Select Your Language

Notifications

webdunia
webdunia
webdunia
webdunia

ರಾಜ್ಯದಲ್ಲಿ ಹೆಚ್ಚುತ್ತಿದೆ ಕೊರೋನಾ: ಕಡಿವಾಣ ಹಾಕಬೇಕಾದವರು ರಾಜಕೀಯದಲ್ಲಿ ಬ್ಯುಸಿ!

ರಾಜ್ಯದಲ್ಲಿ ಹೆಚ್ಚುತ್ತಿದೆ ಕೊರೋನಾ: ಕಡಿವಾಣ ಹಾಕಬೇಕಾದವರು ರಾಜಕೀಯದಲ್ಲಿ ಬ್ಯುಸಿ!
ಬೆಂಗಳೂರು , ಶುಕ್ರವಾರ, 30 ಜುಲೈ 2021 (08:53 IST)
ಬೆಂಗಳೂರು(ಜು.30): ಕೇರಳದಲ್ಲಿ ದೈನಂದಿನ ಕೋವಿಡ್ ಪ್ರಕರಣಗಳ ಸಂಖ್ಯೆ 20 ಸಾವಿರ ಮೀರಿ ವರದಿಯಾಗುತ್ತಿದ್ದಂತೆ ಆ ರಾಜ್ಯದೊಂದಿಗೆ ಗಡಿ ಹಂಚಿಕೊಂಡಿರುವ ಮತ್ತು ಜನಸಂಪರ್ಕ ಹೆಚ್ಚಿರುವ ರಾಜ್ಯದ ಜಿಲ್ಲೆಗಳಲ್ಲಿಯೂ ಕೋವಿಡ್ ಪ್ರಕರಣ ಏರಿಕೆ ಕಾಣುತ್ತಿದೆ. ರಾಜ್ಯದ ದೈನಂದಿನ ಸೋಂಕಿನ ಪ್ರಕರಣ ಮತ್ತೆ ಎರಡು ಸಾವಿರದ ಗಡಿ ದಾಟಿದ್ದು, ಗುರುವಾರ 2,052 ಪ್ರಕರಣ ವರದಿಯಾಗಿದೆ. 35 ಮಂದಿ ಅಸುನೀಗಿದ್ದಾರೆ.

* 19 ದಿನಗಳ ಬಳಿಕ ರಾಜ್ಯದಲ್ಲಿ 2000+ ಜನರಿಗೆ ಕೋವಿಡ್!
* ಕೇರಳ ಗಡಿಯ ದ.ಕ, ಉಡುಪಿ, ಕೊಡಗಲ್ಲಿ ಸೋಂಕು ಏರಿಕೆ
* ಈ ಬಗ್ಗೆ ಗಮನಹರಿಸಬೇಕಾದವರು ಸಂಪುಟ ಸರ್ಕಸ್ಸಲ್ಲಿ ಬ್ಯುಸಿ

