ಚಿಕ್ಕೋಡಿ : ಕಾಂಗ್ರೆಸ್ ಸಂಸ್ಕೃತಿ ಲಿಂಗಾಯತ ವಿರೋಧಿ ಸಂಸ್ಕೃತಿ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಕಾಂಗ್ರೆಸ್ ಪಕ್ಷದ ವಿರುದ್ಧ ಕಿಡಿಕಾರಿದ್ದಾರೆ.
ಯಮಕನಮರಡಿ ಬಿಜೆಪಿಯ ಅಧಿಕೃತ ಅಭ್ಯರ್ಥಿ ಬಸವರಾಜ್ ಹುಂದ್ರಿ ನಾಮಪತ್ರ ಸಲ್ಲಿಸಿದ ಬಳಿಕ ಬೆಳಗಾವಿ ಜಿಲ್ಲೆ ಹುಕ್ಕೇರಿ ಪಟ್ಟಣದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಲಕ್ಷ್ಮಣ ಸವದಿ ಹಾಗೂ ಜಗದೀಶ್ ಶೆಟ್ಟರ್ ಕಾಂಗ್ರೆಸ್ ಸೇರ್ಪಡೆ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಅವರು ಯಾವ ತತ್ವ ಸಿದ್ಧಾಂತದ ಆಧಾರದ ಮೇಲೆ ಕಾಂಗ್ರೆಸ್ಗೆ ಹೋಗಿದ್ದಾರೆ ಎಂದು ರಾಜ್ಯದ ಜನರಿಗೆ ಗೊತ್ತಾಗಿದೆ. ಸಾಕಷ್ಟು ಅಧಿಕಾರ ಅನುಭವಿಸಿದ ಅವರು ಬಿಜೆಪಿ ಪಕ್ಷದಿಂದ ದೊಡ್ಡವರಾಗಿದ್ದಾರೆ ಎಂದರು.
ಬಿಜೆಪಿ ಲಿಂಗಾಯತ, ಮರಾಠ, ಕ್ರಿಶ್ಚಿಯನ್ ಹಾಗೂ ಜೈನ ಸಮುದಾಯಗಳಿಗೆ 2ಡಿ ಕೊಟ್ಟಿದ್ದಾರೆ. ಪರಿಶಿಷ್ಟ ಜಾತಿ ಮತ್ತು ಪಂಗಡದ ಮೀಸಲಾತಿಯನ್ನು ಶೇ.15ರಿಂದ 17ಕ್ಕೆ ಏರಿಕೆ ಮಾಡಿದ್ದಾರೆ. ಈ ಎಲ್ಲಾ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಸಿಕ್ಕಿದೆ.
ಇಷ್ಟು ದೊಡ್ಡ ಮಟ್ಟದಲ್ಲಿ ಮೊದಲ ಭಾರಿಗೆ ಎಲ್ಲಾ ವರ್ಗದ ಜನರಿಗೆ ಸಮಾನ ನ್ಯಾಯ ಕೊಟ್ಟಿದ್ದಾರೆ. ನಮ್ಮ ಸರ್ಕಾರ ಬಂದಮೇಲೆ ಈ ಎಲ್ಲಾ ಮೀಸಲಾತಿಯನ್ನು ಕಿತ್ತು ಹಾಕುತ್ತೇವೆ ಎಂದು ಕಾಂಗ್ರೆಸ್ ಅಧ್ಯಕ್ಷರು ಹೇಳಿದ್ದಾರೆ. ಇಂದು ಬಿಜೆಪಿ ಪಕ್ಷ ಬಿಟ್ಟು ಕೇವಲ ಶಾಸಕರಾಗುವ ಸ್ವಾರ್ಥದಿಂದ ಕಾಂಗ್ರೆಸ್ ಪಕ್ಷಕ್ಕೆ ಹೋದ ಜಗದೀಶ್ ಶೆಟ್ಟರ್ ಹಾಗೂ ಲಕ್ಷ್ಮಣ ಸವದಿ ಇದಕ್ಕೆ ಮೊದಲು ಉತ್ತರ ಕೊಡಲಿ ಎಂದರು.
ನಾವು ಧಾರ್ಮಿಕ ರೀತಿಯಲ್ಲಿ, ಹಿಂದೂ ಧರ್ಮದ ಸಂಸ್ಕೃತಿಯಲ್ಲಿ ನಾಮಪತ್ರ ಸಲ್ಲಿಕೆ ಮಾಡಿದ್ದೇವೆ. ಮೂಢನಂಬಿಕೆ ಹಾಗೂ ಹಿಂದೂ ಶಬ್ಧ ಅಸಹ್ಯ ಎಂದವರು ಸುಡುಗಾಡಿಗೆ ಹೋಗಿ ನಾಮಪತ್ರ ಪೂಜೆ ಮಾಡಿ ನಂತರ ಸಲ್ಲಿಕೆ ಮಾಡಲಿ ಎಂದು ಶಾಸಕ ಸತೀಶ್ ಜಾರಕಿಹೊಳಿಗೆ ಪರೋಕ್ಷವಾಗಿ ಟಾಂಗ್ ನೀಡಿದರು.