Select Your Language

Notifications

webdunia
webdunia
webdunia
webdunia

ಗಣತಂತ್ರ ವ್ಯವಸ್ಥೆಗೆ ಪವಿತ್ರ ಸಂವಿಧಾನವೇ ಅಧಿಪತಿ: ಕೆಪಿಸಿಸಿ ಕಚೇರಿಯಲ್ಲಿ ಡಿ.ಕೆ. ಶಿವಕುಮಾರ್‌

Republic Day Celebration, DCM D.K. Shivakumar, Chief Minister Siddaramaiah

Sampriya

ಬೆಂಗಳೂರು , ಸೋಮವಾರ, 26 ಜನವರಿ 2026 (11:51 IST)
Photo Credit X
ಬೆಂಗಳೂರು: ಗಣರಾಜ್ಯೋತ್ಸವ ಎಂದರೆ ಭಾರತದ ಸ್ವಾಭಿಮಾನದ ದಿನ. ಸಂವಿಧಾನವೇ ನಮ್ಮ ಧರ್ಮ.  ಸಂವಿಧಾನದ ಆಶಯಗಳನ್ನು ಸಾಕಾರಗೊಳಿಸುವುದೇ ನಮ್ಮ ರಾಜಧರ್ಮ ಎಂದು ಕೆಪಿಸಿಸಿ ಅಧ್ಯಕ್ಷ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್‌ ಹೇಳಿದರು.

ಕೆಪಿಸಿಸಿ ಕಚೇರಿಯಲ್ಲಿ ಸೋಮವಾರ ಮಾಡಿದ ಗಣರಾಜ್ಯೋತ್ಸವ ಭಾಷಣ ಮಾಡಿದ ಅವರು ದೇಶದ ಹಾಗೂ ನಾಡಿನ ಸಮಸ್ತ ಜನತೆಗೆ 77ನೇ ವರ್ಷದ ಗಣರಾಜ್ಯೋತ್ಸವದ ಶುಭಾಶಯ ಕೋರಿದರು. 

ಎಲ್ಲರನ್ನು  ಒಳಗೊಂಡ ಸಮಾಜ ನಿರ್ಮಾಣವೇ ಸಂವಿಧಾನ ಹಾಗೂ ಸರ್ಕಾರದ ಆಶಯ. ನಮ್ಮ ದೇಶದ ಗಣತಂತ್ರ ವ್ಯವಸ್ಥೆಗೆ ಪವಿತ್ರ ಸಂವಿಧಾನವೇ ಅಧಿಪತಿ. ಉಸಿರಾಡಲು ಗಾಳಿ ಬೇಕು. ನಮ್ಮ ದೇಶ ನಡೆಸೋಕೆ ಸಂವಿಧಾನ ಬೇಕು. ಸಂವಿಧಾನವೇ ನಮ್ಮ ಪ್ರಜಾಪ್ರಭುತ್ವದ ಆತ್ಮ. ಸಂವಿಧಾನವೇ ನಮ್ಮ ದೇಶದ ಶಕ್ತಿ ಎಂದು ಹೇಳಿದರು. 

ಇವನಾರವ, ಇವನಾರವ ಎನ್ನುವ ಭೇದ-ಭಾವ ಅಳಿಸಿ, ಇವ ನಮ್ಮವ, ಇವ ನಮ್ಮವ ಎನ್ನುವ ಭಾವನೆ ಮೂಡಿಸಿದ್ದೇ ಸಂವಿಧಾನ. ಜಾತಿ, ಧರ್ಮ, ಸಂಪತ್ತು, ಅಧಿಕಾರ ಯಾವುದೂ ಇಲ್ಲಿ ಲೆಕ್ಕಕ್ಕೆ ಬರುವುದಿಲ್ಲ. ಕಾನೂನಿನ ಮುಂದೆ ಎಲ್ಲರೂ ಒಂದೇ ಎಂದು ಸಂವಿಧಾನ ಹೇಳುತ್ತದೆ ಎಂದರು.

75 ವರ್ಷಗಳ ಹಿಂದೆ ಬಡತನ, ಅನಕ್ಷರತೆ, ಹಸಿವು, ಅಪೌಷ್ಟಿಕತೆ ಸಮಸ್ಯೆಗಳು ದೇಶವನ್ನು ಬಹಳವಾಗಿ ಕಾಡಿತ್ತು. ಆದರೆ ಈಗ ಚಿತ್ರಣ ಸಂಪೂರ್ಣ ಬದಲಾಗಿದೆ. ನಮ್ಮ ಪಕ್ಷ ಹಾಗೂ ಸರ್ಕಾರ ಜಾತಿ-ಧರ್ಮಗಳ ಭೇದವಿಲ್ಲದೆ ಸಂಪತ್ತು, ಅವಕಾಶ ಮತ್ತು ಅಧಿಕಾರದಲ್ಲಿ ಸರ್ವರಿಗೂ ಸಮಪಾಲು ಕಲ್ಪಿಸಿದೆ. ಹಿಂದೆ ನಮ್ಮನ್ನು ಕಾಡುತ್ತಿದ್ದ ಎಲ್ಲ ಸಮಸ್ಯೆಗಳನ್ನು ಮೆಟ್ಟಿನಿಲ್ಲುವ ತಾಕತ್ತು ಹೊಂದಿದ್ದೇವೆ. ವಿಶ್ವ ಮಟ್ಟದಲ್ಲಿ ಭಾರತದ ವರ್ಚಸ್ಸನ್ನು ಎತ್ತರಕ್ಕೆ ತೆಗೆದುಕೊಂಡು ಹೋಗಿದ್ದೇವೆ. ಇದೆಲ್ಲವೂ ಸಾಧ್ಯವಾಗಿದ್ದು ಸಂವಿಧಾನದ ಅಂಶಗಳ ಸಮರ್ಪಕ ಜಾರಿಯಿಂದ ಎಂದು ಹೇಳಿದರು.

ಇತ್ತೀಚೆಗೆ ಕೆಲವು ದೇಶದ್ರೋಹಿಗಳು ಸಂವಿಧಾನ ಬದಲಾವಣೆಯ ಕೂಗು ಎತ್ತಿದ್ದಾರೆ. ಇದನ್ನು ಪ್ರಜಾಪ್ರಭುತ್ವ ವ್ಯವಸ್ಥೆಯ ಪ್ರೇಮಿಗಳೆಲ್ಲರೂ ಒಕ್ಕೊರಲಿನಿಂದ ಖಂಡಿಸಬೇಕಿದೆ. ಇದಕ್ಕೆ ನಾನೂ ದನಿಗೂಡಿಸುತ್ತೇನೆ. ದೇಶದ ಇತಿಹಾಸದಲ್ಲಿಯೆ ಮೊಟ್ಟ ಮೊದಲ ಬಾರಿಗೆ ಇಂಡಿಯಾ ಒಕ್ಕೂಟದ ಎಲ್ಲಾ ಸಂಸದರು ಸಂವಿಧಾನದ ಪ್ರತಿ ಹಿಡಿದು ಪ್ರಮಾಣ ವಚನ ಸ್ವೀಕಾರ ಮಾಡಿದರು. ಭವಿಷ್ಯದ ಜವಾಬ್ದಾರಿಯುತ ನಾಗರಿಕರಾಗುವ ಶಾಲಾ ಮಕ್ಕಳಿಗೆ ಸಂವಿಧಾನದ ಆಶಯಗಳನ್ನು ಮನದಟ್ಟು ಮಾಡಿಸಲು ಶಾಲೆಗಳಲ್ಲಿ ಸಂವಿಧಾನ ಪೀಠಿಕೆ ಓದುವುದನ್ನು ಕಡ್ಡಾಯ ಮಾಡಲಾಗಿದೆ ಎಂದರು.

