ಬೆಂಗಳೂರು: ದಲಿತರ ಹಣವನ್ನು ನುಂಗಿ ನೀರು ಕುಡಿದಿದ್ದಕ್ಕೇ ನಿಮಗೆ ಈವತ್ತು ವೀಲ್ ಚೇರ್ ನಲ್ಲಿ ಓಡಾಡುವ ಪರಿಸ್ಥಿತಿ ಬಂದಿದೆ ಎಂದ ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿಗೆ ಕಾಂಗ್ರೆಸ್ಸಿಗರು ತಿರುಗೇಟು ನೀಡಿದ್ದಾರೆ.
ಸಿದ್ದಣ್ಣ ವಿರುದ್ಧ ಟೀಕೆ ಮಾಡಿದ ಮಾತ್ರಕ್ಕೆ ಛಲವಾದಿ ದೊಡ್ಡ ಲೀಡರ್ ಆಗಲ್ಲ. ಮೇಲ್ಮನೆಗೆ ಅದರದ್ದೇ ಆದ ಗೌರವವಿದೆ. ನಾರಾಯಣಸ್ವಾಮಿಯವರು ಒಬ್ಬ ಮುಖ್ಯಮಂತ್ರಿಯ ಆರೋಗ್ಯದ ಬಗ್ಗೆ ಮಾತನಾಡುತ್ತಾರೆ ಎಂದರೆ ಎಷ್ಟು ಕೀಳುಮಟ್ಟದ ಹೇಳಿಕೆ ನೀಡಿದ್ದಾರೆ ಎಂದು ನೀವೇ ಅರ್ಥ ಮಾಡಿಕೊಳ್ಳಿ ಎಂದು ಸಚಿವ ಚೆಲುವನಾರಾಯಣಸ್ವಾಮಿ ಹೇಳಿದ್ದಾರೆ.
ಇನ್ನು, ನಟಿ, ಎಂಎಲ್ ಸಿ ಉಮಾಶ್ರೀ ಕೂಡಾ ಖಡಕ್ ರಿಯಾಕ್ಷನ್ ಕೊಟ್ಟಿದ್ದಾರೆ. ಸಿದ್ದರಾಮಣ್ಣ ಹುಲಿ, ಹುಲಿ ಯಾವತ್ತಿದ್ರೂ ಹುಲಿನೇ. ಕೂತಿರ್ಲಿ, ನಿಂತಿರ್ಲಿ. ವಿಧಾನಪರಿಷತ್ ನಾಯಕರಾಗಿ ಛಲವಾದಿ ನಾರಾಯಣಸ್ವಾಮಿಯವರಿಗೆ ಇಂತಹ ಹೇಳಿಕೆ ಶೋಭೆ ತರುವುದಿಲ್ಲ ಎಂದಿದ್ದಾರೆ.
ದಲಿತರ ಹಣವನ್ನು ನುಂಗಿ ನೀರು ಕುಡಿದಿದ್ದಕ್ಕೆ ಮತ್ತು ಈಗ ದಲಿತರ ಹಣವನ್ನು ಅವರಿಗೆ ಕೊಡದೇ ಬೇರೆ ಉದ್ದೇಶಗಳಿಗೆ ಬಳಸುವ ಮೂಲಕ ವಂಚನೆ ಮಾಡುವುದಕ್ಕೇ ಸಿದ್ದರಾಮಯ್ಯನವರಿಗೆ ಈ ಗತಿ ಬಂದಿದೆ ಎಂದು ಅವರ ಮಂಡಿನೋವಿನ ಸಮಸ್ಯೆ ಬಗ್ಗೆ ಛಲವಾದಿ ಲೇವಡಿ ಮಾಡಿದ್ದರು.