ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರನ್ನು BJP ಕಡೆಗಣನೆ ಮಾಡಲಾಗುತ್ತಿದೆ ಎಂಬ ಅನುಮಾನಗಳಿಗೆ ಪೂರಕ ಎಂಬಂತೆ ಅವರ ಹೆಸರನ್ನು ಪ್ರಧಾನಿಗಳ ಕಾರ್ಯಕ್ರಮದಿಂದ ಕೈ ಬಿಡಲಾಗಿದೆ. ರಾಷ್ಟ್ರೀಯ ಯುವಜನೋತ್ಸವ ಕಾರ್ಯಕ್ರಮಕ್ಕೆ ನಾಳೆ ಹುಬ್ಬಳ್ಳಿಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಲಿದ್ದಾರೆ. ಆದರೆ ಈ ಕಾರ್ಯಕ್ರಮದ ಪಟ್ಟಿಯಲ್ಲಿ ಜಗದೀಶ್ ಶೆಟ್ಟರ್ ಹೆಸರನ್ನು ಕೈ ಬಿಡಲಾಗಿದೆ. ದಸರಾ ಸಮಯದಲ್ಲಿ ಹುಬ್ಬಳ್ಳಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಆಗಮಿಸಿದ್ದ ವೇಳೆಯೂ ಇದೇ ರೀತಿ ನಡೆದಿತ್ತು. ರಾಷ್ಟ್ರಪತಿಗಳ ಪೌರ ಸನ್ಮಾನ ಕಾರ್ಯಕ್ರಮದಲ್ಲಿಯೂ ಶೆಟ್ಟರ್ ಹೆಸರನ್ನು ಕೈಬಿಡಲಾಗಿತ್ತು. ಈ ಬಗ್ಗೆ ಶೆಟ್ಟರ್ ಅಸಮಾಧಾನ ಹೊರ ಹಾಕಿದಾಗ ವೇದಿಕೆಯಲ್ಲಿ ಸ್ಥಾನ ಮೀಸಲಿರಿಸಲಾಗಿತ್ತು. ಇದೀಗ ಪ್ರಧಾನಿ ಮೋದಿ ಕಾರ್ಯಕ್ರಮಕ್ಕೂ ಜಗದೀಶ್ ಶೆಟ್ಟರ್ ಅವರಿಗೆ ಕೊಕ್ ಕೊಡಲಾಗಿದೆ. ಜಗದೀಶ್ ಶೆಟ್ಟರ್ ಕ್ಷೇತ್ರದಲ್ಲಿಯೇ ಕಾರ್ಯಕ್ರಮ ನಡೆಯುತ್ತಿದ್ದರೂ ಸ್ಥಳೀಯ ಶಾಸಕರ ಹೆಸರನ್ನು ಆಹ್ವಾನ ಪತ್ರಿಕೆಯಿಂದ ಕೈ ಬಿಡಲಾಗಿದೆ. ಈ ಕಡೆಗಣನೆಗೆ ಶೆಟ್ಟರ್ ಬೆಂಬಲಿಗರು ಆಕ್ರೋಶ ಹೊರ ಹಾಕಿದ್ದಾರೆ. ನಾಳೆ ಹುಬ್ಬಳ್ಳಿಯ ಕುಸಗಲ್ ರೈಲ್ವೇ ಮೈದಾನದಲ್ಲಿ ಯುವಜನೋತ್ಸವ ಕಾರ್ಯಕ್ರಮ ನಡೆಯಲಿದೆ.