ಬೆಂಗಳೂರು: ಹಾಸನದಲ್ಲಿ ಟ್ರಕ್ ಹರಿದು 9 ಮಂದಿ ಸಾವನ್ನಪ್ಪಿದ ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಸಿಎಂ ಸಿದ್ದರಾಮಯ್ಯ ಡ್ರೈವರ್ ತಪ್ಪಿನಿಂದ ಆಗುವ ಅಪಘಾತಗಳಿಗೆ ಸರ್ಕಾರ ಹೇಗೆ ಹೊಣೆ ಆಗುತ್ತದೆ ಎಂದು ಪ್ರಶ್ನಿಸಿದ್ದಾರೆ.
ಅಪಘಾತಗಳನ್ನು ತಡೆಯಬೇಕು ಎಂಬ ಬಗ್ಗೆ ನಾವು ರಸ್ತೆ ಸುರಕ್ಷತಾ ಕ್ರಮಗಳನ್ನು ಮಾಡಿದ್ದೇವೆ. ಹಾಗಿದ್ದರೂ ಡ್ರೈವರ್ ತಪ್ಪಿನಿಂದ ಅಪಘಾತಗಳು ಸಂಭವಿಸಿದರೆ ಅದಕ್ಕೆ ಸರ್ಕಾರ ಹೇಗೆ ಹೊಣೆಯಾಗುತ್ತದೆ ಎಂದು ಪ್ರಶ್ನೆ ಮಾಡಿದ್ದಾರೆ.
ಹಾಸನದಲ್ಲಿ ಟ್ಯಾಂಕರ್ ಚಾಲಕನ ಅಜಾಗರೂಕ ಚಾಲನೆಯಿಂದ ಗಣೇಶ ಮೆರವಣಿಗೆ ಮಾಡುತ್ತಿದ್ದವರ ಮೇಲೆ ಹರಿದು 9 ಮಂದಿ ಸಾವನ್ನಪ್ಪಿದ್ದರು. 25 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಮೃತಪಟ್ಟ ಕುಟುಂಬಸ್ಥರಿಗೆ ಸಿಎಂ ಸಿದ್ದರಾಮಯ್ಯ 5 ಲಕ್ಷ ರೂ ಪರಿಹಾರ ಘೋಷಿಸಿದ್ದಾರೆ.
ಆದರೆ ಬಿಜೆಪಿ ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದು ಮೃತಪಟ್ಟವರ ಕುಟುಂಬಕ್ಕೆ 5 ಲಕ್ಷ ಅಲ್ಲ 10 ಲಕ್ಷ ರೂ. ಪರಿಹಾರ ಕೊಡಬೇಕು ಎಂದು ಆಗ್ರಹಿಸಿದೆ. ಇದಕ್ಕೆ ಪ್ರತಿಕ್ರಿಯಿಸಿದ ಅವರು ಅಪಘಾತದಲ್ಲಿ ಮೃತಪಟ್ಟರೆ 5 ಲಕ್ಷ ರೂ. ಪರಿಹಾರ ಕೊಡ್ತೀವಿ. ಇದು ಆರ್ಥಿಕವಾಗಿ ಕುಟುಂಬಸ್ಥರಿಗೆ ನೆರವಾಗಲಿ ಎಂದು ಅಷ್ಟೇ. ಆದರೆ ಮೃತರಿಗೆ ಸಮ ಎಂದಲ್ಲ. ರಸ್ತೆ ಸುರಕ್ಷತೆ ಬಗ್ಗೆ ನಾವು ಕ್ರಮ ಕೈಗೊಂಡಿದ್ದೇವೆ. ಹಾಗಿದ್ದರೂ ಡ್ರೈವರ್ ತಪ್ಪಿನಿಂದ ಅಪಘಾತವಾದರೆ ಸರ್ಕಾರ ಹೇಗೆ ಹೊಣೆಯಾಗುತ್ತದೆ ಎಂದಿದ್ದಾರೆ.