ಬೆಂಗಳೂರು: ಮಳೆ ಬಂದ ಮೇಲೆ ಇದೇನಾ ಬ್ರ್ಯಾಂಡ್ ಬೆಂಗಳೂರು ಎಂದು ವಿಪಕ್ಷಗಳು, ನೆಟ್ಟಿಗರು ಟೀಕೆ ಮಾಡಿದ್ದೇ ಮಾಡಿದ್ದು. ಇದೀಗ ಸಿಎಂ ಸಿದ್ದರಾಮಯ್ಯ ಸಾಲ ಮಾಡಿ ಬೆಂಗಳೂರು ಅಭಿವೃದ್ಧಿ ಮಾಡಲು ಹೊರಟಿದ್ದಾರೆ.
3,000 ಕೋಟಿ ರೂ. ಸಾಲ ಮಾಡಿ ನಾವು ಬೆಂಗಳೂರನ್ನು ಅಭಿವೃದ್ಧಿ ಮಾಡಲಿದ್ದೇವೆ. ಬೆಂಗಳೂರಿನ ಮೂಲಭೂತ ಸೌಕರ್ಯಾಭಿವೃದ್ಧಿ ಮಾಡಲಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಹಿಂದಿನ ಸರ್ಕಾರಗಳು ಮೂಲಭೂತ ಸೌಕರ್ಯ ಅಭಿವೃದ್ಧಿಪಡಿಸಲು ವಿಫಲವಾಗಿದ್ದವು. ಈಗ ನಾವು ಸಾಲ ಮಾಡಿ ಅಭಿವೃದ್ಧಿ ಮಾಡಲಿದ್ದೇವೆ ಎಂದಿದ್ದಾರೆ.
ಬೆಂಗಳೂರು ಮಳೆ ಬಂದಾಗಲೆಲ್ಲಾ ರಸ್ತೆಗಳು ನೀರಿನಲ್ಲಿ ಮುಳುಗಿ ಹೋಗುತ್ತವೆ, ರಸ್ತೆ ಗುಂಡಿಗಳು ವಾಹನ ಸವಾರರ ಪಾಲಿಗೆ ಗಂಡಾಂತರ ತಂದಿಡುತ್ತದೆ. ಮಳೆ ಬಂದಾಗಲೇ ಇಂತಹ ಹಲವು ಸಮಸ್ಯೆಗಳು ಎಲ್ಲರ ಕಣ್ಣಿಗೆ ಬೀಳುತ್ತವೆ. ಇದೀಗ ಎಲ್ಲಾ ಸರಿಮಾಡುವುದಾಗಿ ಸಿಎಂ ಭರವಸೆ ನೀಡಿದ್ದಾರೆ.
ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ ಎಂದು ಟೀಕಿಸುತ್ತಿರುವ ವಿಪಕ್ಷಗಳಿಗೆ ಸಿಎಂ ಸಿದ್ದರಾಮಯ್ಯ ಹೇಳಿಕೆ ಅಸ್ತ್ರವಾಗಲಿದೆ. ಗ್ಯಾರಂಟಿ ಯೋಜನೆಗಳಿಂದಾಗಿ ಸರ್ಕಾರ ಆರ್ಥಿಕ ಹೊರೆ ತಗ್ಗಿಸಲು ಹೆಣಗಾಡುತ್ತಿದೆ. ಇದರ ನಡುವೆ ಅಭಿವೃದ್ಧಿಗೆ ಹಣ ಹೊಂದಿಸಲು ಸಾಲದ ಮೊರೆ ಹೋಗಬೇಕಾಗಿದೆ.