Select Your Language

Notifications

webdunia
webdunia
webdunia
webdunia

ಜಿಂದಾಲ್ ಭೂಮಿಗೆ ನೀವೆಷ್ಟು ಜೇಬಿಗಿಳಿಸಿಕೊಂಡ್ರಿ: ಕಾಂಗ್ರೆಸ್‌ಗೆ ಸಿಟಿ ರವಿ ವ್ಯಂಗ್ಯ

ct ravi

Sampriya

ಬೆಂಗಳೂರು , ಮಂಗಳವಾರ, 27 ಆಗಸ್ಟ್ 2024 (17:22 IST)
Photo Courtesy X
ಬೆಂಗಳೂರು: ಜಿಂದಾಲ್‍ಗೆ ಭೂಮಿ ಕೊಡಲು ಕಾಂಗ್ರೆಸ್ಸಿಗರು ಹಿಂದೆ ವಿರೋಧಿಸಿದ್ದು, ಈಗ ಕೊಡುತ್ತಿದ್ದಾರೆ. ಕಾಂಗ್ರೆಸ್ಸಿಗರಿಗೂ, ಅವರ ಹೈಕಮಾಂಡಿಗೂ ದೊಡ್ಡ ಪ್ರಮಾಣದ ಮೊತ್ತ ಸಂದಾಯ ಆಗಿರಬಹುದು ಎಂದು ರಾಜ್ಯ ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಅವರು ಸಂಶಯ ವ್ಯಕ್ತಪಡಿಸಿದರು.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಜಿಂದಾಲ್ ಕಂಪೆನಿಗೆ ಸುಮಾರು 3,677 ಎಕರೆ ಭೂಮಿ ಕೊಡುವ ನಿರ್ಧಾರವನ್ನು ಪುನರ್ ಪರಿಶೀಲಿಸುವಂತೆ ಅವರು ಆಗ್ರಹಿಸಿದರು. ಸಿದ್ದರಾಮಯ್ಯನವರೇ ನಿಮ್ಮ ಸಮಾಜವಾದ ಅಂದರೆ ಇದೇನಾ ಎಂದು ಪ್ರಶ್ನಿಸಿದರು.

ಬಿಜೆಪಿ ಆಡಳಿತದಲ್ಲಿ ಇದ್ದಾಗ ಈ ಪ್ರಸ್ತಾವನೆ ಬಂದಿತ್ತು. ನಾವೆಲ್ಲರೂ ಒಳಗಡೆಯೂ ವಿರೋಧ ಮಾಡಿದ್ದೆವು. ಕಾಂಗ್ರೆಸ್ಸಿನವರು ಬಹಿರಂಗವಾಗಿ ವಿರೋಧಿಸಿದ್ದರು. ಇದು ದೊಡ್ಡ ಪ್ರಮಾಣದ ಕಿಕ್ ಬ್ಯಾಕ್ ಎಂದು ನಮ್ಮ ಮೇಲೆ ಅವರು ಆರೋಪಿಸಿದ್ದರು ಎಂದು ವಿವರಿಸಿದರು. 1.22 ಲಕ್ಷಕ್ಕೆ ಭೂಮಿ ಕೊಡುವುದು ಎಂದರೇನು? ಎಂಬ ಮಾತನ್ನು ನಮ್ಮ ಮೇಲೆ ಆರೋಪಿಸಿದ್ದರು ಎಂದು ಹೇಳಿದರು. ಈಗ ಆರೋಪಿಸಿದವರೇ ಭೂಮಿ ಕೊಟ್ಟಿದ್ದಾರೆ. ಹಾಗಿದ್ದರೆ ನೀವು ಎಷ್ಟು ಕಿಕ್‍ಬ್ಯಾಕ್ ಪಡೆದಿದ್ದೀರಿ ಎಂದು ಪ್ರಶ್ನಿಸಲು ಬಯಸುವುದಾಗಿ ತಿಳಿಸಿದರು.

ಕೈಗಾರಿಕೆ ಖಾತೆ ಸಚಿವರು ಈ ಕುರಿತು ಬಿಜೆಪಿ ಆಡಳಿತದಲ್ಲಿರುವಾಗಲೇ ನಿರ್ಧಾರ ಆಗಿತ್ತು ಎಂದು ತಿಳಿಸಿದ್ದಾರೆ. ಮಾನ್ಯ ಎಂ.ಬಿ.ಪಾಟೀಲರೇ, ನಮ್ಮ ಅವಧಿಯಲ್ಲಿ ಪ್ರಸ್ತಾಪ ಬಂದಿದ್ದು ನಿಜ. ನಮ್ಮಂಥ ಹಲವರು ವಿರೋಧಿಸಿದ್ದ ಕಾರಣಕ್ಕೆ ಪ್ರಸ್ತಾವವನ್ನು ಅಲ್ಲಿಗೇ ಕೈಬಿಟ್ಟಿದ್ದೆವು. ನೀವ್ಯಾಕೆ ಅದನ್ನು ಮಾಡುತ್ತೀರಿ? ಬಿಜೆಪಿ ಕಂಡರೆ ಆಗದವರು ಬಿಜೆಪಿ ನಿರ್ಧಾರವನ್ನು ಯಾಕೆ ಮುಂದುವರೆಸÀಬೇಕು ಎಂದು ಕೇಳಿದರು.

