Select Your Language

Notifications

webdunia
webdunia
webdunia
webdunia

ಕಾಂಗ್ರೆಸ್ಸಿಗೆ ನಮ್ಮ ಹೋರಾಟದ ಬಿಸಿ ಮುಟ್ಟಿದೆ: ಬಿ.ವೈ.ವಿಜಯೇಂದ್ರ

BJP Padayatra

Krishnaveni K

ಬೆಂಗಳೂರು , ಸೋಮವಾರ, 5 ಆಗಸ್ಟ್ 2024 (15:04 IST)
ಬೆಂಗಳೂರು: ನಮ್ಮ ಹೋರಾಟದ ಬಿಸಿ ಕಾಂಗ್ರೆಸ್ಸಿಗೆ, ರಾಜ್ಯ ಸರಕಾರಕ್ಕೆ ಮುಟ್ಟಿದೆ. ಇದರ ಪರಿಣಾಮವಾಗಿ ಕಾಂಗ್ರೆಸ್ ಸರಕಾರವು ಒಂಟಿಗಾಲಿನಲ್ಲಿ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ತಿಳಿಸಿದರು.

ಕೆಂಗಲ್‌ನಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಮಾಧ್ಯಮದವರ ಪ್ರಶ್ನೆಗೆ ಉತ್ತರ ಕೊಟ್ಟರು. ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಕಳುಹಿಸಿದ ವೇಣುಗೋಪಾಲ್, ಸುರ್ಜೇವಾಲಾ ಅವರು ಬಂದು ಶಾಸಕರಿಗೆ ಪಾಠ ಹೇಳಿಕೊಟ್ಟಿದ್ದಾರೆ. ಮುಖ್ಯಮಂತ್ರಿಗಳನ್ನು ರಕ್ಷಿಸಲು ಸೂಚಿಸಿದ್ದಾರೆ. ಹಗರಣದಲ್ಲಿ ಮುಳುಗಿದ ಸರಕಾರ ಮತ್ತು ಮುಖ್ಯಮಂತ್ರಿಗಳನ್ನು ಬಲವಾಗಿ ಸಮರ್ಥನೆ ಮಾಡಲು ದೆಹಲಿ ಗಾಂಧಿ ಕುಟುಂಬದ ಸಂದೇಶವನ್ನು ನೀಡಿದ್ದಾರೆ ಎಂದು ಟೀಕಿಸಿದರು.

ಕೆಂಗಲ್ ಶ್ರೀ ಹನುಮಂತ ಸ್ವಾಮಿಗೆ ಪೂಜೆ ಸಲ್ಲಿಸಿ ನಮ್ಮ 3ನೇ ದಿನದ ಪಾದಯಾತ್ರೆ ಆರಂಭಿಸುತ್ತಿದ್ದೇವೆ. ರಾಜ್ಯ ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್, ವಿಧಾನಪರಿಷತ್ತಿನ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ನಮ್ಮೆಲ್ಲ ಶಾಸಕ ಮಿತ್ರರು, ಬಿಜೆಪಿ- ಜೆಡಿಎಸ್ ಪಕ್ಷಗಳ ಜನಪ್ರತಿನಿಧಿಗಳು, ಮುಖಂಡರು, ಕಾರ್ಯಕರ್ತರು ಅತ್ಯಂತ ಉತ್ಸಾಹದಿಂದ ಭಾಗವಹಿಸುತ್ತಿದ್ದಾರೆ. ದಿನೇದಿನೇ ನಮ್ಮ ಪಾದಯಾತ್ರೆ ಹೆಚ್ಚು ವಿಶ್ವಾಸ, ಉತ್ಸಾಹದಿಂದ ಹೆಜ್ಜೆಗೆ ಹೆಜ್ಜೆ ಇಡುತ್ತಿದ್ದಾರೆ. ಇದರ ಪರಿಣಾಮವಾಗಿ ಆಡಳಿತ ಪಕ್ಷಕ್ಕೆ ನಿದ್ರೆ ಬರುತ್ತಿಲ್ಲ ಎಂದು ವಿಶ್ಲೇಷಿಸಿದರು.

ಇದು ನೆಪಮಾತ್ರಕ್ಕೆ ಮಾಡುವ ಹೋರಾಟವಲ್ಲ; ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ 187 ಕೋಟಿ ರೂಪಾಯಿ ಅವ್ಯವಹಾರ, ಮೈಸೂರು ಮುಡಾ ಹಗರಣದಿಂದ ನಾಡಿನ ಪರಿಶಿಷ್ಟ ಸಮುದಾಯಗಳಿಗೆ ಅನ್ಯಾಯವಾಗಿದೆ. ಅವರ ಹಣ ದೋಚಿದ್ದಾರೆ. ಇಂಥ ಭ್ರಷ್ಟ ಕಾಂಗ್ರೆಸ್ ಸರಕಾರಕ್ಕೆ ಬುದ್ಧಿ ಕಲಿಸಲೇಬೇಕಾಗಿದೆ ಎಂದು ನುಡಿದರು.