ನಮ್ಮ ಆಡಳಿತದ ‘ಕರ್ನಾಟಕ ಮಾದರಿ’ ಬಗ್ಗೆ ಇಡೀ ದೇಶ ಮಾತ್ರವಲ್ಲ ಜಗತ್ತಿನ ಅನೇಕ ಆರ್ಥಿಕ ತಜ್ಞರು ಕೂಡಾ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇದು ಕನ್ನಡಿಗರೆಲ್ಲರಿಗೂ ಅಭಿಮಾನದ ಸಂಗತಿಯಾಗಿದೆ. ಗ್ಯಾರಂಟಿ ಯೋಜನೆಗಳು ಬದುಕಿನ ಗ್ಯಾರಂಟಿ ಹೆಚ್ಚಿಸಿವೆ. ಗೃಹ ಜ್ಯೋತಿ, ಗೃಹಲಕ್ಷ್ಮಿ, ಅನ್ನಭಾಗ್ಯ, ಶಕ್ತಿ ಮತ್ತು ಯುವನಿಧಿಗಳಿಗೆ ಇದುವರೆಗೆ 1,16,706 ಕೋಟಿ ರೂಗಳನ್ನು ವಿನಿಯೋಗಿಸಲಾಗಿದೆ. ಇಡೀ ದೇಶದ ಇತಿಹಾಸದಲ್ಲಿಯೇ ಮೊಟ್ಟಮೊದಲ ಬಾರಿಗೆ ಒಂದೇ ಸಲ 42,345 ಮನೆಗಳನ್ನು ಒಟ್ಟಿಗೆ ನೀಡುತ್ತಿದ್ದೇವೆ ಎಂದು ತಿಳಿಸಿದರು.

ದೇಶಕ್ಕೆ ಸಂವಿಧಾನದ ಮೂಲಕ ಸ್ವಾತಂತ್ರ್ಯ, ಸಮಾನತೆ, ಸೋದರತ್ವ ಮತ್ತು ಪ್ರಜಾಸತ್ತಾತ್ಮಕ ಗಣರಾಜ್ಯ ವ್ಯವಸ್ಥೆಯನ್ನು ನೀಡಿರುವುದು ಕಾಂಗ್ರೆಸ್ ಎನ್ನುವುದು ನಮಗೆಲ್ಲ ಹೆಮ್ಮೆಯ ವಿಚಾರ. ನಾನೊಬ್ಬ ಕಾಂಗ್ರೆಸಿಗ, ಭಾರತೀಯ, ಕನ್ನಡಿಗ ಎಂದು ಹೇಳಿಕೊಳ್ಳಲು ಹೆಮ್ಮೆಯಾಗುತ್ತದೆ. ನಮ್ಮ ಸಂವಿಧಾನದ ಆಶಯಗಳನ್ನು ಎತ್ತಿಹಿಡಿಯುವ ಮೂಲಕ ಭವ್ಯ ಮತ್ತು ಸಾಮರಸ್ಯದ ಭಾರತವನ್ನು ಕಟ್ಟೋಣ. ಸಂವಿಧಾನದ ತತ್ವಗಳನ್ನು ಜಾರಿಗೆ ತರುವುದೇ ನಮ್ಮೆಲ್ಲರ ಧರ್ಮ. ಇದನ್ನು ಕಾಂಗ್ರೆಸ್ಸಿಗರು ಎಂದಿಗೂ ಮರೆಯಬಾರದು ಎಂದರು.

Share this Story:

Follow Webdunia kannada

ಮುಂದಿನ ಸುದ್ದಿ

ಕರ್ತವ್ಯಪಥದಲ್ಲಿ ವಂದೇ ಮಾತರಂ ಥೀಂನಲ್ಲೇ ಗಣರಾಜ್ಯೋತ್ಸವ ಸಂಭ್ರಮ: ಮೋದಿ ಶುಭಾಶಯ