ಹೂಡಿಕೆದಾರರು ಜನರಿಗೆ ಸೇವೆ ಮಾಡಲು ಬರುತ್ತಿಲ್ಲ..
ಎಚ್.ಕೆ.ಪಾಟೀಲರೇ ಅವತ್ತು ಉದ್ದದ ಪತ್ರ ಬರೆದಿದ್ದಿರಿ. ಪತ್ರಿಕಾಗೋಷ್ಠಿ ಮಾಡಿದ್ದೀರಿ. ಈಗ ಕ್ಯಾಬಿನೆಟ್ ನಿರ್ಣಯವನ್ನು ಹೊರಗಡೆ ಬಂದು ಪತ್ರಿಕಾಗೋಷ್ಠಿ ಮಾಡಿ ನಿಮ್ಮ ಬಾಯಿಂದಲೇ ಹೇಳಿದ್ದೀರಿ ಎಂದರಲ್ಲದೆ, 90 ಸಾವಿರ ಕೋಟಿಗೂ ಹೆಚ್ಚು ಹೂಡಿಕೆ ಮಾಡಿ, 50 ಸಾವಿರ ಜನರಿಗೆ ಉದ್ಯೋಗ ಕೊಡಲಾಗಿದೆ ಎಂದು ಹೇಳಿದ್ದಾರೆ. ಜಿಂದಾಲ್ ಏನೂ ನಾನ್ ಪ್ರಾಫಿಟ್ ಆರ್ಗನೈಸೇಶನ್ ಅಲ್ಲ. ಅವರು ಕಂಪೆನಿ ನಡೆಸುತ್ತಿದ್ದಾರೆ. ಲಾಭದ ಲೆಕ್ಕಾಚಾರ ಹಾಕಿ ಹೂಡಿಕೆ ಮಾಡುತ್ತಾರೆ. ಜಿಂದಾಲ್ ಅಥವಾ ಇತರ ಕಂಪೆನಿಗಳು, ಹೂಡಿಕೆದಾರರು ಕರ್ನಾಟಕದ 7 ಕೋಟಿ ಜನರಿಗೆ ಸೇವೆ ಮಾಡಲು ಬರುತ್ತಿಲ್ಲ. ಅವರು ಲಾಭದ ಉದ್ದೇಶ ಇಟ್ಟುಕೊಂಡೇ ಹೂಡಿಕೆ ಮಾಡುತ್ತಾರೆ ಎಂದು ಸಿ.ಟಿ.ರವಿ ಅವರು ವಿಶ್ಲೇಷಿಸಿದರು.

ಜಿಂದಾಲ್ ಮತ್ತು ಕರ್ನಾಟಕ ಸರಕಾರದ ನಡುವೆ ಯಾವ ಒಪ್ಪಂದ ಪತ್ರ (ಎಂಒಯು) ಆಗಿತ್ತು? ಎಷ್ಟು ಉದ್ಯೋಗ ಸಿಗಲಿದೆ ಎಂದು ತೋರಿಸಿದ್ದರು? ಮತ್ತು ಭರವಸೆ ಕೊಟ್ಟಿದ್ದರು? ಈಗ ಎಷ್ಟು ಉದ್ಯೋಗ ಸೃಷ್ಟಿ ಆಗಿದೆ? ಉದ್ಯೋಗಿಗಳಲ್ಲಿ ಕರ್ನಾಟಕದವರು, ಕನ್ನಡಿಗರು ಎಷ್ಟು ಜನ ಎಂಬ ಬಗ್ಗೆ ಜಾಬ್ ಆಡಿಟ್ ಆಗಬೇಕು ಎಂದು ಒತ್ತಾಯಿಸಿದರು.

ನಾವು ಕಡಿಮೆ ಬೆಲೆಗೆ ಜಮೀನು ಕೊಟ್ಟಿದ್ದೇವೆ. ಅಣೆಕಟ್ಟೆಯಿಂದ ನೀರು ಕೊಡುತ್ತೇವೆ. ಪ್ರಾಕೃತಿಕ ಸಂಪನ್ಮೂಲ ತೆಗೆಯಲು ಅವಕಾಶ ನೀಡಿದ್ದೇವೆ. ಅವರು ಎಷ್ಟು ಉದ್ಯೋಗ ಕೊಡುವ ಭರವಸೆ ಕೊಟ್ಟಿದ್ದರು? ಮತ್ತು ಎಷ್ಟು ಉದ್ಯೋಗ ಸೃಷ್ಟಿ ಆಗಿದೆ? ಅದರಲ್ಲಿ ಕರ್ನಾಟಕದವರು, ಕನ್ನಡಿಗರು ಎಷ್ಟೆಂಬ ಕುರಿತು ಜಾಬ್ ಆಡಿಟ್ ಮಾಡಬೇಕೆಂದು ಆಗ್ರಹಿಸಿದರು.

