ರಾಜ್ಯದ ಮುಜರಾಯಿ ದೇವಸ್ಥಾನಗಳ ಸಮಗ್ರ ಅಭಿವೃದ್ದಿಗೆ ಪಣ ತೊಟ್ಟಿದ್ದು ಆ ನಿಟ್ಟಿನಲ್ಲಿ ಹಲವಾರು ಕಾರ್ಯಕ್ರಮಗಳು ಮತ್ತು ಯೋಜನೆಗಳನ್ನು ಹಮ್ಮಿಕೊಂಡಿದ್ದೇವೆ ಎಂದು ಮಾನ್ಯ ಮುಜರಾಯಿ, ಹಜ್ ಮತ್ತು ವಕ್ಫ್ ಸಚಿವರಾದ ಶ್ರೀಮತಿ ಶಶಿಕಲಾ ಅ ಜೊಲ್ಲೆ ಹೇಳಿದರು.
ಇಂದು ಉಡುಪಿ ಜಿಲ್ಲೆಯ ಕಾರ್ಕಳದ ಶ್ರೀ ಮಾರಿಯಮ್ಮ ದೇವಸ್ಥಾನದ ಜೀರ್ಣೋದ್ದಾರದ ಪ್ರಯುಕ್ತ ಮುಷ್ಠಿ ಕಾಣಿಕೆ ಸಮರ್ಪಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಐತಿಹಾಸಿಕ ವಿಜಯನಗರ ಜಿಲ್ಲೆಯ ಉಸ್ತುವಾರಿ ಹಾಗೂ ಮಾರಿಯಮ್ಮ ದೇವಸ್ಥಾನದ ಈ ಪುಣ್ಯಕಾರ್ಯದಲ್ಲಿ ಭಾಗವಹಿಸಲು ನನಗೆ ಅವಕಾಶ ಸಿಕ್ಕಿರುವುದು ನನ್ನ ಸೌಭಾಗ್ಯ. ಏಕೆಂದರೆ ವಿಜಯನಗರ ಸಾಮ್ರಾಜ್ಯಕ್ಕೂ ಈ ಮಾರಿಯಮ್ಮ ದೇಗುಲಕ್ಕೂ ಅವಿನಾಭಾವ ಸಂಬಂಧವಿತ್ತು. ವಿಜಯನಗರ ಸಾಮ್ರಾಜ್ಯದ ಪೂರ್ವದಿಂದಲೂ ಈ ದೇವಾಲಯದ ಕುರುಹುಗಳಿವೆ. ಮೊದಲು ಅರಸರು ಯುದ್ಧಕ್ಕೆ ಹೊರಡುವಾಗ ಈ ದೇವಾಲಯಕ್ಕೆ ಹೋಗುವ ಪ್ರತೀತಿ ಇತ್ತು. ಅಲ್ಲಿ ಪೂಜಿಸಿದರೆ ಅವರಿಗೆ ಜಯ ಕಟ್ಟಿಟ್ಟ ಬುತ್ತಿ ಎಂಬ ನಂಬಿಕೆಯಿತ್ತು. ಈ ದೇವಸ್ಥಾನದ ಜೀರ್ಣೋದ್ದಾರಕ್ಕೆ 1 ಕೋಟಿ ರೂಪಾಯಿಗಳ ಅನುದಾನ ಬಿಡುಗಡೆಯಾಗಿದೆ. ಮೊದಲ ಹಂತದಲ್ಲಿ 25 ಲಕ್ಷ ರೂಪಾಯಿಗಳ ಹಣ ಬಿಡುಗಡೆಯಾಗಿದ್ದು, ಅಗತ್ಯವಿದ್ದಲ್ಲಿ ಇನ್ನೂ ಹೆಚ್ಚಿನ ಅನುದಾನ ನೀಡುವ ಭರವಸೆ ನೀಡಿದರು.
ದೇವಸ್ಥಾನಗಳು ನಮ್ಮ ಸಮಾಜದಲ್ಲಿ ತಮ್ಮದೇ ಆದ ವಿಶಿಷ್ಟ ಸ್ಥಾನ ಹೊಂದಿವೆ. ಮಾನಸಿಕವಾಗಿ ನೆಮ್ಮದಿಯನ್ನು ನೀಡುವ ತಾಣಗಳಾಗಿರುವ ಇವುಗಳ ಸಮಗ್ರ ಅಭಿವೃದ್ದಿಗೆ ನಾನು ಪಣ ತೊಟ್ಟಿದ್ದೇನೆ. ಮುಜರಾಯಿ ಖಾತೆಯನ್ನು ನಿಭಾಯಿಸಲು ನನಗೆ ಅವಕಾಶ ಸಿಕ್ಕಿರುವುದು ನನ್ನ ಪೂರ್ವ ಜನ್ಮದ ಪುಣ್ಯವೇ ಸರಿ. ಈ ಸದಾವಕಾಶವನ್ನು ಉಪಯೋಗಿಸಿಕೊಂಡು ದೈವಸಂಕಲ್ಪ ಮತ್ತು ಕಾಯಕಲ್ಪದಂತಹ ಯೋಜನೆಗಳನ್ನು ಪ್ರಾರಂಭಿಸಲಾಗಿದೆ. ಮುಜರಾಯಿ ದೇವಸ್ಥಾನಗಳು ಅಭಿವೃದ್ದಿಯಾಗುವುದರಿಂದ ಭಕ್ತರುಗಳಿಗೆ ಅತ್ಯುತ್ತಮ ಸೇವೆ ಮತ್ತು ಸೌಲಭ್ಯಗಳನ್ನು ಒದಗಿಸಲು ಸಾಧ್ಯ. ಬಿಜೆಪಿ ಸರಕಾರ ಬೇರೆ ಯಾವುದೇ ಸರಕಾರಗಳಿಗಿಂತಲೂ ಹೆಚ್ಚಿನ ಅನುದಾನ ನೀಡಿದೆ. ಮಾನ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ದೇವಸ್ಥಾನದ ಅಭಿವೃದ್ದಿ ಕಾರ್ಯಗಳಿಗೆ ಸಹಕಾರ ನೀಡುತ್ತಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಸಚಿವರಾದ ಸುನೀಲ್ ಕುಮಾರ್, ಆಡಳಿತ ಮೋಕ್ತೇಸರ ಹೆ. ಜೆ ರಾಘವೇಂದ್ರ, ದೇವಸ್ಥಾನದ ಅರ್ಚಕರು ಹಾಗೂ ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.