Select Your Language

Notifications

webdunia
webdunia
webdunia
webdunia

Siddaramaiah: ಕಾಳಿದಾಸನ ನಾಲಿಗೆ ಮೇಲೆ ಬ್ರಹ್ಮ ಅಕ್ಷರ ಬರೆದ ಅನ್ನೋದನ್ನೆಲ್ಲಾ ನಂಬಬೇಡಿ: ಸಿಎಂ ಸಿದ್ದರಾಮಯ್ಯ

Siddaramaiah

Krishnaveni K

ತುಮಕೂರು , ಶನಿವಾರ, 19 ಏಪ್ರಿಲ್ 2025 (16:31 IST)
ತುಮಕೂರು: ಇಲ್ಲಿ ನಡೆದ ಕುರುಬ ಸಮಾಜದ ಸಾಂಸ್ಕೃತಿ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಿಎಂ ಸಿದ್ದರಾಮಯ್ಯ ಕಾಳಿದಾಸನ ನಾಲಿಗೆ ಮೇಲೆ ಬ್ರಹ್ಮ ಅಕ್ಷರ ಬರೆದ ಅನ್ನೋದನ್ನೆಲ್ಲಾ ನಂಬಬೇಡಿ ಎಂದಿದ್ದಾರೆ. ಸಿಎಂ ಭಾಷಣದ ತುಣುಕು ಇಲ್ಲಿದೆ ನೋಡಿ.

ನಮ್ಮ ಜ್ಞಾನ ತಿಳಿವಳಿಕೆಯಲ್ಲಿ ಸ್ಪಷ್ಟತೆ ಇರಬೇಕು. ಕರ್ಮ ಸಿದ್ಧಾಂತವನ್ನು ಧಿಕ್ಕರಿಸುವ ವೈಜ್ಞಾನಿಕ, ವೈಚಾರಿಕ ಚಿಂತನೆ ಇರಬೇಕು. ಆಗ ಮಾತ್ರ ಗುಲಾಮಗಿರಿಯಿಂದ ಹೊರಗೆ ಬರಬಹುದು ಹಾಗೂ ಸತ್ಯ ಹೇಳುವ ಛಾತಿ ಬೆಳೆಸಿಕೊಳ್ಳಬಹುದು.

ಕಾಳಿದಾಸನ ನಾಲಗೆ ಮೇಲೆ ಬ್ರಹ್ಮ‌ ಅಕ್ಷರ ಬರೆದದ್ದಕ್ಕೆ ಮಹಾ ಸಾಹಿತಿಯಾದ ಎನ್ನುವ ಮಾತನ್ನೆಲ್ಲಾ ನಂಬಬೇಡಿ. ವಾಲ್ಮೀಕಿ ದರೋಡೆಕೋರ ಆಗಿದ್ದ ಅನ್ನುವುದನ್ನೆಲ್ಲಾ ನಂಬಬೇಡಿ. ಶೂದ್ರರು ವಿದ್ಯಾವಂತರಾಗಿ ಏನಾದರೂ ಮಹತ್ವವಾದದ್ದನ್ನು ಬರೆದರೆ ಅವರ ಬಗ್ಗೆ ಇಂಥಾ ಕತೆಗಳನ್ನು ಕಟ್ಟಿ ಬಿಡುತ್ತಾರೆ.

ಬಸವಣ್ಣ 850 ವರ್ಷಗಳ ಹಿಂದೆಯೇ ಅನುಭವ ಮಂಟಪ ರಚಿಸಿ ಸಮ ಸಮಾಜ ನಿರ್ಮಾಣಕ್ಕೆ ಮುನ್ನುಡಿ ಬರೆದಿದ್ದರು. ಪ್ರಗತಿಪರ ವಿಚಾರಗಳನ್ನು ಇಟ್ಟುಕೊಂಡವರಿಗೆ ನಿರಂತರವಾಗಿ ಸಮಸ್ಯೆ ಬರುತ್ತಲೇ ಇರುತ್ತವೆ. ಹೀಗಾಗಿ ಪ್ರಗತಿಪರ ವಿಚಾರಗಳ ಜೊತೆ ನೀವು ಸದಾ ಗಟ್ಟಿಯಾಗಿ ನಿಲ್ಲಬೇಕು.
ಪ್ರಗತಿಪರ ವಿಚಾರಗಳ ಜೊತೆಗೆ ನಾವು ನಿಲ್ಲದೆ ಸಮ ಸಮಾಜ ಬರಬೇಕು ಎಂದರೆ ಸಾಧ್ಯವಿಲ್ಲ.

ಜಾತಿ ಮುಕ್ತ ಮಾನವೀಯ ಸಮಾಜ ನಿರ್ಮಾಣ ನಮ್ಮ ಸಂವಿಧಾನದ ಆಶಯ ಮತ್ತು ಬದ್ಧತೆ. ಆದರೆ ಇವತ್ತಿಗೂ ಅಸ್ಪೃಶ್ಯತೆ ಹೋಗಿಲ್ಲದಿರುವುದು, ಶೈಕ್ಷಣಿಕ ಸಮಾನತೆ ಸಾಧ್ಯವಾಗಿಲ್ಲದಿರುವುದು ದುರಂತ.

