Select Your Language

Notifications

webdunia
webdunia
webdunia
webdunia

ರಾಮಾಯಣ ಕಾಲ್ಪನಿಕ ಎಂದ ಕಾಂಗ್ರೆಸ್ ವಾಲ್ಮೀಕಿ ಜಯಂತಿ ಆಚರಿಸುತ್ತಿದೆ: ಸಿಟಿ ರವಿ ವ್ಯಂಗ್ಯ

Valmiki Jayanthi, BJP Leader CT Ravi, Violate the Model Code of Conduct,

Sampriya

ಬೆಂಗಳೂರು , ಗುರುವಾರ, 17 ಅಕ್ಟೋಬರ್ 2024 (19:07 IST)
Photo Courtesy X
ಬೆಂಗಳೂರು: ಕಾಂಗ್ರೆಸ್ಸಿನವರು ಮಾದರಿ ನೀತಿಸಂಹಿತೆ ಉಲ್ಲಂಘಿಸಿದ್ದಾರೆ ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಅವರು ಆರೋಪಿಸಿದರು.

ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮದವರ ಜೊತೆ ಮಾತನಾಡಿದ ಅವರು, ಜಾಹೀರಾತು ಕೊಟ್ಟು ಮಾದರಿ ನೀತಿಸಂಹಿತೆ ಉಲ್ಲಂಘಿಸಿದ ಮುಖ್ಯಮಂತ್ರಿಗಳು, ಅವರ ಸಂಪುಟದ ಸಚಿವರ ನೀತಿ ಸಂವಿಧಾನಬಾಹಿರ. ಆದ್ದರಿಂದ ಚುನಾವಣಾ ಆಯೋಗವು ಈ ವಿಷಯದಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ರಾಜ್ಯದಲ್ಲಿ 3 ಉಪ ಚುನಾವಣೆಗಳು ನಡೆಯುತ್ತಿವೆ. ನೀತಿ ಸಂಹಿತೆಯೂ ಜಾರಿಯಲ್ಲಿದೆ. ಅವರಿಗೆ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ, ಮುಡಾ ಹಗರಣಗಳಿಂದ ಪಾರಾಗುವ ಭಯ ಕಾಂಗ್ರೆಸ್ಸಿಗರನ್ನು ಕಾಡುತ್ತಿದೆ. ಅದರಿಂದ ರಕ್ಷಣೆ ಪಡೆಯಲು ಮಾದರಿ ನೀತಿ ಸಂಹಿತೆ ಉಲ್ಲಂಘಿಸಿ ರಾಯಚೂರು ವಿಶ್ವವಿದ್ಯಾಲಯಕ್ಕೆ ನಾವು ಮಹರ್ಷಿ ವಾಲ್ಮೀಕಿ ಹೆಸರು ಇಡುವುದಾಗಿ ಹೇಳಿದ್ದಾರೆ ಎಂದು ಆಕ್ಷೇಪಿಸಿದರು.

ಇದೀಗ ಸಿದ್ದರಾಮಯ್ಯನವರು ಎರಡನೇ ಬಾರಿಗೆ ಮುಖ್ಯಮಂತ್ರಿ ಆಗಿದ್ದಾರೆ. ಹಿಂದಿನ ಅವಧಿಯಲ್ಲಿ ರಾಯಚೂರು ವಿಶ್ವವಿದ್ಯಾಲಯಕ್ಕೆ ಮಹರ್ಷಿ ವಾಲ್ಮೀಕಿ ಹೆಸರು ಇಡಬೇಕೆಂದು ಇವರಿಗೆ ಜ್ಞಾನೋದಯ ಆಗಿರಲಿಲ್ಲ ಎಂದು ವ್ಯಂಗ್ಯವಾಡಿದರು. ಈಗ ಆ ಸಮುದಾಯದ ಮತಗಳು ಕೈತಪ್ಪುವ ಭೀತಿ ಕಾಡುತ್ತಿದೆ. ಆ ಭೀತಿಯಿಂದ ಮಹರ್ಷಿ ವಾಲ್ಮೀಕಿ ಹೆಸರು ಇಡುವುದಾಗಿ ಹೇಳಿದ್ದಾರೆ ಎಂದು ಟೀಕಿಸಿದರು. ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಲೂಟಿ ಹೊಡೆದಿದ್ದೀರಲ್ಲಾ? ಅದಕ್ಕೆ ಮೊದಲು ಪ್ರಾಯಶ್ಚಿತ್ತ ಮಾಡಿಕೊಳ್ಳಿ ಎಂದು ಆಗ್ರಹಿಸಿದರು.

2006-07ರಲ್ಲಿ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮವನ್ನು ಪ್ರಾರಂಭಿಸಿದ್ದೇ ಬಿಜೆಪಿ ಸರಕಾರ. 2011ರಲ್ಲಿ ಮೊದಲ ಬಾರಿಗೆ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಪ್ರಾರಂಭಿಸಿದ್ದೇ ಭಾರತೀಯ ಜನತಾ ಪಾರ್ಟಿ ಸರಕಾರ ಎಂದು ತಿಳಿಸಿದರು.

