ಬೆಂಗಳೂರು: ಬಿಜೆಪಿ ತೊರೆಯಲು ಸಜ್ಜಾಗಿರುವ ಶಾಸಕ ಎಸ್ ಟಿ ಸೋಮಶೇಖರ್ ಇದೀಗ ಬಿಜೆಪಿಯ ಮತ್ತೆ 8 ಶಾಸಕರು ಕಾಂಗ್ರೆಸ್ ಸೇರಲು ರೆಡಿಯಾಗಿದ್ದಾರೆ ಎಂದು ಬಾಂಬ್ ಸಿಡಿಸಿದ್ದಾರೆ.
ಬಿಜೆಪಿ ಶಾಸಕರಾಗಿರುವ ಎಸ್ ಟಿ ಸೋಮಶೇಖರ್ ಈಗಾಗಲೇ ಕಾಂಗ್ರೆಸ್ ಜೊತೆ ಗುರುತಿಸಿಕೊಂಡಿದ್ದಾರೆ. ಕಾಂಗ್ರೆಸ್ ನ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದಾರೆ. ವಿಧಾನಪರಿಷತ್ ಚುನಾವಣೆಯಲ್ಲೂ ಕಾಂಗ್ರೆಸ್ ಪರ ಮತ ಚಲಾಯಿಸಿದ್ದರು. ಈ ಮೂಲಕ ಕಾಂಗ್ರೆಸ್ಸಿಗರೇ ಆಗಿದ್ದಾರೆ.
ಈ ಹಿಂದೆ ದೋಸ್ತಿ ಸರ್ಕಾರವಿದ್ದಾಗ ಕಾಂಗ್ರೆಸ್ ನಲ್ಲಿದ್ದ ಎಸ್ ಟಿ ಸೋಮಶೇಖರ್ ಬಳಿಕ ಬಿಜೆಪಿ ಸೇರಿಕೊಂಡು ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿಯೂ ಇದ್ದರು. ಆದರೆ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಮತ್ತೆ ಮಾತೃ ಪಕ್ಷಕ್ಕೆ ಹಾರಿದ್ದಾರೆ. ಬಿಜೆಪಿಯಿಂದ ಶಾಸಕನಾಗಿ ಆಯ್ಕೆಯಾದರೂ ಕಾಂಗ್ರೆಸ್ ಗೆ ನಿಷ್ಠೆ ತೋರಿಸಿದ್ದಾರೆ.
ಇದೀಗ ತಮ್ಮ ಜೊತೆ ಇನ್ನೂ 8 ಶಾಸಕರು ಕಾಂಗ್ರೆಸ್ ಸೇರಲು ರೆಡಿಯಾಗಿರುವುದಾಗಿ ಹೇಳಿದ್ದಾರೆ. ನನ್ನ ಮೇಲೆ ಶಿಸ್ತು ಕ್ರಮ ಕೈಗೊಂಡರೂ ನನಗೆ ಭಯವಿಲ್ಲ. ನನಗೆ ನನ್ನ ಕ್ಷೇತ್ರದ ಅಭಿವೃದ್ಧಿಯೇ ಮುಖ್ಯ. ಅದಕ್ಕಾಗಿ ಆಗಾಗ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಭೇಟಿಯಾಗುತ್ತಿರುತ್ತೇನೆ. ಆರ್ ಅಶೋಕ್ ಮಾತಿಗೆಲ್ಲ ಬೆಲೆ ಕೊಡಲ್ಲ. ಸದ್ಯದಲ್ಲೇ 8 ಬಿಜೆಪಿ ಶಾಸಕರು ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ ಎಂದು ಎಸ್ ಟಿ ಸೋಮಶೇಖರ್ ಹೇಳಿದ್ದಾರೆ.