Select Your Language

Notifications

webdunia
webdunia
webdunia
webdunia

ಧರ್ಮೇಂದ್ರ ಪ್ರಧಾನ್ ರಾಜೀನಾಮೆಯನ್ನು ಕಾಂಗ್ರೆಸ್ ರಾಜಕೀಯವಾಗಿ ಬಳಸಿಕೊಳ್ಳುತ್ತಿದೆ: ಬಿವೈ ವಿಜಯೇಂದ್ರ

Dharmendra Pradhan Resintion
Photo Credit X
ಬೆಂಗಳೂರು -   ಧರ್ಮೆಂದ್ರ ಪ್ರಧಾನ ಅವರ  ರಾಜೀನಾಮೆಯನ್ನು ಕಾಂಗ್ರೆಸ್ ನಾಯಕರು ರಾಜಕೀಯವಾಗಿ ಬಳಸಿಕೊಳ್ಳುತ್ತಿರುವುದನ್ನು ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ.ವೈ ವಿಜಯೇಂದ್ರ ಅವರು  ತೀವ್ರವಾಗಿ ಖಂಡಿಸಿದರು. 
"ಇದು ಕಾಂಗ್ರೆಸ್ ಪಕ್ಷದ ಗೆಲುವು" ಎಂದು ಬೀಗುತ್ತಿರುವ ಕಾಂಗ್ರೆಸ್ ನಾಯಕರ ಹೇಳಿಕೆಗಳು ಕೇವಲ ರಾಜಕೀಯ ಪ್ರೇರಿತವಾಗಿದ್ದು, ಪ್ರಧಾನ್ ಅವರು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಈ ನಿರ್ಧಾರ ತಳೆದಿದ್ದಾರೆ ಎಂದು ಸಮರ್ಥಿಸಿಕೊಂಡರು.

ಧರ್ಮೇಂದ್ರ ಪ್ರಧಾನ್ ಅವರ ವಿದ್ಯಾರ್ಥಿ ಹೋರಾಟದ ಹಿನ್ನೆಲೆ:

ವಿಜಯೇಂದ್ರ ಅವರು ಧರ್ಮೇಂದ್ರ ಪ್ರಧಾನ್ ಅವರ ರಾಜಕೀಯ ಪ್ರಯಾಣವನ್ನು ನೆನಪಿಸುತ್ತಾ, ಪ್ರಧಾನ್ ಅವರು ಅಖಿಲ
ಭಾರತೀಯ ವಿದ್ಯಾರ್ಥಿ ಪರಿಷತ್ (ABVP) ಕಾಲದಿಂದಲೂ ವಿದ್ಯಾರ್ಥಿಗಳ ಪರವಾಗಿ ನಿರಂತರ ಹೋರಾಟ ಮಾಡಿಕೊಂಡು ಬಂದವರು ಎಂದು ಬಣ್ಣಿಸಿದರು. ಈ ದೇಶದ ಲಕ್ಷಾಂತರ ವಿದ್ಯಾರ್ಥಿಗಳ ಧ್ವನಿಯಾಗಿ ಧರ್ಮೇಂದ್ರ ಪ್ರಧಾನ್ ಕೆಲಸ ಮಾಡಿದ್ದಾರೆ. ನೀಟ್ (NEET) ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣಗಳು ಅತ್ಯಂತ ದುರಾದೃಷ್ಟಕರ ಬೆಳವಣಿಗೆಗಳಾಗಿದ್ದು, ಪ್ರಧಾನ್ ಅವರು ವಿದ್ಯಾರ್ಥಿಗಳ ಭಾವನೆಗಳಿಗೆ ಬೆಲೆ ಕೊಟ್ಟು, ಅವರ ಹೋರಾಟವನ್ನು ಗೌರವಿಸಿ ಈ ರಾಜೀನಾಮೆ ನಿರ್ಧಾರಕ್ಕೆ ಬಂದಿದ್ದಾರೆ ಎಂದು ವಿವರಿಸಿದರು.

