Select Your Language

Notifications

webdunia
webdunia
webdunia
webdunia

ನವೆಂಬರ್-ಡಿಸೆಂಬರ್ ವೇಳೆಗೆ ಮಕ್ಕಳಿಗೂ ಕೋವಿಡ್ ಲಸಿಕೆ ಲಭ್ಯವಾಗುತ್ತಾ..?

ನವೆಂಬರ್-ಡಿಸೆಂಬರ್ ವೇಳೆಗೆ ಮಕ್ಕಳಿಗೂ ಕೋವಿಡ್ ಲಸಿಕೆ ಲಭ್ಯವಾಗುತ್ತಾ..?
bangalore , ಸೋಮವಾರ, 4 ಅಕ್ಟೋಬರ್ 2021 (20:12 IST)
ಬೆಂಗಳೂರು: ನವೆಂಬರ್-ಡಿಸೆಂಬರ್ ವೇಳೆಗೆ ಮಕ್ಕಳಿಗೂ ಕೋವಿಡ್ ಲಸಿಕೆ ಲಭ್ಯವಾಗುವ ಸಾಧ್ಯತೆಗಳಿವೆ ಎಂದು ಆರೋಗ್ಯ ಸಚಿವ ಡಾ,ಕೆ.ಸುಧಾಕರ್ ಅವರು ಭಾನುವಾರ ಹೇಳಿದ್ದಾರೆ.
ನವದೆಹಲಿಯಲ್ಲಿ ಭಾನುವಾರ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ಜೊತೆ ಮಾತುಕತೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರವು ಮಕ್ಕಳ ಕೊರೋನಾ ಲಸಿಕೆ ಅಭಿವೃದ್ಧಿಪಡಿಸಿರುವ ಜೈಡಸ್ ಕ್ಯಾಡಿಲಾ ಸಂಸ್ಥೆಯೊಂದಿಗೆ ಬೆಲೆ ನಿಗದಿ ಕುರಿತಾಗಿ ಅಂತಿಮ ಹಂತದ ಮಾತುಕತೆ ನಡೆಸುತ್ತಿದೆ. ನವೆಂಬರ್ ವೇಳೆಗೆ ಭಾರತ್ ಬಯೋಟೆಕ್ ಲಸಿಕೆಗೆ ಅನುಮತಿ ಸಿಗಬಹುದು. ಮೂಗಿನ ಮೂಲಕ ಪಡೆಯುವ ವ್ಯಾಕ್ಸಿನ್ ಬಗ್ಗೆ ಸಹ ಚರ್ಚೆ ನಡೆದಿದೆ. ನವೆಂಬರ್ ಅಥವಾ ಡಿಸೆಂಬರ್ ವೇಳೆಗೆ ರಾಜ್ಯದಲ್ಲೂ ಲಸಿಕೆ ಲಭಿಸಲಿದೆ ಎಂದು ಹೇಳಿದ್ದಾರೆ.ಕೇಂದ್ರ ಆರೋಗ್ಯ ಸಚಿವರನ್ನು ಭೇಟಿ ಮಾಡಿದ ಸಂದರ್ಭದಲ್ಲಿಯೂ ಇದೇ ವಿಚಾರವಾಗಿ ಸುದೀರ್ಘ ಚರ್ಚೆಗಳು ನಡೆಯಿತು ಎಂದು ತಿಳಿಸಿದ್ದಾರೆ.250 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೆ ಏರಿಸಲಾಗುತ್ತಿದೆ. ಬೆಡ್ ಸಂಖ್ಯೆ ಹೆಚ್ಚು ಮಾಡುವುದು, ಮೂಲಭೂತ ಸೌಕರ್ಯ ಹೆಚ್ಚಿಸುವುದು, ವೈದ್ಯರು, ನರ್ಸ್ ಗಳಿಗೆ ವಸತಿ ನಿಲಯ ನಿರ್ಮಿಸಲು ಚಿಂತಿಸಲಾಗಿದೆ. ದಿನದ 24 ಗಂಟೆಯೂ ಕಾರ್ಯ ನಿರ್ವಹಿಸುವ ನಿಟ್ಟಿನಲ್ಲಿ ಚಿಂತಿನೆ ನಡೆದಿದೆ. ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲು ಆಹ್ವಾನ ನೀಡಿದ್ದೇನೆ. ಅಲ್ಲದೆ ಅನುದಾನ ನೀಡುವಂತೆ ಸಹ ಕೇಳಿದ್ದೇನೆ ಎಂದಿದ್ದಾರೆ.