Select Your Language

Notifications

webdunia
webdunia
webdunia
webdunia

ಪ್ರಯಾಣಿಕರ ಸೋಗಿನಲ್ಲಿ ಎನ್ ಸಿಬಿ ರೈಡ್

ಪ್ರಯಾಣಿಕರ ಸೋಗಿನಲ್ಲಿ ಎನ್ ಸಿಬಿ ರೈಡ್
bangalore , ಸೋಮವಾರ, 4 ಅಕ್ಟೋಬರ್ 2021 (20:03 IST)
ಸಮುದ್ರ ಮಧ್ಯೆ ಐಷಾರಾಮಿ ಕ್ರೂಸ್ ಹಡಗಿನಲ್ಲಿ ರೇವ್ ಪಾರ್ಟಿ ನಡೆಯುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದು ದಾಳಿ ನಡೆಸಿದ ಮುಂಬೈನ ಎನ್ ಸಿಬಿ ಅಧಿಕಾರಿಗಳು ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಪುತ್ರ ಸೇರಿದಂತೆ 10 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.
 
ಮುಂಬೈ:-ಸಮುದ್ರ ಮಧ್ಯೆ ಐಷಾರಾಮಿ ಕ್ರೂಸ್ ಹಡಗಿನಲ್ಲಿ ರೇವ್ ಪಾರ್ಟಿ ನಡೆಯುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದು ದಾಳಿ ನಡೆಸಿದ ಮುಂಬೈನ ಎನ್ ಸಿಬಿ ಅಧಿಕಾರಿಗಳು ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಪುತ್ರ ಸೇರಿದಂತೆ 10 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.ನೂರಾರು ಮಂದಿ ಪ್ರಯಾಣಿಕರನ್ನು ಹೊಂದಿದ್ದ ಐಷಾರಾಮಿ ಹಡಗು ಮುಂಬೈನಿಂದ ಗೋವಾಗೆ ಹೊರಟಿತ್ತು. ಹಡಗಿನಲ್ಲಿ ಡ್ರಗ್ಸ್ ಪಾರ್ಟಿ ನಡೆಯುವ ಬಗ್ಗೆ ಮಾಹಿತಿ ಪಡೆದಿದ್ದ ಎನ್ ಸಿಬಿ ಮುಂಬೈ ಜೋನಲ್ ಡೈರೆಕ್ಟರ್  ಸಮೀರ್‌ ವಾಂಖೆಡೆ, ತಮ್ಮ ಸಿಬಂದಿಯ ಜೊತೆ ಪ್ರಯಾಣಿಕರ ಸೋಗಿನಲ್ಲಿ ಅದೇ ಹಡಗು ಸೇರಿಕೊಂಡಿದ್ದರು. ಹಡಗು ಕರಾವಳಿ ಬಿಟ್ಟು ಸಮುದ್ರ ಮಧ್ಯಕ್ಕೆ ತಲುಪುತ್ತಿದ್ದಂತೆ ಡ್ರಗ್ಸ್ ಪಾರ್ಟಿ ಆರಂಭಗೊಂಡಿತ್ತು.‌ ಇದರ ಬೆನ್ನಲ್ಲೇ ಎನ್ ಸಿಬಿ ಅಧಿಕಾರಿಗಳು ಡ್ರಗ್ಸ್ ಶೋಧಕ್ಕೆ ಇಳಿದಿದ್ದು ಕೊಕೇನ್, ಚರಸ್, ಎಂಡಿಎಂಎ ಸೇರಿ ಹಲವು ಮಾದರಿಯ ಡ್ರಗ್ಸ್ ಇರುವುದನ್ನು ಖಚಿತಪಡಿಸಿದ್ದಾರೆ. ಅಲ್ಲದೆ, ಪಾರ್ಟಿಗಾಗಿ ರೆಡಿ ಮಾಡಿಕೊಂಡಿದ್ದ ಡ್ರಗ್ಸ್ ಸಂಗ್ರಹವನ್ನು ವಶಕ್ಕೆ ಪಡೆದಿದ್ದು ಹಲವರನ್ನು ವಶಕ್ಕೆ ಪಡೆದಿದ್ದಾರೆ. ‌ಈ ಪೈಕಿ ಬಾಲಿವುಡ್‌ ಸೂಪರ್‌ಸ್ಟಾರ್‌ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಕೂಡ ಒಬ್ಬ. ಇದಲ್ಲದೆ, ಬಾಲಿವುಡ್ ಸಂಬಂಧ ಹೊಂದಿರುವ ಹಲವು ಯುವಕರು ಪಾರ್ಟಿಯಲ್ಲಿದ್ದರು. ಎನ್ ಸಿಬಿ ಅಧಿಕಾರಿಗಳು ಹತ್ತಕ್ಕೂ ಹೆಚ್ಚು ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂದು ನ್ಯೂಸ್ 18 ಡಾಟ್ ಕಾಮ್ ವರದಿ ಮಾಡಿದೆ.ಆರ್ಯನ್ ಖಾನ್ ಉಪಸ್ಥಿತಿ ಮತ್ತು ಆತನ ಪಾತ್ರದ ಬಗ್ಗೆ ಅಧಿಕಾರಿಗಳು ನಿಗೂಢ ಜಾಗದಲ್ಲಿರಿಸಿ ಪ್ರಶ್ನೆ ಮಾಡುತ್ತಿದ್ದಾರೆ. ಪಾರ್ಟಿ ಪ್ರವೇಶಕ್ಕೆ ಒಬ್ಬನಿಗೆ ಒಂದು ಲಕ್ಷ ರೂ. ವರೆಗೆ ಶುಲ್ಕ ತೆರಬೇಕಾಗಿತ್ತು ಎಂದು ಮೂಲಗಳು ತಿಳಿಸಿವೆ.ಕಳೆದ ವಾರ ಮುಂಬೈ ಮತ್ತು ಗೋವಾ ವಲಯದ ಎನ್ ಸಿಬಿ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ, ಡ್ರಗ್ಸ್ ಪಾರ್ಟಿಯಲ್ಲಿ ಬಾಲಿವುಡ್ ನಟರ ಲಿಂಕ್ ಇದ್ದುದನ್ನು ಪತ್ತೆ ಮಾಡಿದ್ದರು. ಅಲ್ಲದೆ, ಬಾಲಿವುಡ್ ನಟ ಅರ್ಜುನ್ ರಾಮಪಾಲ್ ಕೋ ಪಾರ್ಟ್ನರ್ ದಕ್ಷಿಣ ಆಫ್ರಿಕಾ ಮೂಲದ ಗ್ಯಾಬ್ರಿಯೆಲಾ ಡೆಮಿಟ್ರಿಯಾಡ್ಸ್ ಅವರ ಸೋದರನನ್ನು ಗೋವಾದಲ್ಲಿ ಬಂಧಿಸಿದ್ದರು. ಆತನಿಂದ ಮಾದಕ ದ್ರವ್ಯ ಚರಸ್ ವಶಕ್ಕೆ ಪಡೆದಿದ್ದರು.
ಕಳೆದ ವರ್ಷ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಬಳಿಕ ಎನ್ ಸಿಬಿ ಅಧಿಕಾರಿಗಳು ಡ್ರಗ್ಸ್ ಕಾರ್ಯಾಚರಣೆ ಆರಂಭಿಸಿದ್ದು ಬಾಲಿವುಡ್ ಖ್ಯಾತ ನಾಮರು ನಂಟು ಹೊಂದಿದ್ದನ್ನು ಬಯಲಿಗೆಳೆದಿದ್ದರು. ಸುಶಾಂತ್ ಗೆಳತಿ ರಿಯಾ ಚಕ್ರವರ್ತಿ, ಆಕೆಯ ಸೋದರ ಶೋವಿಕ್, ಸುಶಾಂತ್ ಜೊತೆಗೆ ಕೆಲಸ ಮಾಡುತ್ತಿದ್ದ ಹಲವರನ್ನು ಬಂಧಿಸಿದ್ದರು. ಇವರೊಳಗೆ ವಾಟ್ಸಪ್ ಚಾಟಿಂಗ್ ಮತ್ತಿತರ ಸಂವಹನದ ಮೂಲಕ ಡ್ರಗ್ಸ್ ವಹಿವಾಟು ನಡೆಯುತ್ತಿದ್ದುದು ಪತ್ತೆಯಾಗಿತ್ತು.

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯದ ದೇವಾಲಯಗಳಲ್ಲಿ ವಸ್ತ್ರಸಂಹಿತೆ ಜಾರಿ ಮಾಡಲು ಧಾರ್ಮಿಕ ಪರಿಷತ್ ನಿರ್ಧಾರ