ಬೆಂಗಳೂರು: ಇತ್ತೀಚೆಗೆ ಅನುದಾನ ಬಿಡುಗಡೆ ಮಾಡುತ್ತಿಲ್ಲ ಎಂದು ಕಾಂಗ್ರೆಸ್ ಶಾಸಕರೇ ಸರ್ಕಾರದ ವಿರುದ್ಧ ಬಹಿರಂಗವಾಗಿ ಅಸಮಾಧಾನ ತೋಡಿಕೊಂಡಿದ್ದಲ್ಲದೆ, ಉಸ್ತುವಾರಿ ರಣದೀಪ್ ಸುರ್ಜೇವಾಲಗೂ ದೂರು ಕೊಟ್ಟಿದ್ದರು. ಇದರ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಶಾಸಕರಿಗೆ ಅನುದಾನ ಬಿಡುಗಡೆ ಮಾಡಿದ್ದಾರೆ.
ಕ್ಷೇತ್ರದ ಅಭಿವೃದ್ಧಿಗೆ ಅನುದಾನ ಬಿಡುಗಡೆಯಾಗುತ್ತಿಲ್ಲ. ಇದಕ್ಕೆಲ್ಲಾ ಗ್ಯಾರಂಟಿ ಯೋಜನೆಗಳೇ ಕಾರಣ ಎಂದು ಸ್ವಪಕ್ಷದ ಶಾಸಕರೇ ಬಹಿರಂಗ ಹೇಳಿಕೆ ಕೊಡಲು ಶುರು ಮಾಡಿದ್ದರು. ಅಲ್ಲದೆ, ಇತ್ತೀಚೆಗೆ ಒನ್ ಟು ಒನ್ ಮೀಟಿಂಗ್ ವೇಳೆ ರಣದೀಪ್ ಸುರ್ಜೇವಾಲ ಬಳಿಯೂ ದೂರಿತ್ತಿದ್ದರು.
ಇದರ ಬಗ್ಗೆ ರಣದೀಪ್ ಸುರ್ಜೇವಾಲ ಸಿಎಂ ಮತ್ತು ಡಿಸಿಎಂ ಗಮನಕ್ಕೆ ತಂದಿದ್ದು ಸದ್ಯದಲ್ಲೇ ಅನುದಾನ ಬಿಡುಗಡೆ ಮಾಡಿ ಶಾಸಕರ ಅಸಮಾಧಾನ ಶಮನ ಮಾಡಿ. ಇಲ್ಲದಿದ್ದರೆ ಸರ್ಕಾರಕ್ಕೆ ತೊಂದರೆ ಎಂದು ಎಚ್ಚರಿಕೆ ನೀಡಿದ್ದರು.
ಹೀಗಾಗಿ ಈಗ ಕಾಂಗ್ರೆಸ್ ಶಾಸಕರಿಗೆ 50 ಕೋಟಿ, ಬಿಜೆಪಿ ಶಾಸಕರಿಗೆ 25 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಆದರೆ ಇದಕ್ಕೆ ರಾಜ್ಯ ಬಿಜೆಪಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಇದು ಮಲತಾಯಿ ಧೋರಣೆ, ಕಾಂಗ್ರೆಸ್ ಶಾಸಕರಿಗೆ ಮಾತ್ರ 50 ಕೋಟಿ, ಬಿಜೆಪಿ ಶಾಸಕರಿಗೆ ಕೇವಲ 25 ಕೋಟಿ ಯಾಕೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ ವಾಗ್ದಾಳಿ ನಡೆಸಿದ್ದಾರೆ.