ಕಾಂಗ್ರೆಸ್‌ನ ರಾಜಕೀಯ ಬೇಳೆ ಮತ್ತು ರಾಹುಲ್ ಗಾಂಧಿ ನಡೆಗೆ ಟೀಕೆ

ಕಾಂಗ್ರೆಸ್ ವಿರುದ್ಧ ಸ್ವಾರ್ಥ ರಾಜಕೀಯದ ಆರೋಪ:

ದೆಹಲಿಯಲ್ಲಿ ನೀಟ್ ಅಕ್ರಮಗಳ ವಿರುದ್ಧ ವಿದ್ಯಾರ್ಥಿಗಳು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿರುವಾಗ, ಕಾಂಗ್ರೆಸ್ ನಾಯಕರು ಆ ಹೋರಾಟವನ್ನು ಬೆಂಬಲಿಸುವ ನೆಪದಲ್ಲಿ ತಮ್ಮ ಸ್ವಂತ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಮುಂದಾಗಿದ್ದರು ಎಂದು ವಿಜಯೇಂದ್ರ ಆಕ್ರೋಶ ಹೊರಹಾಕಿದರು. ವಿದ್ಯಾರ್ಥಿಗಳ ಸಮಸ್ಯೆಗೆ ನಿಜವಾದ ಪರಿಹಾರ ಕಂಡುಕೊಳ್ಳುವ ಬದಲು, ಕಾಂಗ್ರೆಸ್ ಪಕ್ಷವು ಅವರ ಹೋರಾಟವನ್ನು ಕೇಂದ್ರ ಸರ್ಕಾರದ ವಿರುದ್ಧದ ರಾಜಕೀಯ ಅಸ್ತ್ರವನ್ನಾಗಿ ಮಾಡಿಕೊಳ್ಳಲು ಯತ್ನಿಸಿತು ಎಂದು ಅವರು ದೂರಿದರು.

ರಾಹುಲ್ ಗಾಂಧಿ ಅವರ ನಿಲುವಿಗೆ ಖಂಡನೆ:

ವಿದ್ಯಾರ್ಥಿಗಳು ದೇಶದಾದ್ಯಂತ ಸಂಕಷ್ಟದಲ್ಲಿದ್ದಾಗ ಮತ್ತು ಅವರ ಭವಿಷ್ಯ ತೂಗುಯ್ಯಲೆಯಲ್ಲಿದ್ದಾಗ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ವಿದೇಶದಲ್ಲಿದ್ದುಕೊಂಡು ಮೋಜು ಮಾಡುತ್ತಿದ್ದರು ಎಂದು ವಿಜಯೇಂದ್ರ ಚಾಟಿ ಬೀಸಿದರು. ವಿದೇಶದಿಂದ ಮರಳಿದ ನಂತರವೂ ಅವರು ವಿದ್ಯಾರ್ಥಿಗಳಿಗೆ ಧೈರ್ಯ ತುಂಬುವ ಬದಲು, ಜ್ವಲಂತ ಸಮಸ್ಯೆಯನ್ನು ಮತ್ತಷ್ಟು ಭಾಷಣಗಳ ಮೂಲಕ ದಾರಿ ತಪ್ಪಿಸುವ ಕೆಲಸ ಮಾಡಿದರು ಎಂದು ಗಂಭೀರ ಆರೋಪ ಮಾಡಿದರು.

ಪರೀಕ್ಷಾ ವ್ಯವಸ್ಥೆಯಲ್ಲಿ ಕ್ರಾಂತಿಕಾರಿ ಸುಧಾರಣೆಗಳು:

ವಿದ್ಯಾರ್ಥಿಗಳ ಪ್ರತಿಭಟನೆ ಮತ್ತು ನೀಟ್ ಅಕ್ರಮಗಳ ಗಂಭೀರತೆಯನ್ನು ಮನಗಂಡ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಪರೀಕ್ಷಾ ಕ್ರಮದಲ್ಲಿ ಹಲವು ಪಾರದರ್ಶಕ ಹಾಗೂ ಕ್ರಾಂತಿಕಾರಿ ಸುಧಾರಣೆಗಳನ್ನು ಪ್ರಕಟಿಸಿದ್ದಾರೆ. ಭವಿಷ್ಯದಲ್ಲಿ ಇಂತಹ ಪತ್ರಿಕೆ ಸೋರಿಕೆ ಅಥವಾ ಅಕ್ರಮಗಳು ನಡೆಯದಂತೆ ತಡೆಯಲು ಕೇಂದ್ರ ಸರ್ಕಾರ ಬದ್ಧವಾಗಿದೆ ಎಂಬುದನ್ನು ಪ್ರಧಾನಿಯವರ ಈ ಕಠಿಣ ನಿರ್ಧಾರಗಳು ತೋರಿಸುತ್ತವೆ ಎಂದು ವಿಜಯೇಂದ್ರ ತಿಳಿಸಿದರು.