ಸಿರೋ ಸಮೀಕ್ಷೆಯಲ್ಲಿ ರಾಜ್ಯದ ಜನರಲ್ಲಿ ಶೇ.60ರಷ್ಟು ರೋಗ ನಿರೋಧಕ ಶಕ್ತಿ ಇದೆ. ಕೆಲವು ಕಡೆ ಶೇ.70ಕ್ಕೂ ಅಧಿಕ ಇದೆ. ನವೆಂಬರ್ ಡಿಸೆಂಬರ್ ವರೆಗೂ ಕಾದು ನೋಡಬೇಕು. ಕೊರೊನಾ ರೂಪಾಂತರದ ಬಗ್ಗೆ ಯೋಚನೆ ಮಾಡಬೇಕು. ಹೊಸ ರೂಪಾಂತರಿ ಬಗ್ಗೆ ಈಗಲೇ ಹೇಳುವುದು ಕಷ್ಟ. ಸಾಂಕ್ರಾಮಿಕ ರೋಗ ಗೆಲ್ಲಬೇಕು ಎಂದರೆ ಒಂದು ರಾಜ್ಯ, ದೇಶದಲ್ಲಿ ಕೈಯಲ್ಲಿ ಇಲ್ಲ. ಇಡೀ ಪ್ರಪಂಚದಲ್ಲಿ ನಿಯಂತ್ರಣ ಮಾಡಬೇಕು. ಭಾರತದಲ್ಲಿ ಎಲ್ಲರಿಗೂ ವ್ಯಾಕ್ಸಿನ್ ನೀಡದ ಹೊರತು ಕೋವಿಡ್ ನಿಯಂತ್ರಣಕ್ಕೆ ಬರುತ್ತೆ ಎಂಬುದು ಗ್ಯಾರಂಟಿ ಇಲ್ಲ. ಎಲ್ಲ ಕಡೆಯೂ ಕೊರೊನಾ ನಿಯಂತ್ರಣಕ್ಕೆ ಬರಬೇಕಿದೆ ಎಂದರು.ಸೆಪ್ಟೆಂಬರ್ ತಿಂಗಳಲ್ಲಿ ರಾಜ್ಯದಾದ್ಯಂತ 1.48 ಕೋಟಿ ಡೋಸ್‌ ಲಸಿಕೆ ಹಾಕಲಾಗಿದೆ. ೧೮ಕ್ಕಿಂತ ಕಡಿಮೆ ವಯಸ್ಸಿನವರಿಗೆ ಕೊರೊನಾ ಲಸಿಕೆ ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದೊಂದಿಗೆ ಮಾತುಕತೆ ನಡೆಸಲಾಗುತ್ತಿದೆ. ಶೀಘ್ರವೇ ಇದಕ್ಕೆ ಅನುಮತಿ ದೊರೆಯುವ ಸಾಧ್ಯತೆ ಇದೆ. ಕೆಲವು ನಿರ್ದಿಷ್ಟ ಸಮುದಾಯದವರು, ಮದ್ಯಪಾನ ಪ್ರಿಯರು ಸೇರಿದಂತೆ ಶೇ 15ರಷ್ಟು ಜನ ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ. ಅಂಥವರನ್ನು ಆಕರ್ಷಿಸಲು ವಿಶೇಷ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಆಯಾ ಸಮುದಾಯಗಳ, ಧಾರ್ಮಿಕ ಮುಖಂಡರ ಮೂಲಕ ಅರಿವು ಮೂಡಿಸಲಾಗುತ್ತಿದೆ ಎಂದು ಸಚಿವರು ವಿವರಿಸಿದರು.
ರಾಜ್ಯದಲ್ಲೂ ಕೋವಿಡ್‌ನ 3ನೇ ಅಲೆಯ ಆತಂಕ ಇದೆ. ನವೆಂಬರ್‌ ಅಥವಾ ಡಿಸೆಂಬರ್‌ನಲ್ಲಿ ಮೂರನೇ ಅಲೆ ಅಪ್ಪಳಿಸಬಹುದು ಎಂಬ ಶಂಕೆ ಇದೆ. ಹಾಗಾಗಿ, ಮುನ್ನೆಚ್ಚರಿಕೆ ಕ್ರಮವಾಗಿ ಜಾತ್ರೆ, ಹಬ್ಬ ಹಾಗೂ ಉತ್ಸವಗಳಲ್ಲಿ ಜನಸಮೂಹ ಸೇರದಂತೆ ಕಡಿವಾಣ ಹಾಕುವುದನ್ನು ಮುಂದುವರಿಸಿ ಆದೇಶ ಹೊರಡಿಸಲಾಗಿದೆ ಎಂದು ಅವರು ತಿಳಿಸಿದರು.
ಮುನ್ನೆಚ್ಚರಿಕಾ ಕ್ರಮವಾಗಿ ಕೇರಳ, ಮಹಾರಾಷ್ಟ್ರದಿಂದ ಬರುವವರಿಗೆ ಈಗಲೂ ಷರತ್ತು ವಿಧಿಸಲಾಗಿದೆ. ಲಸಿಕೆ ಹಾಕಿಸಿಕೊಂಡಿರಬೇಕು. ಆರ್’ಟಿಪಿಸಿಆರ್ ನೆಗೆಟಿವ್ ವರದಿ ಇರಬೇಕು ಎಂದು ಸೂಚಿಸಲಾಗಿದೆ. ಷರತ್ತುಗಳ ತೆರವಿಗೆ ಎರಡೂ ರಾಜ್ಯಗಳಿಂದ ಒತ್ತಡ ಇದ್ದರೂ ನಾವು ತೆರವುಗೊಳಿಸಿಲ್ಲ ಎಂದರು.
ಇನ್ನು 2 ಡೋಸ್ ಲಸಿಕೆ ಪಡೆದುಕೊಂಡವರಿಗೆ ಬೂಸ್ಟರ್ ಶಾಟ್ಸ್ ನೀಡುವ ಬಗ್ಗೆ ಚರ್ಚೆ ನಡೆಯುತ್ತಿದ್ದು, ಇದರ ಬಗ್ಗೆ ಗಂಭೀರ ತೀರ್ಮಾನಗಳು ಆಗಿಲ್ಲ ಎಂದು ಹೇಳಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಯಾಣಿಕರ ಸೋಗಿನಲ್ಲಿ ಎನ್ ಸಿಬಿ ರೈಡ್