Select Your Language

Notifications

webdunia
webdunia
webdunia
webdunia

ಕೇರಳದಲ್ಲಿ ಇಡೀ ದೇಶದ ಅರ್ಧ ಕೋವಿಡ್ ಕೇಸ್!

ಕೇರಳದಲ್ಲಿ ಇಡೀ ದೇಶದ ಅರ್ಧ ಕೋವಿಡ್ ಕೇಸ್!
ತಿರುವನಂತಪುರಂ , ಗುರುವಾರ, 29 ಜುಲೈ 2021 (08:12 IST)
ತಿರುವನಂತಪುರ(ಜು.29): ಕೋವಿಡ್ ಮೊದಲನೇ ಅಲೆ ವೇಳೆ, ಸೋಂಕು ನಿಯಂತ್ರಣ ಕ್ರಮಗಳಿಗಾಗಿ ಜಾಗತಿಕ ಪ್ರಶಂಸೆ ಪಡೆದುಕೊಂಡಿದ್ದ ಕೇರಳದಲ್ಲಿ ಇದೀಗ ಪರಿಸ್ಥಿತಿ ಕೈಮೀರಿರುವ ಆತಂಕ ಎದುರಾಗಿದೆ. ರಾಜ್ಯದಲ್ಲಿ ದಿನೇ ದಿನೇ ಸೋಂಕಿನ ಪ್ರಮಾಣ ಆತಂಕಕಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತಿದ್ದು, ಸತತ 2 ದಿನದಿಂದ 22 ಸಾವಿರಕ್ಕೂ ಹೆಚ್ಚು ಪ್ರಕರಣ ದಾಖಲಾಗಿವೆ.

* 3ನೇ ಅಲೆಗೆ ಮುನ್ನುಡಿ ಬರೆಯುತ್ತಿದೆಯೇ ದೇವರ ನಾಡು?
* ಕೇರಳದಲ್ಲಿ ಇಡೀ ದೇಶದ ಅರ್ಧ ಕೋವಿಡ್ ಕೇಸ್
* ಸತತ 2 ದಿನದಿಂದ ರಾಜ್ಯದಲ್ಲಿ 22,000 ಪ್ರಕರಣ
* ಕೇಸು ಹೆಚ್ಚಿರುವ 10 ಜಿಲ್ಲೆಗಳಲ್ಲಿ ಕಠಿಣ ಕ್ರಮಕ್ಕೆ ಕೇಂದ್ರ ಸೂಚನೆ
* ತಜ್ಞರ ತಂಡ ರವಾನೆಗೆ ಮೋದಿ ನಿರ್ಧಾರ