ಸಮಾಜವಿರೋಧಿ ಶಕ್ತಿಗಳು ಮತ್ತು ವಾಂಗ್ಚುಕ್ ಉಪವಾಸ ವಾಪಸ್:

ವಿದ್ಯಾರ್ಥಿಗಳ ಸಾತ್ವಿಕ ಹೋರಾಟವನ್ನು ದೇಶದಲ್ಲಿ ಅರಾಜಕತೆ ಸೃಷ್ಟಿಸಲು ಕೆಲವು ಸಮಾಜವಿರೋಧಿ ಶಕ್ತಿಗಳು ದುರ್ಬಳಕೆ ಮಾಡಿಕೊಳ್ಳುತ್ತಿವೆ ಎಂಬ ಆತಂಕಕಾರಿ ಸತ್ಯವನ್ನು ವಿಜಯೇಂದ್ರ ಬಿಚ್ಚಿಟ್ಟರು. ಲಡಾಖ್‌ನ ಪ್ರಮುಖ ಹೋರಾಟಗಾರ ಸೋನಮ್ ವಾಂಗ್ಚುಕ್ ಅವರು ಕೂಡ ತಮ್ಮ ಉಪವಾಸ ಸತ್ಯಾಗ್ರಹವನ್ನು ಹಿಂಪಡೆಯಲು ಇದೇ ಪ್ರಮುಖ ಕಾರಣ. ರಾಷ್ಟ್ರವಿರೋಧಿ ಶಕ್ತಿಗಳು ಈ ಪ್ರತಿಭಟನೆಯನ್ನು ಬೇರೆಡೆಗೆ ತಿರುಗಿಸುತ್ತಿವೆ ಎಂಬುದನ್ನು ಅರಿತೇ ವಾಂಗ್ಚುಕ್ ಅವರು ತಮ್ಮ ಸತ್ಯಾಗ್ರಹವನ್ನು ವಾಪಸ್ ಪಡೆದುಕೊಂಡಿದ್ದಾರೆ ಎಂದು ನೆನಪಿಸಿದರು.

ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಕಟು ವಾಗ್ದಾಳಿ

ಪ್ರತಿಭಟನೆಯಲ್ಲಿ ಉಮರ್ ಖಾಲಿದ್ ಫೋಟೋ ಪ್ರದರ್ಶನ:

ಬೆಂಗಳೂರಿನಲ್ಲಿ ನಡೆಯುತ್ತಿರುವ ವಿದ್ಯಾರ್ಥಿ ಪ್ರತಿಭಟನೆಗಳ ಸ್ವರೂಪದ ಬಗ್ಗೆ ಕಳವಳ ವ್ಯಕ್ತಪಡಿಸಿದ ರಾಜ್ಯಾದ್ಯಕ್ಷರು  ನಿನ್ನೆ ಪ್ರತಿಭಟನಾ ಸ್ಥಳದಲ್ಲಿ ಯಾವ ಭಾಷೆಯ ಪೋಸ್ಟರ್‌ಗಳನ್ನು ಪ್ರದರ್ಶಿಸಲಾಯಿತು ಎಂಬುದು ಬೆಂಗಳೂರು ಪೊಲೀಸರಿಗೆ ಸ್ಪಷ್ಟವಾಗಿ ಗೊತ್ತಿರಬೇಕು. ದೇಶದ್ರೋಹದ ಆರೋಪ ಎದುರಿಸುತ್ತಿರುವ ಉಮರ್ ಖಾಲಿದ್ ಫೋಟೋಗಳನ್ನು ಹಿಡಿದುಕೊಂಡು ವಿದ್ಯಾರ್ಥಿಗಳ ಪ್ರತಿಭಟನೆಯಲ್ಲಿ ಕೆಲವರು ಭಾಗವಹಿಸುತ್ತಿದ್ದಾರೆ. ವಿದ್ಯಾರ್ಥಿಗಳ ಪವಿತ್ರ ಹೋರಾಟವನ್ನು ಇಂತಹ ಶಕ್ತಿಗಳು ದುರುಪಯೋಗಪಡಿಸಿಕೊಳ್ಳುತ್ತಿರುವುದು ಖಂಡನೀಯ ಎಂದರು.

