Select Your Language

Notifications

webdunia
webdunia
webdunia
webdunia

ಗೌರಿ ಲಂಕೇಶ್ ಹತ್ಯೆ ಆರೋಪಿಯ ಭೇಟಿಯಾದ ಪ್ರತಾಪ್ ಸಿಂಹಗೆ ಕಾಂಗ್ರೆಸ್‌ನಿಂದ ಕ್ಲಾಸ್

Prathap Simha

Sampriya

ಬೆಂಗಳೂರು , ಮಂಗಳವಾರ, 13 ಆಗಸ್ಟ್ 2024 (14:50 IST)
Photo Courtesy X
ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಮಾಡಿದ ಪ್ರಮುಖ ಆರೋಪಿಯನ್ನು ಭೇಟಿಯಾಗಿ ಮಾತುಕತೆ ನಡೆಸಿರುವುದಾಗಿ ಬಿಜೆಪಿ ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಸದ್ಯ ಈ ವಿಚಾರ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದು, ಕಾಂಗ್ರೆಸ್ ನಾಯಕರು ಇದಕ್ಕೆ ಆಕ್ರೋಶ ಹೊರಹಾಕಿ ಆರೋಪಿಯ ಕೃತ್ಯವನ್ನು ಖಂಡಿಸುವ ಬದಲು, ಆತನ ಹೆಗಲ ಮೇಲೆ ಕೈ ಹಾಕಿ ಫೋಟೋ ತೆಗೆಸಿಕೊಂಡಿರುವುದು ಸಮಾಜಕ್ಕೆ ಏನ್ ಸಂದೇಶ ಸಾರುತ್ತಿದ್ದಾರೆ ಎಂದು ಆಕ್ರೊಶ ಹೊರಹಾಕಿದ್ದಾರೆ.  

ಪ್ರತಾಪ್ ಸಿಂಹ ಅವರು ಆರೋಪಿಯ ಫೋಟೋವನ್ನು ಸಾಮಾಜಿಕ  ಜಾಲತಾಣದಲ್ಲಿ ಶೇರ್ ಮಾಡಿ, 'ಗೌರಿ ಲಂಕೇಶ್ ಕೊಲೆ ಪ್ರಕರಣದಲ್ಲಿ ಮೊದಲಿಗೆ ಆರೋಪಿ ನಂ-1 ಆಗಿ, ನಂತರ A-17 ಆಗಿ, ಆರೂವರೆ ವರ್ಷ ಜೈಲಿನಲ್ಲಿದ್ದು, ಇತ್ತೀಚೆಗೆ ಜಾಮೀನು ಮೇಲೆ ಹೊರಬಂದಿರುವ ಸ್ನೇಹಿತ ಮದ್ದೂರು ನವೀನ್‌ರನ್ನು ಭೇಟಿಯಾಗಿ ಅರೋಗ್ಯ ವಿಚಾರಿಸಿದೆ' ಎಂದು ಬರೆದುಕೊಂಡಿದ್ದಾರೆ.

ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿ ನಿಮ್ಮ ಸ್ನೇಹಿತನೇ ಎಂದು ಪ್ರತಾಪ ಸಿಂಹ ವಿರುದ್ಧ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದಕ್ಕೆ ಸಚಿವ ದಿನೇಶ್ ಗುಂಡೂರಾವ್ ಎಕ್ಸ್‌ನಲ್ಲಿ ಪೋಸ್ಟ್ ಹಂಚಿ ಆಕ್ರೋಶ ಹೊರಹಾಕಿದ್ದಾರೆ.  'ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಮದ್ದೂರಿನ ನವೀನ್ ಕುಮಾರ್ ತನ್ನ ಗೆಳೆಯ ಎಂದು ಮಾಜಿ ಸಂಸದ ಪ್ರತಾಪ ಸಿಂಹ ಹೇಳಿಕೊಂಡಿದ್ದಾರೆ. ಇದು‌ ಗೋಡ್ಸೆ ಆರಾಧಕರ (ಬಿಜೆಪಿಯವರ) ಅಸಲಿ ಮುಖವಾಗಿದೆ. ಸಮಾಜದ ಶಾಂತಿ ಕದಡುವ, ಕೊಲೆ, ಸುಲಿಗೆಯಂತಹ ವಿದ್ವಂಸಕ ಕೃತ್ಯ ನಡೆಸುವವರೆಲ್ಲಾ ಬಿಜೆಪಿಯ ಗರ್ಭಗುಡಿಯಲ್ಲೇ ಇರುತ್ತಾರೆ‌ ಎಂಬುವುದಕ್ಕೆ ಇದೊಂದು ನಿದರ್ಶನ' ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದ್ದಾರೆ.

'ದಿಟ್ಟ ಪತ್ರಕರ್ತೆಯಾಗಿದ್ದ ಗೌರಿ ಲಂಕೇಶ್‌ ಅವರನ್ನು ಕೊಲೆಗೈದ ಆರೋಪಿಯ ಕೃತ್ಯವನ್ನು ಬಿಜೆಪಿಯ ಮಾಜಿ ಸಂಸದ ಪ್ರತಾಪ ಸಿಂಹ ಖಂಡಿಸುವ ಬದಲು, ಆ ಆರೋಪಿಯ ಹೆಗಲ ಮೇಲೆ ಕೈ ಹಾಕಿ ಫೋಟೊ ತೆಗೆಸಿಕೊಂಡರೆ ಸಮಾಜಕ್ಕೆ ಯಾವ ಸಂದೇಶ ಹೋಗುತ್ತದೆ' ಎಂದು ಗುಂಡೂರಾವ್ ಪ್ರಶ್ನಿಸಿದ್ದಾರೆ.

'ಒಬ್ಬ ದಿಟ್ಟ ಲಿಂಗಾಯತ ಪ್ರತಿಭಾವಂತೆ, ಸಾಮಾಜಿಕ ಕಾರ್ಯಕರ್ತೆ, ಜನಪರ ಪತ್ರಕರ್ತೆಯ ಕೊಲೆ ಪ್ರಕರಣದ ಆರೋಪಿಯನ್ನು ಮೆರೆಸೋದು ಯಾರನ್ನು ಮೆಚ್ಚಿಸೋಕೆ ಪ್ರತಾಪ್ ಸರ್..? ಆರ್‌ಎಸ್‌ಎಸ್‌ ನಾಯಕರನ್ನು ಮೆಚ್ಚಿಸಬೇಕು ಅಂದರೆ ಬಸವಣ್ಣನ ಲಿಂಗಾಯತವನ್ನು ದ್ವೇಷಿಸಲೇಬೇಕು ಅಲ್ವಾ..? ನಿಮ್ಮ ಈ ನಡೆ ಇತ್ತೀಚಿನ ನಿಮ್ಮ ಲಿಂಗಾಯತ ವಿರೋಧಿ ಹೇಳಿಕೆಗಳಿಗೆ ತಾಳೆಯಾಗುವಂತಿದೆ' ಎಂದು ನೆಟ್ಟಿಗರೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಚನ್ನಪಟ್ಟಣ ಕ್ಷೇತ್ರದ ಅಭ್ಯರ್ಥಿ ಯಾರೆಂದು ದೆಹಲಿಯಲ್ಲೇ ತೀರ್ಮಾನವಾಗಲಿದೆ: ವಿಜಯೇಂದ್ರ