Select Your Language

Notifications

webdunia
webdunia
webdunia
webdunia

ಸಿಎಂ ಬೊಮ್ಮಾಯಿ ದೆಹಲಿಗೆ, ಸಂಪುಟ ಬಗ್ಗೆ ಚರ್ಚೆ ಇಲ್ಲ!

ಸಿಎಂ ಬೊಮ್ಮಾಯಿ ದೆಹಲಿಗೆ, ಸಂಪುಟ ಬಗ್ಗೆ ಚರ್ಚೆ ಇಲ್ಲ!
ಬೆಂಗಳೂರು , ಶುಕ್ರವಾರ, 30 ಜುಲೈ 2021 (09:00 IST)
ಬೆಂಗಳೂರು(ಜು.30): ಮುಖ್ಯಮಂತ್ರಿಯಾದ ಬಳಿಕ ಬಸವರಾಜ ಬೊಮ್ಮಾಯಿ ಅವರು ಮೊದಲ ಬಾರಿಗೆ ಶುಕ್ರವಾರ ದೆಹಲಿಗೆ ತೆರಳಲಿದ್ದು, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಕೇಂದ್ರದ ವಿವಿಧ ಇಲಾಖೆಗಳ ಸಚಿವರು ಹಾಗೂ ಬಿಜೆಪಿ ವರಿಷ್ಠರನ್ನು ಭೇಟಿ ಮಾಡಲಿದ್ದಾರೆ. ಆದರೆ, ಈ ಭೇಟಿ ವೇಳೆ ಸಚಿವ ಸಂಪುಟ ರಚನೆಯ ಬಗ್ಗೆ ವರಿಷ್ಠರೊಂದಿಗೆ ಚರ್ಚಿಸುವುದಿಲ್ಲ. ಮುಂದಿನ ಬಾರಿ ತೆರಳಿದಾಗ ಚರ್ಚಿಸುತ್ತೇನೆ ಎಂದು ಬೊಮ್ಮಾಯಿ ಅವರೇ ತಿಳಿಸಿದ್ದಾರೆ.

* ಸಿಎಂ ಬೊಮ್ಮಾಯಿ ಇಂದು ದೆಹಲಿಗೆ
* ಮೋದಿ ಸೇರಿ ಬಿಜೆಪಿ ವರಿಷ್ಠರ ಭೇಟಿ
* ಈ ಬಾರಿ ಸಂಪುಟ ಬಗ್ಗೆ ಚರ್ಚೆ ಇಲ್ಲ
* ಸಂಪುಟಕ್ಕಾಗಿ 4 ದಿನ ಬಳಿಕ ದೆಹಲಿಗೆ
ಬೆಳಗ್ಗೆ 6.10ಕ್ಕೆ ಬೆಂಗಳೂರಿನಿಂದ ದೆಹಲಿಗೆ ತೆರಳಲಿರುವ ಅವರು ಶನಿವಾರ ವಾಪಸಾಗಲಿದ್ದಾರೆ. ಇದೇ ವೇಳೆ ಶುಕ್ರವಾರ ಮಧ್ಯಾಹ್ನ ರಾಜ್ಯದ ಸಂಸದರೊಂದಿಗೆ ಭೋಜನ ಕೂಟ ನಡೆಸಲಿದ್ದಾರೆ.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಬೊಮ್ಮಾಯಿ, ಪ್ರಧಾನಿ ನರೇಂದ್ರ ಮೋದಿ ಅವರು ಕರೆ ಮಾಡಿ ಮಾತನಾಡಿದ್ದಾರೆ. ಒಳ್ಳೆಯ ಆಡಳಿತ ನೀಡುವಂತೆ ಶುಭ ಕೋರಿದ್ದಾರೆ. ಶುಕ್ರವಾರ ದೆಹಲಿಗೆ ತೆರಳಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿ ಮಾಡುತ್ತೇನೆ. ಜತೆಗೆ ರಾಜ್ಯದ ಸಂಸತ್ ಸದಸ್ಯರು ಮತ್ತು ಕೇಂದ್ರ ಸಚಿವರನ್ನು ಸಹ ಭೇಟಿ ಮಾಡಿ ರಾಜ್ಯಕ್ಕೆ ಅನುಕೂಲವಾಗುವ ಬಾಕಿ ಇರುವ ವಿಚಾರಗಳ ಬಗ್ಗೆ ಚರ್ಚೆ ನಡೆಸುತ್ತೇನೆ ಎಂದು ತಿಳಿಸಿದರು.
ಈ ಭೇಟಿ ನೀಡಿದ ವೇಳೆ ಪ್ರಧಾನಿ ಮೋದಿ ಸೇರಿದಂತೆ ಹಿರಿಯರನ್ನು ಭೇಟಿಯಾಗಿ ಆಶೀರ್ವಾದ ಪಡೆಯಲಿದ್ದೇನೆ. ಆದರೆ ಸಚಿವ ಸಂಪುಟ ರಚನೆ ಕುರಿತು ಚರ್ಚಿಸುವುದಿಲ್ಲ. ಈ ವಿಚಾರವಾಗಿ ಮೂರ್ನಾಲ್ಕು ದಿನಗಳ ಬಳಿಕ ಮತ್ತೆ ಸಮಯ ಪಡೆದು ದೆಹಲಿಗೆ ತೆರಳುತ್ತೇನೆ. ಆಗ ಹೈಕಮಾಂಡ್ ಜತೆ ಚರ್ಚಿಸಿ ಸಂಪುಟ ರಚನೆ ಬಗ್ಗೆ ನಿರ್ಣಯ ಕೈಗೊಳ್ಳಲಾಗುವುದು ಎಂದು ಹೇಳಿದರು.
ಜಿಎಸ್ಟಿ ವಿಚಾರವನ್ನು ಸದ್ಯಕ್ಕೆ ನಾನೇ ನೋಡುತ್ತಿದ್ದೇನೆ. 18 ಸಾವಿರ ಕೋಟಿ ರು. ಪರಿಹಾರ ಕೊರತೆ ಇದೆ. ಕಳೆದ ಬಾರಿ 12 ಸಾವಿರ ಕೋಟಿ ರು.ಗಳನ್ನು ಸಾಲವಾಗಿ ಕೊಟ್ಟಿದ್ದರು. ಸಾಲವನ್ನು ಸೆಸ್ ಮೂಲಕ ತೀರಿಸುವ ಯೋಜನೆ ರೂಪಿಸಲಾಗಿತ್ತು. ಅದೇ ರೀತಿ ಮಾಡುವ ನಿರೀಕ್ಷೆ ಇದ್ದು, ರಾಜ್ಯದ ಪಾಲನ್ನು ತೆಗೆದುಕೊಳ್ಳಲು ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂದರು.


Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯದಲ್ಲಿ ಹೆಚ್ಚುತ್ತಿದೆ ಕೊರೋನಾ: ಕಡಿವಾಣ ಹಾಕಬೇಕಾದವರು ರಾಜಕೀಯದಲ್ಲಿ ಬ್ಯುಸಿ!