ಪುಟ್ಟರಾಜ್ಯವು ಇಡೀ ದೇಶದ ಒಟ್ಟು ಕೇಸಿನಲ್ಲಿ ಶೇ.50ರಷ್ಟುಪಾಲು ಹೊಂದಿರುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ದೇಶದಲ್ಲಿ ಕೋವಿಡ್ನ ಮೊದಲ ಅಲೆ ಹಾಗೂ 2ನೇ ಅಲೆ ಆರಂಭವಾಗಿದ್ದು ಇದೇ ರಾಜ್ಯದಿಂದ. ಈಗಿನ ಪರಿಸ್ಥಿತಿ ಗಮನಿಸಿದರೆ ಕೇರಳವು 3ನೇ ಅಲೆಗೆ ಮುನ್ನುಡಿ ಬರೆಯುತ್ತಿದೆಯೇ ಎಂಬ ಭೀತಿ ಸೃಷ್ಟಿಯಾಗಿದೆ.
ದೇಶ ಇನ್ನೇನು 2ನೇ ಅಲೆಯಿಂದ ಮುಕ್ತಿ ಕಾಣುತ್ತಿದೆ ಎನ್ನುವಾಗಲೇ ಸಿಪಿಎಂ ನೇತೃತ್ವದ ಎಲ್ಡಿಎಫ್ ಸರ್ಕಾರ, ಕೋವಿಡ್ ವಿಷಯದಲ್ಲಿ ತೋರಿದೆ ಎನ್ನಲಾದ ಅಜಾಗರೂತಕೆ ಸಹಜವಾಗಿಯೇ ಕೇಂದ್ರ ಸರ್ಕಾರವನ್ನು ಆತಂಕದ ಮಡುವಿಗೆ ತಳ್ಳಿದೆ. ಹೀಗಾಗಿಯೇ ಪಾಸಿಟಿವಿಟಿ ದರ ಶೇ.10 ದಾಟಿರುವ 10 ಜಿಲ್ಲೆಗಳಲ್ಲಿ ಸೋಂಕು ನಿಯಂತ್ರಣಕ್ಕೆ ಕಠಿಣ ಕ್ರಮ ಕೈಗೊಳ್ಳುವಂತೆ ಅದು ರಾಜ್ಯ ಸರ್ಕಾರಕ್ಕೆ ಸೂಚಿಸಿದೆ. ಜೊತೆಗೆ ಶೀಘ್ರವೇ ತಜ್ಞರ ತಂಡವೊಂದನ್ನು ರಾಜ್ಯಕ್ಕೆ ರವಾನಿಸಲೂ ನಿರ್ಧರಿಸಿದೆ.
ಕೋವಿಡ್ ದಿಢೀರ್ ಸ್ಫೋಟ:
ಕೇರಳದಲ್ಲಿ ಮಂಗಳವಾರ 22000ಕ್ಕೂ ಹೆಚ್ಚು ಸೋಂಕಿತರು ಪತ್ತೆಯಾಗಿದ್ದು, ಪಾಸಿಟಿವಿಟಿ ದರ ಶೇ.12 ಮೀರಿದೆ. 150ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಇದು ಮಂಗಳವಾರ ಇಡೀ ದೇಶದಲ್ಲಿ ದಾಖಲಾದ ಒಟ್ಟು ಕೇಸಿನಲ್ಲಿ ಶೇ.45ರಷ್ಟುಪಾಲಾಗಿದೆ. ಬುಧವಾರವೂ 22,036 ಕೇಸು ದಾಖಲಾಗಿದ್ದು, 131 ಜನ ಸಾವನ್ನಪ್ಪಿದ್ದಾರೆ. ಪಾಸಿಟಿವಿಟಿ ಶೇ.11.2ರಷ್ಟುದಾಖಲಾಗಿದೆ.
ಕೇಸು ಏರಿಕೆಗೆ ನಿರ್ಲಕ್ಷ್ಯ ಕಾರಣ:
