Select Your Language

Notifications

webdunia
webdunia
webdunia
webdunia

ಚನ್ನಪಟ್ಟಣ ಕ್ಷೇತ್ರದ ಅಭ್ಯರ್ಥಿ ಯಾರೆಂದು ದೆಹಲಿಯಲ್ಲೇ ತೀರ್ಮಾನವಾಗಲಿದೆ: ವಿಜಯೇಂದ್ರ

BY Vijayendra

Krishnaveni K

ಬೆಂಗಳೂರು , ಮಂಗಳವಾರ, 13 ಆಗಸ್ಟ್ 2024 (14:04 IST)
ಬೆಂಗಳೂರು: ಚನ್ನಪಟ್ಟಣ ಕ್ಷೇತ್ರದ ಅಭ್ಯರ್ಥಿ ಕುರಿತು ಎರಡೂ ಪಕ್ಷಗಳ ವರಿಷ್ಠರು ದೆಹಲಿ ಮಟ್ಟದಲ್ಲಿ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳುತ್ತಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ತಿಳಿಸಿದರು.

ನಗರದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ರಾಜ್ಯಾಧ್ಯಕ್ಷನಾಗಿ ಪ್ರತಿಯೊಬ್ಬರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವುದು ನನ್ನ ಆದ್ಯ ಕರ್ತವ್ಯ. ಇದನ್ನು ಸತತವಾಗಿ ಮಾಡಿಕೊಂಡು ಬಂದಿದ್ದೇನೆ. ಪಕ್ಷಕ್ಕೆ ಶಕ್ತಿ ಸಿಗುವುದಾದರೆ ಕೆಲವರು ಮಾಡಬಯಸಿದ ಪಾದಯಾತ್ರೆಗೆ ವರಿಷ್ಠರು ಸಮ್ಮತಿ ಕೊಡುತ್ತಾರೆ. ನಮ್ಮದು ಈ ವಿಚಾರಕ್ಕೆ ಯಾವುದೇ ರೀತಿಯ ತಕರಾರಿಲ್ಲ ಎಂದು ಪ್ರಶ್ನೆಗೆ ಉತ್ತರ ಕೊಟ್ಟರು.

ಕೇಂದ್ರದ ವರಿಷ್ಠರ ಭೇಟಿಯೂ ಪಕ್ಷದ ಸಂಘಟನೆಗೆ ಲಾಭ ತರಬೇಕು ಎಂಬ ಸದುದ್ದೇಶವನ್ನು ಹೊಂದಿರಲಿ ಎಂದು ಆಶಿಸಿದರು. ಚನ್ನಪಟ್ಟಣದಲ್ಲಿ ತಾವೂ ಸ್ಪರ್ಧಾಕಾಂಕ್ಷಿ ಎಂದು ಯೋಗೇಶ್ವರ್ ಅವರು ಹೇಳಿದ್ದು, ಅದು ತಪ್ಪೆನ್ನುವುದಿಲ್ಲ. ಚನ್ನಪಟ್ಟಣ ಕ್ಷೇತ್ರದಲ್ಲಿ ಅವರಿಗೆ ಅವರದೇ ಆದ ಹಿಡಿತ, ಬೆಂಬಲ ಇದೆ. ಆದರೆ, ಬಿಜೆಪಿ- ಜೆಡಿಎಸ್ ಪಕ್ಷಗಳು ಒಟ್ಟಾಗಿ ಹೋಗುವ ಸಂದರ್ಭ ಇದು. ಅಲ್ಲಿ ಕುಮಾರಸ್ವಾಮಿ ಅವರು ಆಯ್ಕೆ ಆಗಿದ್ದರು. ಎರಡೂ ಪಕ್ಷಗಳ ವರಿಷ್ಠರು ದೆಹಲಿ ಮಟ್ಟದಲ್ಲಿ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳುತ್ತಾರೆ ಎಂದು ವಿವರಿಸಿದರು.