ಕಾಂಗ್ರೆಸ್ ಪಕ್ಷವು ರಾಮನ ಅಸ್ತಿತ್ವವನ್ನೇ ನಿರಾಕರಿಸಿತ್ತು. ಅಲ್ಲದೆ, ರಾಮಸೇತು ಕಾಲ್ಪನಿಕ, ರಾಮಾಯಣವೇ ಕಾಲ್ಪನಿಕ ಎಂದು ಹೇಳಿತ್ತು. ಇವತ್ತು ಕಾಂಗ್ರೆಸ್ ಪಕ್ಷಕ್ಕೆ ಮಹರ್ಷಿ ವಾಲ್ಮೀಕಿ ಜಯಂತಿ ಆಚರಿಸುವಂಥ ನೈತಿಕತೆ ಅವರಿಗೆ ಇಲ್ಲ ಎಂದು ತಿಳಿಸಿದರು. ನಂಬಿಕೆ ಇಲ್ಲದ ಕಾರಣ ಅವರು ಮಾತನಾಡುವುದು ಬೂಟಾಟಿಕೆ ಆಗುತ್ತದೆ ಎಂದು ವಿಶ್ಲೇಷಿಸಿದರು.

ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣವನ್ನು ದುರುಪಯೋಗ ಪಡಿಸಿಕೊಂಡ ಕಾರಣಕ್ಕೆ ಅವರು ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕು. ಜೊತೆಗೆ ಸಾರ್ವಜನಿಕ ಕ್ಷಮೆ ಯಾಚನೆ ಮಾಡಬೇಕು ಎಂದು ಆಗ್ರಹಿಸಿದರು. ಕಾಂಗ್ರೆಸ್ಸಿನವರು ಪ್ರಾಯಶ್ಚಿತ್ತದ ಮಾತನಾಡಿಲ್ಲ; ಜೊತೆಗೆ ಸಾರ್ವಜನಿಕ ಕ್ಷಮೆ ಯಾಚನೆಯನ್ನೂ ಮಾಡಿಲ್ಲ ಎಂದು ಟೀಕಿಸಿದರು.

ತ್ರಿಮೂರ್ತಿಗಳ ಸಭೆಯಿಂದ ಭಯ..
ಎಐಸಿಸಿ ಮಹಾ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್, ಮುಖ್ಯಮಂತ್ರಿ ಉಪ ಮುಖ್ಯಮಂತ್ರಿಗಳು ತ್ರಿಮೂರ್ತಿಗಳು ಸೇರಿ ಮೀಟಿಂಗ್ ಮಾಡಿದ ಫೋಟೊ ನೋಡಿದ್ದೇನೆ. ಅದರಿಂದ ಭಯ ಕಾಡುತ್ತಿದೆ. ಹಿಂದಿನ ಸಭೆಯಲ್ಲಿ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣವನ್ನು ಚುನಾವಣೆಗೆ ಬಳಸಿದ್ದರು. ಈಗ ಮಹಾರಾಷ್ಟ್ರ, ಜಾರ್ಖಂಡ್ ಚುನಾವಣೆ ಇದೆ. ಈಗ ಚುನಾವಣೆಗೆ ಇಷ್ಟು ಕೊಡಬೇಕೆಂದು ನಿಗದಿ ಮಾಡಿರಬೇಕೆಂದು ಅನಿಸುತ್ತದೆ ಎಂದು ತಿಳಿಸಿದರು.

ಕಾಂಗ್ರೆಸ್ಸಿನವರು ಮುಡಾ ಮುಳುಗಿಸಿದ್ದಾರೆ. ಬಿಡಿಎ ಅಥವಾ ಇನ್ಯಾವುದೋ ನಿಗಮ ಅಥವಾ ಖಜಾನೆಗೇ ಕೈ ಹಾಕಿ ಖಜಾನೆಯಿಂದಲೇ ವರ್ಗಾವಣೆ ಮಾಡುತ್ತೀರಾ ಎಂದು ಪ್ರಶ್ನಿಸಿದರು. ಚುನಾವಣೆಗೆ ಹಣ ಕೊಡುವ ಒಪ್ಪಂದ ಆಗಿದೆಯೇ ಎಂದು ಕೇಳಿದರು. ಈ ವಿಷಯದಲ್ಲಿ ತೀರ್ಮಾನ ಇವತ್ತು ಆಗಿರಬೇಕು ಎಂದು ನುಡಿದರು.

Share this Story:

Follow Webdunia kannada

ಮುಂದಿನ ಸುದ್ದಿ

ನ್ಯಾಯದೇವತೆ ವಿನ್ಯಾಸದಲ್ಲಿ ಬದಲಾವಣೆ, ಈ ಹಿಂದೆ ಕಪ್ಪು ಪಟ್ಟಿ ಯಾಕೆ ಕಟ್ಟಲಾಗಿತ್ತು