ಪರಿಸ್ಥಿತಿ ಇನ್ನೂ ನಿಯಂತ್ರಣಕ್ಕೆ ಬಾರದೇ ಇದ್ದರೂ ರಾಜ್ಯ ಶಾಲೆ, ಕಾಲೇಜುಗಳ ಹಲವು ಪರೀಕ್ಷೆಗಳನ್ನು ಆಫ್ಲೈನ್ ಮೂಲಕ ನಡೆಸುತ್ತಿದೆ. ಇಂಥ ಪರೀಕ್ಷೆಗಳ ಬಳಿಕ ಹಲವು ವಿದ್ಯಾರ್ಥಿಗಳು, ಸಿಬ್ಬಂದಿಗಳಲ್ಲಿ ಸೋಂಕು ಕಾಣಿಸಿಕೊಂಡಿದೆ.
ಇನ್ನು, ಬಕ್ರೀದ್ ಹಬ್ಬದ ಸಮಯದಲ್ಲಿ ರಾಜ್ಯ ಸರ್ಕಾರವು ಸೋಂಕು ಹೆಚ್ಚಿರುವ ಪ್ರದೇಶಗಳಲ್ಲೂ ಎಲ್ಲಾ ರೀತಿಯ ಚಟುವಟಿಕೆಗೆ ಅನುಮತಿ ನೀಡಿತು ಎಂದು ಆರೋಪಿಸಲಾಗಿದೆ. ಸ್ವತಃ ಸುಪ್ರೀಂಕೋರ್ಟ್ ಛೀಮಾರಿ ಹಾಕಿದರೂ ಎಚ್ಚೆತ್ತುಕೊಳ್ಳಲಿಲ್ಲ ಎಂಬ ಟೀಕೆ ಕೇಳಿಬಂದಿದೆ.
ಆದರೆ ರಾಜ್ಯ ಸರ್ಕಾರ ಮಾತ್ರ, ಕೇರಳದಲ್ಲಿ ಜನಸಾಂದ್ರತೆ ಪ್ರಮಾಣ ದೇಶದ ಸರಾಸರಿಗಿಂತ ಹೆಚ್ಚಿದೆ. ಜೊತೆಗೆ ಮಧುಮೇಹಿಗಳು ಮತ್ತು ಹಿರಿಯ ವಯಸ್ಕರ ಸಂಖ್ಯೆ ಹೆಚ್ಚಿರುವುದು ಸೋಂಕಿನ ಪ್ರಮಾಣ ಹೆಚ್ಚಾಗಲು ಕಾರಣ. ಜೊತೆಗೆ ಪರೀಕ್ಷೆ ಪ್ರಮಾಣ ಹೆಚ್ಚಿಸಿರುವ ಕಾರಣ ಸಹಜವಾಗಿಯೇ ಹೆಚ್ಚು ಸೋಂಕಿತರು ಕಂಡುಬರುತ್ತಿದ್ದಾರೆ. ಮೊದಲು ಮತ್ತು ಎರಡನೇ ಅಲೆಯ ವೇಳೆಗಿಂತ ಹೆಚ್ಚಿನ ಸೋಂಕಿತರು ಕಂಡುಬಂದರೂ, ಆಸ್ಪತ್ರೆಗೆ ದಾಖಲಾಗುವ ಪ್ರಮಾಣ, ಸಾವಿನ ಪ್ರಮಾಣ, ಆಕ್ಸಿಜನ್ ಬೆಡ್, ವೆಂಟಿಲೇಟರ್ ಬೆಡ್ ಬಳಕೆ ಪ್ರಮಾಣ ಕಡಿಮೆಯೇ ಇದೆ ಎಂದು ಹೇಳಿಕೊಳ್ಳುತ್ತಿದೆ.
ಕೇಂದ್ರ ತಂಡ ರವಾನೆಗೆ ನಿರ್ಧಾರ:
ರಾಜ್ಯದಲ್ಲಿನ ಬೆಳವಣಿಗೆಯನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಆರೋಗ್ಯ ಸಚಿವಾಲಯ ಶೀಘ್ರವೇ ಕೇರಳದ ಮುಖ್ಯ ಕಾರ್ಯದರ್ಶಿಗಳ ಜೊತೆಗೆ ಸಭೆಗೆ ನಿರ್ಧರಿಸಿದೆ. ಜೊತೆಗೆ ಸಾಂಕ್ರಾಮಿಕ ರೋಗಗಳ ತಜ್ಞರ ತಂಡವೊಂದನ್ನು ಕಳುಹಿಸಿಕೊಡಲು ನಿರ್ಧರಿಸಿದೆ. ಅಲ್ಲದೆ ಕೋವಿಡ್ ಮಾರ್ಗಸೂಚಿಗಳನ್ನು ರಾಜ್ಯ ಸರ್ಕಾರ ಇನ್ನಷ್ಟುಕಟ್ಟುನಿಟ್ಟಾಗಿ ಪಾಲಿಸಬೇಕು. ಶೇ.10ಕ್ಕಿಂತ ಹೆಚ್ಚು ಪಾಸಿಟಿವಿಟಿ ದರ ಇರುವ 10 ಜಿಲ್ಲೆಗಳಲ್ಲಿ ಕಠಿಣ ಕ್ರಮ ಜಾರಿಗೊಳಿಸಬೇಕು ಎಂದು ಕೇರಳಕ್ಕೆ ಸೂಚಿಸಿದೆ.