ಕೊಡುವ ಉದ್ದೇಶ ಇದ್ದರೆ ಇವತ್ತಿನ ಮಾರುಕಟ್ಟೆ ದರ ವಿಧಿಸಿ..
ಆವತ್ತು ಕಿಕ್‍ಬ್ಯಾಕ್ ಆರೋಪ ಮಾಡಿ, ಈಗ ನೀವು ಅನುಮತಿ ಕೊಟ್ಟ ಕಾರಣ ನೀವೆಷ್ಟು ಕಿಕ್‍ಬ್ಯಾಕ್ ಪಡೆದಿದ್ದೀರಿ ಎಂಬ ಸಂಶಯ ಬರುತ್ತದೆ. ಇದರ ಜೊತೆಜೊತೆಗೇ ಯಾವತ್ತಿನದೋ ಮಾರುಕಟ್ಟೆ ದರ ಅಳವಡಿಸಿ, ಇವತ್ತು 1.22 ಲಕ್ಷಕ್ಕೆ ದರ ನಿಗದಿ ಮಾಡಿದ್ದಾರೆ. ನಮ್ಮ ರಾಜ್ಯದಲ್ಲಿ ಯಾವ ಮೂಲೆಯಲ್ಲೂ ಈ ದರಕ್ಕೆ ಭೂಮಿ ಸಿಗುವುದಿಲ್ಲ. ಪ್ರತಿ ಎಕರೆ ಜಮೀನಿಗೆ ಕಡಿಮೆ ಎಂದರೂ 20-25 ಲಕ್ಷ ರೂ. ಬೆಲೆ ಇದೆ. ಹಾಗಿರುವಾಗ 1.22 ಲಕ್ಷಕ್ಕೆ ದರ ನಿಗದಿ ಮಾಡಿದ್ದು ಸಮರ್ಥನೀಯವಲ್ಲ ಎಂದು ಸಿ.ಟಿ.ರವಿ ಅವರು ಆಕ್ಷೇಪಿಸಿದರು.
ಕೊಡುವ ಉದ್ದೇಶ ಇದ್ದರೆ ಇವತ್ತಿನ ಮಾರುಕಟ್ಟೆ ದರದಲ್ಲಿ ಕೊಡಬೇಕು. ಅಲ್ಲಿರುವ ಅದಿರು ನಿಕ್ಷೇಪಗಳ ಮೇಲೆ ಸರಕಾರದ ಹಕ್ಕು ಎಂದು ಷರತ್ತಿನೊಂದಿಗೆ ಕೊಡಬೇಕು. ಹಾಗಾಗಿ ನಿರ್ಧಾರವನ್ನು ಪುನರ್ ಪರಿಶೀಲನೆ ಮಾಡಬೇಕೆಂದು ಆಗ್ರಹಿಸುವುದಾಗಿ ತಿಳಿಸಿದರು.

ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯವು ಕಾಂಗ್ರೆಸ್ ಆಡಳಿತಕ್ಕೆ ಹಿಡಿದ ಕೈಗನ್ನಡಿ ಎಂದು ಆಕ್ಷೇಪಿಸಿದರು. ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್ ಮಾತ್ರವಲ್ಲದೆ, ಬೇರೆ ಬೇರೆ ಕ್ರಿಮಿನಲ್‍ಗಳಿಗೆ ಸಿಗುತ್ತಿರುವ ರಾಜಾತಿಥ್ಯವನ್ನು ಗಮನಿಸಿದರೆ ಕರ್ನಾಟಕದಲ್ಲಿ ಕಾಂಗ್ರೆಸ್ ಆಡಳಿತದಲ್ಲಿ ಕಾಸಿದ್ರೆ, ಪ್ರಭಾವ ಇದ್ದರೆ ಏನು ಬೇಕಾದರೂ ಎಲ್ಲಿ ಬೇಕಾದರೂ ಸಿಗುತ್ತದೆ ಎಂಬಂತಿದೆ. ಇದು ಅದಕ್ಕೆ ಸ್ಪಷ್ಟ ನಿದರ್ಶನ ಎಂದು ಟೀಕಿಸಿದರು. ಕೇವಲ ದರ್ಶನ್ ಪ್ರಕರಣ ಮಾತ್ರವಲ್ಲ; ಜೈಲುಗಳ ವ್ಯವಸ್ಥೆ ಹೇಗಿದೆ ಎಂಬುದಕ್ಕೆ ಇದೊಂದು ಉದಾಹರಣೆ ಎಂದರು.

Share this Story:

Follow Webdunia kannada

ಮುಂದಿನ ಸುದ್ದಿ

ಶಾಲೆಯಲ್ಲಿ ಗಣೇಶೋತ್ಸವ ಆಚರಿಸಿದರೆ ಕೋಮುವಾದ