ಬೆಂಗಳೂರು: ರಾಜ್ಯದಲ್ಲಿ ಹೊಸ ವರ್ಷದ ಆರಂಭದಲ್ಲೇ ಮತ್ತೆ ಸಿಎಂ ಬದಲಾವಣೆ ವಿಚಾರ ಸದ್ದು ಮಾಡುತ್ತಿದೆ. ಅಧಿಕಾರ ಹಂಚಿಕೆ ವಿಚಾರಕ್ಕೆ ಈಗ ಮಹತ್ವದ ಟ್ವಿಸ್ಟ್ ಸಿಕ್ಕಿದೆ. ಸಿಎಂ, ಡಿಸಿಎಂಗೆ ಹೈಕಮಾಂಡ್ ಮಹತ್ವದ ಸಂದೇಶ ರವಾನಿಸಿದೆ ಎನ್ನಲಾಗುತ್ತಿದೆ.
ಸಿಎಂ ಬದಲಾವಣೆ ವಿಚಾರವಾಗಿ ಹೊಸ ವರ್ಷದಂದೇ ಮಾತನಾಡುವುದಾಗಿ ಮೂರು ದಿನಗಳ ಹಿಂದೆ ಡಿಸಿಎಂ ಡಿಕೆ ಶಿವಕುಮಾರ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದರು. ಇದೀಗ ಹೊಸ ವರ್ಷ ಆರಂಭದಲ್ಲೇ ಮತ್ತೆ ಸಿಎಂ ಬದಲಾವಣೆ ವಿಚಾರವಾಗಿ ಚಟುವಟಿಕೆಗಳು ಜೋರಾಗಿವೆ.
ಸದ್ಯಕ್ಕೆ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಇಬ್ಬರೂ ವಿದೇಶ ಪ್ರವಾಸದಲ್ಲಿದ್ದಾರೆ. ಅವರು ಬಂದ ತಕ್ಷಣವೇ ರಾಜ್ಯದ ನಾಯಕತ್ವ ಬದಲಾವಣೆ ವಿಚಾರದ ಬಗ್ಗೆ ನಿರ್ಧಾರ ಮಾಡುವ ಸಾಧ್ಯತೆಯಿದೆ. ಹೀಗಾಗಿ ಮುಂದಿನ ವಾರವೇ ದೆಹಲಿಗೆ ಬರುವಂತೆ ಸಿಎಂ ಮತ್ತು ಡಿಸಿಎಂಗೆ ಬುಲಾವ್ ನೀಡುವ ಸಾಧ್ಯತೆಯಿದೆ. ಯಾವುದೇ ಕ್ಷಣದಲ್ಲಿ ಹೈಕಮಾಂಡ್ ಬುಲಾವ್ ನೀಡಬಹುದು ಎಂದು ಕೆಸಿ ವೇಣುಗೋಪಾಲ್ ಸುಳಿವು ನೀಡಿದ್ದಾರೆ. ಹೀಗಾಗಿ ಮುಂದಿನ ವಾರವೇ ನಾಯಕತ್ವ ಬದಲಾವಣೆ ವಿಚಾರವಾಗಿ ನಿರ್ಧಾರವಾಗುವ ಸಾಧ್ಯತೆಯಿದೆ.