ಕೇರಳದೊಂದಿಗೆ ಗಡಿ ಹಂಚಿಕೊಂಡಿರುವ ದಕ್ಷಿಣ ಕನ್ನಡದಲ್ಲಿ 200ರ ಆಸುಪಾಸಿನಲ್ಲಿ ವರದಿಯಾಗುತ್ತಿದ್ದ ಸೋಂಕಿತರ ಸಂಖ್ಯೆ 400ರ ಗಡಿ ಸಮೀಪಿಸಿದೆ. ಕೊಡಗು ಜಿಲ್ಲೆಯಲ್ಲಿ ಐವತ್ತರ ಆಜುಬಾಜಿನಲ್ಲಿದ್ದ ದೈನಂದಿನ ಪ್ರಕರಣ ನೂರರ ಸನಿಹಕ್ಕೆ ಏರಿದೆ. ಉಡುಪಿ ಜಿಲ್ಲೆಯಲ್ಲಿ ನೂರರ ಒಳಗೆ ಇದ್ದ ಪ್ರಕರಣಗಳ ಸಂಖ್ಯೆ ಇನ್ನೂರರ ಹತ್ತಿರಕ್ಕೆ ಜಿಗಿದಿದೆ. ಹಾಗೆಯೇ ಮೈಸೂರಿನಲ್ಲಿಯೂ ಪ್ರಕರಣ ಇಳಿಕೆ ಕಾಣುತ್ತಿಲ್ಲ.
ಕೇರಳದಿಂದ ಆಗಮಿಸುವವರಿಗೆ 72 ಗಂಟೆಯೊಳಗಿನ ಆರ್ಟಿಪಿಸಿಆರ್ ನೆಗೆಟಿವ್ ವರದಿ ಕಡ್ಡಾಯ ಅಥವಾ ಕನಿಷ್ಠ ಪಕ್ಷ ಒಂದು ಡೋಸ್ ಲಸಿಕೆ ಪಡೆದಿರಲೇಬೇಕು ಎಂಬ ನಿಯಮ ಮಾಡಿದ್ದರೂ ಗಡಿಯಲ್ಲಿ ಈ ಬಗ್ಗೆ ಸರಿಯಾಗಿ ಪರಿಶೀಲನೆ ನಡೆಯದಿರುವುದು ಮತ್ತು ಕೋವಿಡ್ ಮುನ್ನೆಚ್ಚರಿಕೆ ಕ್ರಮಗಳನ್ನು ಮರೆತು ಜನರ ಓಡಾಟ ಹೆಚ್ಚುತ್ತಿರುವುದು ಸೋಂಕಿನ ಪ್ರಮಾಣ ಏರಲು ಕಾರಣವಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 10-15 ದಿನಗಳ ಹಿಂದೆ ಶೇ.2.75 ಇದ್ದ ವಾರದ ಪಾಸಿಟಿವಿಟಿ ದರ ಇದೀಗ ಶೇ.4ನ್ನೂ ಮೀರಿದೆ. ಕೊಡಗಿನ ಪಾಸಿಟಿವಿಟಿ ದರ ಕೂಡ ಶೇ. 3.51ಕ್ಕೆ ಏರಿದೆ. ರಾಜ್ಯದ ಶೇ.1.16ರ ಪಾಸಿಟಿವಿಟಿ ದರಕ್ಕಿಂತ ಮೂರ್ನಾಲ್ಕು ಪಟ್ಟು ಪಾಸಿಟಿವಿಟಿ ದರವನ್ನು ಈ ಜಿಲ್ಲೆಗಳು ಹೊಂದಿದೆ. ಉಡುಪಿಯ ಪಾಸಿಟಿವಿಟಿ ದರ ಕೂಡ ಏರಿಕೆ ಆಗುತ್ತಿದ್ದು, ಉಳಿದ ಗಡಿ ಜಿಲ್ಲೆಗಳ ಪಾಸಿಟಿವಿಟಿ ದರ ಇಳಿಯುತ್ತಿಲ್ಲ.
ಜುಲೈ 10ರ ಬಳಿಕ ಗುರುವಾರ ಮತ್ತೆ ದೈನಂದಿನ ಸೋಂಕಿತರ ಸಂಖ್ಯೆ ಎರಡು ಸಾವಿರದ ಗಡಿ ದಾಟಿದೆ. ಹತ್ತು ಜಿಲ್ಲೆಗಳಲ್ಲಿ ಒಂದಂಕಿಯಲ್ಲಿ ಪ್ರಕರಣ ವರದಿಯಾಗಿದೆ. ಬೆಂಗಳೂರು ನಗರದಲ್ಲಿ 506, ದಕ್ಷಿಣ ಕನ್ನಡ 396, ಉಡುಪಿ 174, ಮೈಸೂರು 157 ಮತ್ತು ಹಾಸನದಲ್ಲಿ 136 ಪ್ರಕರಣ ದಾಖಲಾಗಿದೆ.
