ಹಾಸನ: ಇಲ್ಲಿ ಗಣೇಶೋತ್ಸವ ಮೆರವಣಿಗೆ ವೇಳೆ ನಿನ್ನೆ ರಾತ್ರಿ ಟ್ರಕ್ ಹರಿದು 9 ಜನ ಸಾವನ್ನಪ್ಪಿದ ಭೀಕರ ದುರಂತ ನಡೆದಿದ್ದು ಇದಕ್ಕೆ ನಿಜ ಕಾರಣವೇನೆಂದು ಬಯಲಾಗಿದೆ.
ಹಾಸನದ ಮೊಸಳೆಹೊಸಳ್ಳಿಯಲ್ಲಿ ಗಣೇಶ ಮೆರವಣಿಗೆ ಸಾಗುತ್ತಿದ್ದವರ ಮೇಲೆ ಟ್ರಕ್ ಒಂದು ಹರಿದು 9 ಜನ ಸಾವನ್ನಪ್ಪಿದ್ದು 25 ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿವೆ. ಡಿಜೆ ಸದ್ದಿಗೆ ಮೈಮರೆತು ಕುಣಿಯುತ್ತಿದ್ದವರ ಮೇಲೆ ಟ್ರಕ್ ಯಮ ಕಂಟಕವಾಗಿ ಪರಿಣಮಿಸಿದೆ.
ಘಟನೆಗೆ ಸಿಎಂ ಸಿದ್ದರಾಮಯ್ಯ ಸೇರಿದಂತೆ ಅನೇಕರು ಆಘಾತ ವ್ಯಕ್ತಪಡಿಸಿದ್ದಾರೆ. ವಿಪರ್ಯಾಸವೆಂದರೆ ಮೃತರ ಪೈಕಿ ಅನೇಕರು ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದ ಯುವಕರಾಗಿದ್ದಾರೆ. ಮನೆ ಮಗನನ್ನು ಕಳೆದುಕೊಂಡು ಆ ಕುಟುಂಬದವರ ಗೋಳು ಹೇಳತೀರದಾಗಿದೆ.
ನಿನ್ನೆ ರಾತ್ರಿ 8 ಗಂಟೆ ಸುಮಾರಿಗೆ ರಾಷ್ಟ್ರೀಯ ಹೆದ್ದಾರಿ 373 ರಲ್ಲಿ ಗಣೇಶ ಮೆರವಣಿಗೆ ಸಾಗಿತ್ತು. ಮೆರವಣಿಗೆ ನಿಮಿತ್ತ ಒಂದು ಬದಿ ಬಂದ್ ಮಾಡಿದ್ದರಿಂದ ಇನ್ನೊಂದು ಬದಿಯಲ್ಲಿ ದ್ವಿಮುಖ ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು ಮತ್ತು ಬ್ಯಾರಿಕೇಡ್ ಗಳನ್ನೂ ಹಾಕಲಾಗಿತ್ತು.
ಈ ವೇಳೆ ಹಾಸನದಿಂದ ಹೊಳೆನರಸೀಪುರಕ್ಕೆ ಟ್ರಕ್ ಮೊದಲು ಬೈಕ್ ಗೆ ಢಿಕ್ಕಿ ಹೊಡೆದು ಬಳಿಕ ಬ್ಯಾರಿಕೇಡ್ ಗೆ ಗುದ್ದಿಕೊಂಡು ಸೀದಾ ಮೆರವಣಿಗೆ ಸಾಗುತ್ತಿದ್ದವರ ಮೇಲೆ ಹರಿದಿತ್ತು. ಚಾಲಕನ ಅಜಾಗರೂಕ ಚಾಲನೆ ಮತ್ತು ಅತಿಯಾದ ವೇಗವೇ ಘಟನೆಗೆ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ಬಹಿರಂಗವಾಗಿದೆ.