ಬೆಂಗಳೂರು: ಕಾಂಗ್ರೆಸ್ ನಾಯಕ ಸ್ಯಾಮ್ ಪಿತ್ರೋಡಾ ಚರ್ಮದ ಬಣ್ಣದ ಆಧಾರದ ಮೇಲೆ ದಕ್ಷಿಣ ಭಾರತೀಯರನ್ನು ಆಫ್ರಿಕಾದವರಿಗೆ ಹೋಲಿಸಿದ ಹೇಳಿಕೆ ಭಾರೀ ವಿವಾದ ಸೃಷ್ಟಿಸಿದೆ. ಇದೀಗ ಈ ಹೇಳಿಕೆ ಸಂಬಂಧ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಸ್ಯಾಮ್ ಪಿತ್ರೋಡಾ ಅವರನ್ನು ಟೀಕಿಸಿದ್ದಾರೆ.
ಕಾಂಗ್ರೆಸ್ ನಾಯಕ ಸ್ಯಾಮ್ ಪಿತ್ರೋಡಾ ಚರ್ಮದ ಬಣ್ಣದ ಆಧಾರದ ಮೇಲೆ ದಕ್ಷಿಣ ಭಾರತೀಯರನ್ನು ಆಫ್ರಿಕಾದವರಿಗೆ ಹೋಲಿಸಿರುವುದು ಜನಾಂಗೀಯ ನಿಂದನೆ. ಇಂತಹ ಹೋಲಿಕೆಯನ್ನು ಯಾರೂ ಒಪ್ಪಲು ಸಾಧ್ಯವಿಲ್ಲ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಟೀಕಿಸಿದ್ದಾರೆ.
'ಎಕ್ಸ್' ಮೂಲಕ ಪಿತ್ರೋಡಾ ಹೇಳಿಕೆಯನ್ನು ಖಂಡಿಸಿರುವ ಅವರು, ಈ ಹೇಳಿಕೆ ನೋಡಿದರೆ ನೆಹರೂಗಾಂಧಿ ಕುಟುಂಬದ ವಸಾಹತು ಮನಸ್ಥಿತಿಯನ್ನು ಬಿಂಬಿಸುತ್ತದೆ.
ಕಾಂಗ್ರೆಸ್ ಪಕ್ಷದ ಇಂತಹ ವಿಭಜಕ ನೀತಿಯ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರತಿಕ್ರಿಯೆ ಏನು? ಕನ್ನಡದ ಹೆಮ್ಮೆಯ ಬಗ್ಗೆ ಮಾತನಾಡುವ ಇವರು ಈಗ ಏನು ಹೇಳುತ್ತಾರೆ ಎಂದು ಪ್ರಶ್ನಿಸಿದರು.