ಅಭಿವೃದ್ಧಿ ಶೂನ್ಯ, ಲೂಟಿ ಹೊಡೆಯುವ ಸರಕಾರ
ವಯನಾಡಿನಲ್ಲಿ ನೂರಾರು ಜನರು ಪ್ರಾಣ ಕಳಕೊಂಡಿದ್ದಾರೆ. ಈ ಸಂಬಂಧ ಮುಖ್ಯಮಂತ್ರಿಗಳು 100 ಮನೆಗಳನ್ನು ಘೋಷಿಸಿದ್ದಾರೆ. ಇದು ತಪ್ಪೇನಲ್ಲ, ಒಳ್ಳೆಯ ಕ್ರಮವೇ ಆಗಿದೆ. ಆದರೆ, ಮುಖ್ಯಮಂತ್ರಿಗಳಿಗೆ ಶಕ್ತಿ ನೀಡಿದ ಮೈಸೂರು ಜಿಲ್ಲೆಯಲ್ಲಿ ಲಕ್ಷಾಂತರ ಬಡವರು, ನಿರ್ಗತಿಕರು ಸಲ್ಲಿಸಿದ ನಿವೇಶನಕ್ಕೆ ಸಂಬಂಧಿಸಿದ ಅರ್ಜಿಗಳು ಹಾಗೇ ಬಿದ್ದಿವೆ. ಇದರ ಬಗ್ಗೆ ಮುಖ್ಯಮಂತ್ರಿಗಳು ತಲೆ ಕೆಡಿಸಿಕೊಳ್ಳುತ್ತಿಲ್ಲ. ಇದು ರಾಜ್ಯದ ಜನರ ಪ್ರಶ್ನೆ. ಅಭಿವೃದ್ಧಿ ಶೂನ್ಯ, ಲೂಟಿ ಹೊಡೆಯುವ ಸರಕಾರ ಇಲ್ಲಿದೆ. ಜನರು ಈ ಸರಕಾರ ಮತ್ತು ಸಿದ್ದರಾಮಯ್ಯ ಅವರಿಗೆ ಶಾಪ ಹಾಕುತ್ತಿದ್ದಾರೆ ಎಂದು ವಿಜಯೇಂದ್ರ ಅವರು ತಿಳಿಸಿದರು.

ಜನರಿಗೆ ನ್ಯಾಯ ದೊರಕಿಸಿಕೊಡುವ ನಿಟ್ಟಿನಲ್ಲಿ ಈ ಪಾದಯಾತ್ರೆ ಸಾಗುತ್ತಿದೆ ಎಂದು ಹೇಳಿದರು. ಡಿ.ಕೆ.ಶಿವಕುಮಾರ್ ಅವರು ಮಾತು ಈಗ ಪ್ರಸ್ತುತವಲ್ಲ; ರಾಜ್ಯದ ಜನರ ಪ್ರಶ್ನೆ ಈಗ ಪ್ರಸ್ತುತ. ಅಹಿಂದ ಸಮುದಾಯಗಳ ಹೆಸರು ಹೇಳಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಪಕ್ಷ ಮಾಡಿದ ವಂಚನೆ ಕುರಿತು ಜನರು ಪ್ರಶ್ನಿಸುತ್ತಿದ್ದಾರೆ ಎಂದು ವಿವರಿಸಿದರು. ಹಗಲುದರೋಡೆ ಬಗ್ಗೆ ಜನರು ಪ್ರಶ್ನೆ ಮುಂದಿಟ್ಟಿದ್ದಾರೆ; ಅದಕ್ಕೆ ಉತ್ತರಿಸಲಿ ಎಂದು ಆಗ್ರಹಿಸಿದರು.

ಕಾಂಗ್ರೆಸ್ಸಿಗೆ ಬೆದರಿಕೆ ಹಾಕಲು ನಾವ್ಯಾರು? 136 ಶಾಸಕರಿದ್ದಾರೆ. ಸರಕಾರದ ಅಸ್ಥಿರತೆ ಕುರಿತು ಮುಖ್ಯಮಂತ್ರಿಗಳಿಗೆ ಅನಿಸಿದ್ದರೆ ಎಲ್ಲೋ ಒಂದೆಡೆ ಅವರು ಸೋಲನ್ನು ಒಪ್ಪಿಕೊಂಡಿದ್ದಾರೆ. ಹಗರಣಗಳಲ್ಲಿ ಸರಕಾರ ಮುಳುಗಿದೆ. ತಾವೇನು ಮಾಡಬೇಕೆಂದು ತೋಚುತ್ತಿಲ್ಲ ಎಂದು ಸಿಎಂ ಅವರಿಗೆ ಮನವರಿಕೆ ಆಗಿದೆ. ನಾವು ಅವರನ್ನು ಬೆದರಿಸುವ ತಂತ್ರ ಮಾಡುತ್ತಿಲ್ಲ; ಒಂದು ಜವಾಬ್ದಾರಿಯುತ ವಿಪಕ್ಷವಾಗಿ ಈ ನಾಡಿನ ಜನತೆಗೆ ನ್ಯಾಯ ಕೊಡಿಸಲು ನಾವು ಮುಂದಾಗಿದ್ದೇವೆ ಎಂದು ಪ್ರಶ್ನೆಗೆ ಉತ್ತರ ಕೊಟ್ಟರು.

Share this Story:

Follow Webdunia kannada

ಮುಂದಿನ ಸುದ್ದಿ

ಐಎಎಸ್‌ ಕೋಚಿಂಗ್ ಸೆಂಟರ್ ದುರಂತ: ಸುಪ್ರೀಂ ಕೋರ್ಟ್‌ನಿಂದ ಸ್ವಯಂಪ್ರೇರಿತ ದೂರು ದಾಖಲು