ಗೃಹ ಸಚಿವರ ಜವಾಬ್ದಾರಿ ನೆನಪಿಸಿದ ವಿಜಯೇಂದ್ರ:

ರಾಜ್ಯದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರ ಕಾರ್ಯವೈಖರಿಯನ್ನು ನಾಲಾಯಕ್ ಎಂದು ಜರೆದ ವಿಜಯೇಂದ್ರ, ಬೆಂಗಳೂರಿನಲ್ಲಿ ಏನಾಗುತ್ತಿದೆ ಎಂಬ ಕನಿಷ್ಠ ಕಲ್ಪನೆಯೂ ಗೃಹ ಸಚಿವರಿಗಿಲ್ಲ ಎಂದು ವಾಗ್ದಾಳಿ ನಡೆಸಿದರು. ಪೊಲೀಸರ ವಿರುದ್ಧ ಪ್ರತಿದಿನ ಅವಹೇಳನಕಾರಿ ಹೇಳಿಕೆಗಳನ್ನು ನೀಡುತ್ತಿದ್ದರೂ ಗೃಹ ಸಚಿವರು ಕೈಕಟ್ಟಿ ಕುಳಿತಿದ್ದಾರೆ. "ನೀವು ಕೇವಲ ಉಗ್ರಗಾಮಿಗಳಿಗೋ ಅಥವಾ ದೇಶದ್ರೋಹಿಗಳಿಗೋ ಗೃಹ ಸಚಿವರಲ್ಲ, ಬದಲಿಗೆ ಕರ್ನಾಟಕದ ಸಮಸ್ತ ಜನತೆಗೂ ಗೃಹ ಸಚಿವರು" ಎಂಬುದನ್ನು ಖರ್ಗೆ ಅವರು ಅರ್ಥಮಾಡಿಕೊಳ್ಳಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.    

 ಬಿ. ಕೆ. ಹರಿಪ್ರಸಾದ್ ವಿರುದ್ಧ ವ್ಯಂಗ್ಯ

*ಆರ್.ಎಸ್.ಎಸ್ (RSS) ಮೇಲಿನ ವಾಗ್ದಾಳಿಗೆ ಟಾಂಗ್:*

ಕಾಂಗ್ರೆಸ್‌ನ ಹಿರಿಯ ನಾಯಕ ಬಿ. ಕೆ. ಹರಿಪ್ರಸಾದ್ ಅವರು ನಿರಂತರವಾಗಿ ಆರ್.ಎಸ್.ಎಸ್ ಸಂಸ್ಥೆಯ ವಿರುದ್ಧ ನೀಡುತ್ತಿರುವ ಹೇಳಿಕೆಗಳನ್ನು ವಿಜಯೇಂದ್ರ ತೀವ್ರವಾಗಿ ವ್ಯಂಗ್ಯವಾಡಿದರು. "ಆ ಪುಣ್ಯಾತ್ಮನಿಗೆ ಪ್ರತಿಯೊಂದಕ್ಕೂ ಆರ್.ಎಸ್.ಎಸ್ ಮೇಲೆ ಗೂಬೆ ಕೂರಿಸುವುದು ಬಿಟ್ಟರೆ, ದೇಶ ಅಥವಾ ರಾಜ್ಯದ ಅಭಿವೃದ್ಧಿ ಬಗ್ಗೆ ಬೇರೆ ಏನಾದರೂ ವಿಷಯ ಮಾತನಾಡಲು ಗೊತ್ತಿದೆಯಾ ಎಂದು ಯಾರಾದರೂ ಕೇಳಿ," ಎಂದು ಕಟುವಾಗಿ ಟಾಂಗ್ ನೀಡಿದರು

Share this Story:

Follow Webdunia kannada

ಮುಂದಿನ ಸುದ್ದಿ

ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಕೊಟ್ಟ ಮೇಲೆ ಪ್ರಲ್ಹಾದ್ ಜೋಶಿಗೆ ಬಯಸದೇ ಬಂದ ಭಾಗ್ಯ