ಬೆಂಗಳೂರು: ಪತ್ನಿ ಪಾರ್ವತಿಗೆ ಅನಾರೋಗ್ಯವಾಗಿದ್ದು ಸಿಎಂ ಸಿದ್ದರಾಮಯ್ಯ ಕೆಲಸ ಕಾರ್ಯ ಬಿಟ್ಟು ಆಸ್ಪತ್ರೆಗೆ ದೌಡಾಯಿಸಿದ್ದಾರೆ. ಅಷ್ಟಕ್ಕೂ ಅವರಿಗೆ ಏನಾಗಿದೆ ಇಲ್ಲಿದೆ ವಿವರ.
ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿರುವ ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿಯನ್ನು ಶೇಷಾದ್ರಿಪುರಂನಲ್ಲಿರುವ ಖಾಸಗಿ ಆಸ್ಪತ್ರೆಗೆ ನಿನ್ನೆಯೇ ದಾಖಲಾಗಿದ್ದರು. ಅವರನ್ನು ಐಸಿಯುವಿನಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಆದರೆ ಈ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ ದೆಹಲಿಯಲ್ಲಿದ್ದರು. ಪ್ರಧಾನಿ ಮೋದಿ ಭೇಟಿ, ಸಂಪುಟ ವಿಸ್ತರಣೆ ಚರ್ಚೆ ಸಂಬಂಧ ಸಿದ್ದರಾಮಯ್ಯ ದೆಹಲಿಯಲ್ಲಿದ್ದರು. ಪತ್ನಿಯ ಅನಾರೋಗ್ಯ ಹಿನ್ನಲೆಯಲ್ಲಿ ಅವರು ಇಂದು ಮುಂಜಾನೆಯೇ ದೆಹಲಿಯಿಂದ ಬಂದು ನೇರವಾಗಿ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.
ಆಸ್ಪತ್ರೆಯಲ್ಲಿ ಸುಮಾರು ಅರ್ಧಗಂಟೆಯಿದ್ದು ವೈದ್ಯರ ಜೊತೆಗೂ ಸಮಾಲೋಚನೆ ನಡೆಸಿದ್ದಾರೆ. ಸದ್ಯಕ್ಕೆ ಪಾರ್ವತಿ ಸಿದ್ದರಾಮಯ್ಯ ಆರೋಗ್ಯ ಸುಧಾರಿಸುತ್ತಿದೆ ಎಂದು ತಿಳಿದುಬಂದಿದೆ. ಆದರೂ ಇನ್ನೂ 2-3 ದಿನ ಆಸ್ಪತ್ರೆಯಲ್ಲಿಯೇ ಇರಲಿದ್ದಾರೆ.