ಬೆಂಗಳೂರು: ಈ ವಾರ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ತಕ್ಕ ಮಟ್ಟಿಗೆ ಮಳೆಯಾಗಿತ್ತು. ಈ ವಾರಂತ್ಯಕ್ಕೆ ಬೆಂಗಳೂರು ಮತ್ತು ರಾಜ್ಯದ ಇತರೆ ಭಾಗದಲ್ಲಿ ಮಳೆಯಿರುತ್ತಾ? ಇಲ್ಲಿದೆ ನೋಡಿ ಲೇಟೆಸ್ಟ್ ಹವಾಮಾನ ವರದಿ.
ಈ ವಾರ ಪೂರ್ತಿ ರಾಜ್ಯಾದ್ಯಂತ ಭಾರೀ ಮಳೆಯಾಗಿತ್ತು. ಅದರಲ್ಲೂ ವಿಶೇಷವಾಗಿ ಕರಾವಳಿ ಜಿಲ್ಲೆಗಳು ಮತ್ತು ಮಲೆನಾಡಿನಲ್ಲಿ ಭಾರೀ ಮಳೆಯಾಗಿತ್ತು. ವಿಶೇಷವೆಂದರೆ ಈ ವಾರ ಬೆಂಗಳೂರಿಗೂ ಉತ್ತಮ ಮಳೆಯಾಗಿದೆ. ಜೊತೆಗೆ ವಾರವಿಡೀ ಮೋಡ ಕವಿದ ವಾತಾವರಣವಿತ್ತು.
ಹವಾಮಾನ ವರದಿಗಳ ಪ್ರಕಾರ ಇಂದೂ ರಾಜ್ಯಾದ್ಯಂತ ಭಾರೀ ಮಳೆಯಾಗಲಿದೆ. ಅದರಲ್ಲೂ ಬೆಂಗಳೂರಿಗೆ ಇಂದೂ ಭಾರೀ ಮಳೆಯ ಸೂಚನೆಯಿದೆ. ಅಪರಾಹ್ನದ ಬಳಿಕ ಭಾರೀ ಮಳೆಯಾಗುವ ಸಂಭವವಿದೆ ಎಂದು ವರದಿಗಳು ಹೇಳುತ್ತಿವೆ. ಇದಲ್ಲದೆ ಚಿಕ್ಕಮಗಳೂರು, ಶಿವಮೊಗ್ಗ, ಉತ್ತರ ಕನ್ನಡ, ಮಂಡ್ಯ, ಹಾವೇರಿ, ಕೊಪ್ಪಳ ಜಿಲ್ಲೆಗಳಲ್ಲೂ ಇಂದು ಭಾರೀ ಮಳೆಯಾಗುವ ಸಂಭವವಿದೆ.
ಉಳಿದಂತೆ ಕೊಡಗು, ಹಾಸನ, ಬೆಳಗಾವಿ, ಮೈಸೂರು, ಚಾಮರಾಜನಗರ, ಕೋಲಾರ, ತುಮಕೂರು, ರಾಯಚೂರು, ವಿಜಯಪುರ, ಗದಗ, ಹುಬ್ಬಳ್ಳಿ, ಧಾರವಾಡ, ಬೀದರ್, ಬಾಗಲಕೋಟೆ, ದಾವಣಗೆರೆ ಮೊದಲಾದ ಜಿಲ್ಲೆಗಳಲ್ಲೂ ಇಂದು ಸಾಧಾರಣ ಮಳೆಯಾಗುವ ಸಂಭವವಿದೆ.