ಆತಂಕಕಾರಿ ಪ್ರಮಾಣದಲ್ಲಿ ಏರಿಕೆ:
ಮೊದಲನೆ ಅಲೆ ಮುಕ್ತಾಯ ಎಂದು ಹೇಳಬಹುದಾದ 2021 ಮಾ.15ರಂದು ಕೇರಳದಲ್ಲಿ ಕೇವಲ 1054 ಕೇಸು ದಾಖಲಾಗಿತ್ತು. ನಂತರ 2ನೇ ಅಲೆ ಆರಂಭವಾಗಿ ಏ.16ರಂದು ಮೊದಲ ಬಾರಿಗೆ ಕೇಸುಗಳ ಪ್ರಮಾಣ 10 ಸಾವಿರದ ಗಡಿ ದಾಟಿತ್ತು. ಅಲ್ಲಿಂದ ಬಳಿಕ ಈವರೆಗೆ ಕೇವಲ 7 ದಿನ ಮಾತ್ರವೇ 10 ಸಾವಿರಕ್ಕಿಂತ ಕಡಿಮೆ ಕೇಸು ರಾಜ್ಯದಲ್ಲಿ ದಾಖಲಾಗಿದೆ.
ಮೇ 12ರಂದು ಗರಿಷ್ಠ 42000ಕ್ಕೂ ಹೆಚ್ಚು ಕೇಸು ದಾಖಲಾಗಿ ನಂತರ ಜೂನ್ನಲ್ಲಿ ಹಂತಹಂತವಾಗಿ ಇಳಿಕೆಯಾಗುತ್ತಾ ಬಂದಿತ್ತು. ಆದರೆ ಜೂನ್ 15ರ ಬಳಿಕ ಮತ್ತೆ ಕೇಸುಗಳ ಪ್ರಮಾಣ ಏರಿಕೆಯ ಹಾದಿಯಲ್ಲೇ ಸಾಗಿದ್ದು, ಬುಧವಾರ 22000ದ ಗಡಿ ದಾಟಿದೆ. ಇದು ದೇಶದಲ್ಲಿ ದಾಖಲಾದ ಒಟ್ಟು ಕೇಸಿನಲ್ಲಿ ಶೇ.50ರಷ್ಟುಪಾಲು ಎಂಬುದೇ ಆತಂಕಕಾರಿ ವಿಷಯ.
ಬುಧವಾರದ ಅಂಕಿ ಸಂಖ್ಯೆಗಳ ಅನ್ವಯ ರಾಜ್ಯದಲ್ಲಿ 1.49 ಲಕ್ಷ ಸಕ್ರಿಯ ಸೋಂಕಿತರಿದ್ದಾರೆ. ಇದು ದೇಶದ ಒಟ್ಟು ಸಕ್ರಿಯ ಸೋಂಕಿತರ ಪ್ರಮಾಣವಾದ 4 ಲಕ್ಷಕ್ಕೆ ಹೋಲಿಸಿದರೆ ಶೇ.30ರಷ್ಟುಎಂಬ ವಿಷಯ ಕೂಡಾ ಕಳವಳಕಾರಿಯಾಗಿದೆ.
ಕೇಸು ಏರಿಕೆಗೆ ಕಾರಣವೇನು?
1. ಶಾಲೆ, ಕಾಲೇಜಲ್ಲಿ ಆಫ್ಲೈನ್ ಪರೀಕ್ಷೆ, ಬಕ್ರೀದ್ ಆಚರಣೆಗೆ ಅವಕಾಶ
2. ಕೇರಳದಲ್ಲಿ ಜನಸಾಂದ್ರತೆ ಪ್ರಮಾಣ ದೇಶದ ಸರಾಸರಿಗಿಂತ ದುಪ್ಪಟ್ಟು
3. ರಾಜ್ಯದಲ್ಲಿ ವಯೋವೃದ್ಧರ ಸಂಖ್ಯೆ, ಮಧುಮೇಹಿಗಳ ಸಂಖ್ಯೆ ಹೆಚ್ಚು


Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯದಲ್ಲಿ 1606 ಕೊರೊನಾ ಸೋಂಕು, 31 ಸಾವು