಯಗೆ ಎದುರಾಗಿರುವ ಸಂಕಷ್ಟದ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಡಿಕೆ ಶಿವಕುಮಾರ್ ಅವರು, ಸಿದ್ದರಾಮಯ್ಯ ಅವರಿಗೆ ಸಂಪುಟ ಸಹೋದ್ಯೋಗಿಗಳಿಂದ ಸಂಪೂರ್ಣ ಬೆಂಬಲ ವ್ಯಕ್ತವಾಗುತ್ತಿದೆ. ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ಅಗತ್ಯವೇ ಇಲ್ಲ ಎಂದು ಹೇಳಿದರು.
ನನ್ನನ್ನು ಹೇಗೆ ಪಿತೂರಿ ಮಾಡಿ ಜೈಲಿಗೆ ಕಳುಹಿಸಲಾಗಿತ್ತು. ಅದೇ ಷಡ್ಯಂತ್ರವನ್ನು ಬಿಜೆಪಿಯವರು ಸಿದ್ದರಾಮಯ್ಯ ವಿರುದ್ಧ ಮಾಡಿದ್ದಾರೆ. ತಪ್ಪು ಮಾಡದ ಸಿದ್ದರಾಮಯ್ಯ ಅವರು ಯಾವುದೇ ಹಗರಣದಲ್ಲಿ ಭಾಗಿಯಾಗಿಲ್ಲ ಎಂದು ಸಿಎಂ ಪರ ಬ್ಯಾಟಿಂಗ್ ಮಾಡಿದರು.
ಬಿಜೆಪಿಯ ರಾಜಕೀಯ ಪಿತೂರಿ ಇದಾಗಿದ್ದು, ನಾವೆಲ್ಲ ಸಿದ್ದರಾಮಯ್ಯ ಹಿಂದೆ ನಿಂತಿದ್ದೇವೆ ಎಂದು ಬೆಂಬಲ ಸೂಚಿಸಿದರು.