ಬೆಂಗಳೂರು ನಗರದಲ್ಲಿ 9, ದಕ್ಷಿಣ ಕನ್ನಡದಲ್ಲಿ 8 ಸಾವು ಸಂಭವಿಸಿದೆ. ಇದೇ ವೇಳೆ ಧಾರವಾಡದಲ್ಲಿ ಒಬ್ಬರು ಅಪಘಾತದಿಂದ ಮೃತರಾಗಿದ್ದು, ಕೋವಿಡ್ ಪರೀಕ್ಷೆ ನಡೆದಾಗ ಸೋಂಕು ಇದ್ದದ್ದು ದೃಢಪಟ್ಟಿದೆ.
1,332 ಮಂದಿ ಗುಣಮುಖರಾಗಿದ್ದು, ಸತತ ಎರಡನೇ ದಿನ ದೈನಂದಿನ ಸೋಂಕಿತರ ಪ್ರಮಾಣ ಹೆಚ್ಚಾಗಿದೆ. ಈ ವಿದ್ಯಮಾನದಿಂದಾಗಿ ಸಕ್ರಿಯ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದ್ದು 23,523ಕ್ಕೆ ಏರಿಕೆ ಕಂಡಿದೆ. 1.48 ಲಕ್ಷ ಕೋವಿಡ್ ಪರೀಕ್ಷೆ ನಡೆದಿದೆ.
ಇದೇ ವೇಳೆ 364 ಮಂದಿಯಲ್ಲಿ ಡೆಲ್ಟಾವೈರಾಣು ಪತ್ತೆಯಾಗಿದ್ದು, ರಾಜ್ಯದಲ್ಲಿ ಡೆಲ್ಟಾವೈರಾಣು ಸೋಂಕಿತರ ಸಂಖ್ಯೆ 1,089ಕ್ಕೆ ಏರಿಕೆ ಕಂಡಿದೆ. ಬೀಟಾ ವೈರಾಣು ಒಬ್ಬರಲ್ಲಿ ಇದ್ದದ್ದು ದೃಢಪಟ್ಟಿದ್ದು, ಒಟ್ಟು 7 ಮಂದಿಯಲ್ಲಿ ವೈರಾಣು ಪತ್ತೆಯಾಗಿದೆ.
1 ಲಕ್ಷ ಮಂದಿಗೆ ಲಸಿಕೆ:
ಗುರುವಾರ 1 ಲಕ್ಷ ಮಂದಿ ಕೋವಿಡ್ ಲಸಿಕೆ ಪಡೆದಿದ್ದಾರೆ. 59,156 ಮಂದಿ ಮೊದಲ ಡೋಸ್ ಮತ್ತು 41,098 ಮಂದಿ ಎರಡನೇ ಡೋಸ್ ಲಸಿಕೆ ಸ್ವೀಕರಿಸಿದ್ದಾರೆ.
ಗಡಿ ಜಿಲ್ಲೆಯಲ್ಲಿ ಪರೀಕ್ಷೆ ಹೆಚ್ಚಳ
ಕೇರಳದೊಂದಿಗೆ ಗಡಿ ಹಂಚಿಕೊಂಡಿರುವ ಜಿಲ್ಲೆಗಳಲ್ಲಿ ಹೆಚ್ಚು ಹೆಚ್ಚು ಪ್ರಕರಣಗಳು ವರದಿಯಾಗುತ್ತಿರುವುದನ್ನು ನಾವು ಗಮನಿಸಿದ್ದೇವೆ. ಈ ಹಿನ್ನೆಲೆಯಲ್ಲಿ ಅಲ್ಲಿ ಪರೀಕ್ಷೆಯ ಪ್ರಮಾಣವನ್ನು ಹೆಚ್ಚಿಸಿದ್ದೇವೆ. ಗಡಿಯಲ್ಲಿ ಸರ್ವೇಕ್ಷಣೆ ಮತ್ತು ಪರಿಶೀಲನೆ ಹೆಚ್ಚಿಸಿದ್ದೇವೆ. ಹಾಗೆಯೇ ಲಸಿಕೆ ವಿತರಣೆಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದೇವೆ.

 

Share this Story:

Follow Webdunia kannada

ಮುಂದಿನ ಸುದ್ದಿ

ಕೇರಳದಲ್ಲಿ ಇಡೀ ದೇಶದ ಅರ್ಧ ಕೋವಿಡ್ ಕೇಸ್!