ಬಿಜೆಪಿ- ಜೆಡಿಎಸ್ ಪಕ್ಷಗಳು ಲೋಕಸಭಾ ಚುನಾವಣೆಯನ್ನು ಒಟ್ಟಾಗಿ ಎದುರಿಸಿದ್ದೇವೆ. ವಿಧಾನಸಭಾ ಉಪ ಚುನಾವಣೆ ಅಭ್ಯರ್ಥಿ ಆಯ್ಕೆ ಸಂಬಂಧ ಸಮಿತಿ ರಚಿಸಿ ಅಭಿಪ್ರಾಯ ಪಡೆದಿದ್ದೇವೆ. ಅಶ್ವತ್ಥನಾರಾಯಣ್ ಅವರ ಸಮಿತಿಯ ವರದಿ ಬಗ್ಗೆ ಮಾಹಿತಿ ಇಲ್ಲ. ನಾನು ಕೂಡ ಅಶ್ವತ್ಥನಾರಾಯಣ್ ಜೊತೆ ಚರ್ಚೆ ಮಾಡುವೆ. ವರಿಷ್ಠರ ಗಮನಕ್ಕೆ ತರುವೆ ಎಂದು ಪ್ರಶ್ನೆಗೆ ಉತ್ತರ ಕೊಟ್ಟರು.

ಜಲ ಸಂಪನ್ಮೂಲ ಸಚಿವರು ಸಂಪನ್ಮೂಲದ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡ ಹಾಗಿದೆ. ಜಲ, ಜನ, ರೈತರ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ ಎಂದು ಅವರು ಟೀಕಿಸಿದರು. ಪ್ರಾಣ ಕಳಕೊಂಡ ಎಸ್‌ಐ ಪರಶುರಾಮ್ ಅವರ ಕುಟುಂಬಕ್ಕೆ ಪರಿಹಾರ ಕೊಟ್ಟಿಲ್ಲ. ರಾಜ್ಯ ಸರಕಾರದ ಆದ್ಯತೆ ಏನೆಂದು ಜನರು ಪ್ರಶ್ನೆ ಮಾಡುತ್ತಿದ್ದಾರೆ ಎಂದು ತಿಳಿಸಿದರು.

ರೈತರಿಗೆ ತೀವ್ರ ಸಂಕಷ್ಟ: ಪರಿಹಾರ ಕೊಡಲು ಆಗ್ರಹ
ಅಣೆಕಟ್ಟೆಗಳು ಭರ್ತಿಯಾದ ಬಗ್ಗೆ ರೈತರು ಸಂತಸದಿಂದಿದ್ದರು. ತುಂಗಭದ್ರಾ ಡ್ಯಾಮಿಗೆ ಮುಖ್ಯ ಎಂಜಿನಿಯರ್ ನೇಮಿಸಿಲ್ಲ. ತುಂಗಭದ್ರಾ ಜಲಾಶಯದ ಗೇಟ್ ಮುರಿದ ಘಟನೆಗೆ ರಾಜ್ಯ ಸರಕಾರದ ನಿರ್ಲಕ್ಷö್ಯವೇ ಕಾರಣ ಎಂದು ಅವರು ಆಕ್ಷೇಪಿಸಿದರು. ಈ ದುರ್ಘಟನೆಯಿಂದ ಪ್ರತಿದಿನ 98 ಸಾವಿರ ಕ್ಯುಸೆಕ್ ನೀರು ಹೊರಕ್ಕೆ ಹರಿಯುತ್ತಿದೆ. ಅಪಾರ ಪ್ರಮಾಣದ ನೀರು ಹೊರಕ್ಕೆ ಬಿಡಬೇಕಿದೆ. ಇದರಿಂದ ರೈತರು ಅತ್ಯಂತ ಸಂಕಷ್ಟಕ್ಕೆ ಸಿಲುಕುತ್ತಾರೆ ಎಂದು ಆತಂಕದಿಂದ ನುಡಿದರು.

ರೈತರಿಗೆ ಪರಿಹಾರ ಕೊಡುವಂತೆ ಮುಖ್ಯಮಂತ್ರಿಗಳನ್ನು ಆಗ್ರಹಿಸಿದ್ದೇನೆ. ಪ್ರತಿ ಹೆಕ್ಟೇರ್‌ಗೆ ಕನಿಷ್ಠ 50 ಸಾವಿರ ಕೊಡುವಂತೆ ಕೋರಿದರು. ಭತ್ತ ಬೆಳೆಯುವ ಪ್ರದೇಶ ಇದಾಗಿದೆ. ಇಲ್ಲಿ ಒಂದು ಬೆಳೆ ತೆಗೆಯಲೂ ಕಷ್ಟ ಆಗಲಿದೆ ಎಂದು ಬೇಸರ ವ್ಯಕ್ತಪಡಿಸಿದರು.
 

Share this Story:

Follow Webdunia kannada

ಮುಂದಿನ ಸುದ್ದಿ

ಹರ್ ಘರ್ ತಿರಂಗ ಕಾರ್ಯಕ್ರಮಕ್ಕೆ ಚಾಲನೆ: ವಿಜಯೇಂದ್ರ