ನಾನು ಶಿಕ್ಷಣ ಪಡೆದಿರುವುದು ನನ್ನ ಸ್ವಾರ್ಥಕ್ಕೆ ಅಲ್ಲ. ಅವಕಾಶ ವಂಚಿತ ಸಮುದಾಯಗಳ ಬಿಡುಗಡೆಗಾಗಿ ವಿದ್ಯೆ ಸಂಪಾದನೆ ಮಾಡಿದ್ದೇನೆ ಎನ್ನುವ ಅಂಬೇಡ್ಕರ್ ಅವರ ಮಾತನ್ನು ಅರ್ಥ ಮಾಡಿಕೊಳ್ಳಬೇಕು.

ಪಟ್ಟಭದ್ರರು ಹಿಂದಿನ ಜನ್ಮದ ಕರ್ಮ ಎಂದು ನಂಬಿಸಿ ಜನರನ್ನು ವಂಚಿಸುತ್ತಿದ್ದಾರೆ. ಅದಕ್ಕೇ ಬಸವಣ್ಣನವರು ಕರ್ಮ ಸಿದ್ಧಾಂತವನ್ನು ತಿರಸ್ಕರಿಸಿದರು. ನಿಮ್ಮಲ್ಲಿ ಎಷ್ಟು ಜನ ಕರ್ಮ ಸಿದ್ಧಾಂತ ತಿರಸ್ಕರಿಸಿದ್ದೀರೋ ಗೊತ್ತಿಲ್ಲ.

ಬ್ರಹ್ಮ ಒಬ್ಬರಿಗೆ ಶಿಕ್ಷಣ, ಮತ್ತೊಬ್ಬರಿಗೆ ಅನಕ್ಷರತೆ ಸಿಗಲಿ ಅಂತ ಬರೆದರಾ? ಒಬ್ಬನಿಗೆ ಬಡವನಾಗು, ಮತ್ತೊಬ್ಬನಿಗೆ ಶ್ರೀಮಂತನಾಗು ಅಂತ ಬ್ರಹ್ಮ ಬರೆದರಾ ? ಒಬ್ಬ ಹೊಟ್ಟೆತುಂಬ ಉಣ್ಣಬೇಕು, ಉಳಿದವರು ಹಸಿವಿನಿಂದ ಬಿದ್ದಿರಬೇಕು ಎಂದು ಬ್ರಹ್ಮ ಬರೆದುಬಿಟ್ಟರಾ?

ಪಟ್ಟಭದ್ರರು ಬಸವಣ್ಣನವರ ಕ್ರಾಂತಿ ಮುಂದುವರೆಸಲು ಬಿಡಲಿಲ್ಲ. ಆದ್ದರಿಂದ ನಾವು ವೈಜ್ಞಾನಿಕವಾಗಿ, ವೈಚಾರಿಕವಾಗಿ ಚಿಂತಿಸುವುದು ಅಗತ್ಯ. ಕಾಯಕ, ದಾಸೋಹ ಬಸವಣ್ಣನವರ ತತ್ವ. ಇದನ್ನು ಎಲ್ಲರೂ ಪಾಲಿಸಬೇಕು.

ಎಲ್ಲಾ ಶ್ರಮಿಕ ವರ್ಗಗಳ ಸಂಸ್ಕೃತಿ, ಆಚಾರ, ವಿಚಾರ ಹೊರಗೆ ಬರಬೇಕು. ಇದಕ್ಕಾಗಿ ಎಲ್ಲರೂ ಸಾಹಿತ್ಯ ರಚನೆಯಲ್ಲಿ ತೊಡಗಬೇಕು.

ಹಿಂದೆ ಸಂಸ್ಕೃತ ಕಲಿಯುವವರಿಗೆ ಕಾದ ಸೀಸದ ಶಿಕ್ಷೆ ನಿಗದಿಯಾಗಿತ್ತು. ಆದರೆ ಈಗ ಶಿಕ್ಷಣ ಸಿಕ್ಕಿದೆ. ನಿಮ್ಮ‌ ನಿಮ್ಮ ಜೀವನಾನುಭವಗಳನ್ನು ದಾಖಲಿಸಿ. ಪ್ರತಿಭೆ ಯಾರೊಬ್ಬರ ಸ್ವತ್ತು ಅಲ್ಲ. ನಮ್ಮ ಜ್ಞಾನ ವೈಜ್ಞಾನಿಕವಾಗಿ, ವೈಚಾರಿಕವಾಗಿ ಇರಬೇಕು ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೆನಡಾದಲ್ಲಿ ಬಸ್‌ಗಾಗಿ ಕಾಯುತ್ತಿದ್ದ ಭಾರತದ ವಿದ್ಯಾರ್ಥಿನಿಗೆ ಗುಂಡು ತಗುಲಿ ಸಾವು